ಜಿಲ್ಲಾ ಜೆಡಿಎಸ್ ವತಿಯಿಂದ ಪ್ರತಿಭಟನೆ

ಮಡಿಕೇರಿ: ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಹೇಳಿಕೆ ನೀಡುವ ಮೂಲಕ ದೇಶದ ಶಾಂತಿ ಕದಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನಗರದ ಗಾಂಧಿ ಮೈದಾನದ ಗಾಂಧಿಪ್ರತಿಮೆ ಎದುರು ಸೋಮವಾರ ಪ್ರತಿಭಟನೆ ಮಾಡಲಾಯಿತು.

ಗಾಂಧಿ ಮೈದಾನದಲ್ಲಿ ಜಮಾಯಿಸಿದ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆಎಂಬಿ ಗಣೇಶ್ ಮಾತನಾಡಿ, ಬಿಜೆಪಿ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿಕೆ ನೀಡುವ ಮೂಲಕ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರಪಿತ ಗಾಂಧಿಯನ್ನು ಹತ್ಯೆ ಮಾಡಿ ಕ್ರೌರ್ಯ ಮೆರೆದ ಗೋಡ್ಸೆಯ ಚಿಂತನೆ ಬಿಜೆಪಿ ಪಕ್ಷಕ್ಕಿದೆ. ರಾಜ್ಯದ ಸಂಸದ ನಳೀನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದರಿಗೆ ಅವರದೇ ಆದ ಕರ್ತವ್ಯ ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಹಾತ್ಮ ಗಾಂಧಿಯನ್ನು ಪಾಕಿಸ್ತಾನದ ರಾಷ್ಟ್ರಪಿತ ಎಂದು ಹೇಳುವ ಬಿಜೆಪಿಗರನ್ನು ಮೊದಲು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ವಿಶ್ವ, ಪ್ರಧಾನ ಕಾರ್ಯದರ್ಶಿ ಜಾಸೀರ್, ಜಿಲ್ಲಾ ಉಪಾಧ್ಯಕ್ಷ ಗೌತಮ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ನಾಗರಾಜ್, ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಸಾಖಾನ್, ಮುಖಂಡರಾದ ಪಾಣತ್ತಲೆ ವಿಶ್ವನಾಥ್, ರವಿಕಿರಣ್, ಗಣೇಶ್, ಮುತ್ತಪ್ಪ ಇತರರಿದ್ದರು.

Leave a Reply

Your email address will not be published. Required fields are marked *