ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಪಟ್ಟಣದ ಜೀವ ವಿಮಾ ಕಚೇರಿ ಎದುರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಕೃಷ್ಣೆಗೌಡ ಮಾತನಾಡಿ, ಜೀವವಿಮಾ ಪ್ರತಿನಿಧಿಗಳಿಗೆ ನೀಡಲಾಗುತ್ತಿದ್ದ ಕಮಿಷನ್ ಕಡಿತಗೊಳಿಸಲಾಗಿದ್ದು ಅದನ್ನು ಹೆಚ್ಚಿಸಬೇಕು, ಈ ಹಿಂದಿನ ಆಯೋಗದ ದರಗಳನ್ನು ಮರುಸ್ಥಾಪಿಸಬೇಕು. ಪಾಲಿಸಿದಾರರ ಬೋನಸ್ ದರವನ್ನು ಏರಿಸಬೇಕು, 1 ಲಕ್ಷ ರೂ. ಮುಖಬೆಲೆಯ ಕನಿಷ್ಠ ವಿಮೆಯನ್ನು 2 ಲಕ್ಷಕ್ಕೆ ಏರಿಕೆ ಮಾಡಿರುವುದನ್ನು ಮೊದಲಿನಂತೆ ಮರುಸ್ಥಾಪಿಸಬೇಕು, ಪ್ರೀಮಿಯಂ ದರವನ್ನು ಕಡಿಮೆ ಮಾಡುವುದರ ಜತೆಗೆ ಜಿಎಸ್‌ಟಿಯನ್ನು ತೆಗೆದುಹಾಕಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ತಾಲೂಕು ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಗೊರವನಹಳ್ಳಿ ಕೃಷ್ಣೆಗೌಡ, ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಶಿವಲಿಂಗೆಗೌಡ, ಪದಾಧಿಕಾರಿಗಳಾದ ಧ್ರುವಕುಮಾರ್, ಬಸವರಾಜು, ಪುಟ್ಟಸ್ವಾಮಿಗೌಡ, ಪುಟ್ಟರಾಜು, ಚಿಕ್ಕತಮ್ಮಯ್ಯ, ನಾಗಪ್ಪ, ಕುಮಾರ್, ಸಿದ್ದೇಗೌಡ ಇತರರು ಇದ್ದರು.