More

    ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

    ಮದ್ದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಗಳು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
    ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿದೆ. ತಕ್ಷಣ ಬರ ಪರಿಹಾರವನ್ನು ಮಂಜೂರು ಮಾಡಬೇಕು. ಉದ್ಯೋಗ ಖಾತರಿ ಕೆಲಸದ ದಿನಗಳನ್ನು ಹೆಚ್ಚು ಮಾಡಿ ಕೂಲಿಕಾರರಿಗೆ ಕೆಲಸ ನೀಡುವುದರ ಜತೆಗೆ ಬಾಕಿ ಹಣ ಬಿಡುಗಡೆ ಮಾಡಬೇಕು. ಕಾಯಕ ಬಂಧುಗಳ ಪ್ರೋತ್ಸಾಹಧನ ನೀಡಬೇಕು. ನರೇಗಾ ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಆರೋಗ್ಯ ಕಿಟ್‌ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

    ಸ್ಮಶಾನ ಇಲ್ಲದಿರುವ ಹಳ್ಳಿಗಳಿಗೆ ತಕ್ಷಣ ಸ್ಮಶಾನಗಳನ್ನು ಒದಗಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡಬೇಕು. ಬೇಸಿಗೆ ಸಮೀಪಿಸುತ್ತಿದ್ದು ಕುಡಿಯುವ ನೀರಿಗೆ ಸಮಸ್ಯೆ ಹೆಚ್ಚಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ ಮೇವಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದರು.

    ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಹನುಮೇಶ್ ಮಾತನಾಡಿ, ಬಡವರು ಬಳಸುವ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜೀವನ ನಡೆಸುವುದು ದುಸ್ತರವಾಗಿದೆ. ಉದ್ಯೋಗವಿಲ್ಲದೆ ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ಬಡವರು ಕನಿಷ್ಠ ಮಟ್ಟದ ಜೀವನ ನಡೆಸಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸರ್ಕಾರಗಳು ದಿನಬಳಕೆಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

    ಕೃಷಿ ಕೂಲಿಕಾರರಿಗೆ ಕಲ್ಯಾಣ ಮಂಡಳಿ ರಚಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನು ರಚಿಸಬೇಕು. ನರೇಗಾ ಯೋಜನೆ ಅಡಿ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ ದಿನಕ್ಕೆ 600 ರೂ. ಕೂಲಿ ನಿಗದಿ ಮಾಡಬೇಕು. ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡಬೇಕು. ಕೇಂದ್ರ ಸರ್ಕಾರ ರಾಜ್ಯದ ಜಿಎಸ್‌ಟಿ ಪಾಲನ್ನು ತಕ್ಷಣ ಬಿಡುಗಡೆ ಮಾಡಬೇಕು. ಸಂವಿಧಾನವನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕು. ಅಂಗನವಾಡಿ ಆಶಾ ಮತ್ತು ಬಿಸಿಯೂಟ ನೌಕರರನ್ನು ಕಾಯಂ ಮಾಡಿ ಕನಿಷ್ಠ 31,000 ರೂ. ವೇತನ ನೀಡಬೇಕು. ನಿವೃತ್ತಿಯ ನಂತರ ಅವರಿಗೆ ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

    ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ತಾಪಂ ಇಒ ಎನ್.ಸಂದೀಪ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ತಕ್ಷಣ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
    ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಸಂಚಾಲಕ ಸಿ.ಪ್ರದೀಪ್, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಟಿ.ಆರ್.ಸಿದ್ದೇಗೌಡ, ಕೂಲಿಕಾರ್ಯ ಸಂಘದ ಕಾರ್ಯದರ್ಶಿ ಬಿ.ಅನುಮೇಶ, ಮುಖಂಡರಾದ ಗೋಪಾಲಸ್ವಾಮಿ, ಪ್ರಣಿತಾ, ಶಿವಕುಮಾರ, ಮಲ್ಲಿಕಾ, ಜಯಮ್ಮ, ಪ್ರೇಮಾ, ಅನಿತಾ, ಮಮತಾ, ಮಂಜುಳಾ, ಶಿಲ್ಪಾ, ಜಯಶೀಲಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts