ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಲಾರಿ ಮಾಲೀಕರ ಹಾಗೂ ಸಾಗಾಣಿಕೆದಾರರ ಸಂಘ, ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ದಿನೇ ದಿನೇ ಏರಿಕೆಯಾಗುತ್ತಿರುವ ಡೀಸೆಲ್, ಪೆಟ್ರೋಲ್ ಬೆಲೆ 50 ರೂ. ಒಳಗೆ ತರುವುದು, ಸರಕು ಸಾಗಾಣಿಕೆಗೆ ಲಾರಿ ಬಾಡಿಗೆಯನ್ನು ಕಿಲೋಮೀಟರ್ ಪ್ರಕಾರ ನಿಗದಿ ಮಾಡಬೇಕು. ಹು-ಧಾ ಬೈಪಾಸ್ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ ರಹಿತ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಬೇಕು. 4 ವರ್ಷಗಳಿಂದ ಆಟೋಗಳ ಪ್ರಯಾಣ ದರ ಪುನರ್ ವಿಮಶಿಸಿಲ್ಲ. ಹೀಗಾಗಿ ಸಭೆ ಕರೆದು ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿ ವರ್ಷ ವಾಹನ ವಿಮೆ ಏರಿಕೆ ನಿಲ್ಲಿಸಬೇಕು. ಸರ್ಕಾರ ಟ್ರಕ್ ಟರ್ವಿುನಲ್ಗೆ ಮೀಸಲಿಟ್ಟ ಜಾಗದಲ್ಲಿ ಟರ್ವಿುನಲ್ ನಿರ್ವಿುಸಿ ಟ್ರಾನ್ಸ್ಪೋರ್ಟ್ಗಳಿಗೆ ಜಾಗ ಒದಗಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ನವೀಕರಣ (ಪಾಸಿಂಗ್) ಮಾಡಿಸದ ಆಟೋಗಳಿಗೆ ಯಾವುದೇ ದಂಡ ವಿಧಿಸಿದೆ 3 ತಿಂಗಳ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಆಟೋ ಮೀಟರ್ಗಳಿಗೆ ಹೆಚ್ಚಿನ ದಂಡ ವಿಧಿಸುವುದನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇಂದಿನ ದಿನಗಳಲ್ಲಿ ಸಾಗಣೆ ವಾಹನದ ಮೂಲಕ ಜೀವನ ಸಾಗಿಸುವುದೇ ದುಸ್ತರವಾಗಿದೆ. ಇಂತಹ ಸಮಯದಲ್ಲಿ ದುಬಾರಿ ದಂಡ ವಿಧಿಸುವುದನ್ನು ನಿಲ್ಲಿಸುವುದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಪಿ.ಎಚ್. ನೀರಲಕೇರಿ, ಗೈಬುಸಾಬ ಹೊನ್ಯಾಳ, ಗಂಗಾಧರ ಹೊಸಮನಿ, ಶಂಭುಕುಮಾರ ಸುಂಕದ, ಆರ್.ಎಸ್. ಪಠಾಣ, ಸುನೀಲ ಕಲಾಲ, ಐ.ಎಂ. ಜವಳಿ, ಬಿ.ಎ. ಮುಧೋಳ, ದೇವಾನಂದ ಜಗಾಪುರ, ಬಾಬಾಜಾನ ಮುಧೋಳ, ರಮೇಶ ಬೋಸ್ಲೆ, ಎ.ಎಸ್. ಪೀರಜಾದೆ, ಬಶೀರಹ್ಮದ ಮುಲ್ಲಾ, ಸುನೀಲ ಆಗಲಾವಿ, ಅಜೀಮ ಮೊಮೀನ, ಎಂ.ಎಂ. ಬೇಪಾರಿ, ಸುಲೇಮಾನ ಶೇಖ, ಚಂದ್ರಶೇಖರ ಬೆಟಗೇರಿ, ಲಕ್ಷ್ಮಣ ಬಕ್ಕಾಯಿ, ಇತರರು ಇದ್ದರು.