ಸಕಲೇಶಪುರ: ಸಾರ್ವಜನಿಕರು ಸಂಚರಿಸುವ ದಾರಿಗೆ ಅಕ್ರಮವಾಗಿ ಗೇಟ್ ಆಳವಡಿಸಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಫಿ ಬೆಳೆಗಾರರ ವಿವಿಧ ಸಂಘಟನೆ ನೇತೃತ್ವದಲ್ಲಿ ಮಲೆನಾಡು ಮೂಲನಿವಾಸಿಗಳ ಒಕ್ಕೂಟದ ಸದಸ್ಯರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.

ಹಾನುಬಾಳ್ ಹೋಬಳಿ ಹೆಗ್ಗದ್ದೆ ಗ್ರಾಮದ ಸರ್ವೇನಂಬರ್ 340ರಲ್ಲಿ ಭೂಮಿ ಖರೀದಿಸಿರುವ ಬೆಂಗಳೂರು ಮೂಲದ ಅಜಯ್ ರೆಡ್ಡಿ ಎಂಬಾತ ನೂರಾರು ವರ್ಷಗಳು ಸಾರ್ವಜನಿಕರು ಹಾಗೂ ರೈಲ್ವೆ ಇಲಾಖೆ ವಾಹನಗಳು ಸಂಚರಿಸುತ್ತಿದ್ದ ರಸ್ತೆಗೆ ಗೇಟ್ ಆಳವಡಿಸಿ ತೊಂದರೆ ನೀಡುತ್ತಿದ್ದಾನೆ. ಈಗಾಗಲೇ ಈ ರಸ್ತೆಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಗೊಳಿಸಿದ್ದರೆ, ಹೆಗದ್ದೆ ಗ್ರಾಪಂನಿಂದ ಜಲ್ಲಿ ಹಾಕಲಾಗಿದೆ. ಅಲ್ಲದೆ ಗ್ರಾಮಸ್ಥರು ತಮ್ಮ ಕುಲದೇವರಿಗೆ ಹೋಗಲು ಇದೇ ರಸ್ತೆಯನ್ನು ಉಪಯೋಗಿಸಲಾಗುತ್ತಿದೆ. ಸರ್ವೇ ನಂಬರ್ 340ರಲ್ಲಿ ಇನ್ನೂ ಹಲವರ ಭೂಮಿ ಇದ್ದು ಇಂದಿಗೂ ಈ ಸರ್ವೇ ನಂಬರ್ ಪೋಡ್ ಮಾಡಲಾಗಿಲ್ಲ. ಆದರೂ ಈ ವ್ಯಕ್ತಿ ಜಮೀನಿನ ಆರಂಭದಲ್ಲಿ ಗೇಟ್ ಆಳವಡಿಸಿ ತೊಂದರೆ ನೀಡುತ್ತಿದ್ದಾನೆ. ಈ ಬಗ್ಗೆ ಗ್ರಾಮದ ಅಶೋಕ ಎಂಬುವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಆದರೂ ಗೇಟ್ ತೆರವುಗೊಳಿಸಿಲ್ಲ. ಪರಿಣಾಮ ನ್ಯಾಯಾಲಯ ನಿಂಧನೆಅಡಿ ಐವರ ವಿರುದ್ಧ ದೂರು ದಾಖಲಾಗಿದೆ. ಆದರೂ ಗೇಟ್ ತೆರವುಗೊಳಿಸದೆ ದರ್ಪ ತೊರಲಾಗುತ್ತಿದೆ.
ಆದ್ದರಿಂದ, ಕಂದಾಯ ಇಲಾಖೆ ಅಧಿಕಾರಿಗಳು ಈ ಕೂಡಲೇ ಗೇಟ್ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಧಕ್ಕೆ ತಂದಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿ ಮನವಿಯನ್ನು ಉಪ ತಹಸೀಲ್ದಾರ್ ಮೋಹನ್ ಕುಮಾರ್ ಅವರಿಗೆ ಸಲ್ಲಿಸಿದರು. ಅಲ್ಲದೆ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವ ಸರ್ವೇಯರ್‌ಅನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಫಿ ಬೆಳೆಗಾರರ ಸಂಘಟನೆಯ ಪ್ರಮುಖರಾದ ಹೆತ್ತೂರು ದೇವರಾಜ್, ಬೆಕ್ಕನಹಳ್ಳಿ ನಾಗರಾಜ್, ಕೃಷ್ಣಪ್ಪ, ಮಾಸವಳ್ಳಿ ಚಂದ್ರು, ಲೋಹಿತ್ ಕೌಡಳ್ಳಿ, ಸುರೇಂದ್ರ. ನರೇಶ್, ಮಹೇಶ್, ಶ್ರೀನಿಧಿ ಸೇರಿದಂತೆ ಹಲವರು ಬಾಗವಹಿಸಿದ್ದರು.