ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಪ್ರತಿಭಟನೆ

ಚಾಮರಾಜನಗರ: ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ನೀಡಲು ಹೊರಟಿರುವ ಕ್ರಮವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಭುವನೇಶ್ವರಿ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಜಿಂದಾಲ್ ಕಂಪನಿಗೆ ಭೂಮಿ ನೀಡಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಖಾಸಗಿ ಕಂಪನಿಗೆ 3,667 ಎಕರೆ ಜಮೀನು ನೀಡುವ ಕೆಟ್ಟ ನಿರ್ಣಯವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿರುವುದು ದುರಂತ ಎಂದರು.

ರಾಜ್ಯದ ಸಂಪತ್ತನ್ನು ರಕ್ಷಿಸಬೇಕಾದ ಸರ್ಕಾರವೇ ಖನಿಜ ಸಂಪನ್ಮೂಲವಿರುವ ಇಷ್ಟೊಂದು ದೊಡ್ಡ ಪ್ರಮಾಣದ ಜಮೀನನ್ನು ಪರಭಾರೆ ಮಾಡಲು ಹೊರಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಲಕ್ಷಾಂತರ ರೂ. ಬೆಲೆ ಬಾಳುವ ಜಮೀನನ್ನು ಕಡಿಮೆ ಮೊತ್ತಕ್ಕೆ ನಿಗದಿ ಮಾಡಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವನ್ನುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸೇರಿ ಸಚಿವ ಸಂಪುಟದ ಸಚಿವರು ಕಳೆದ ಒಂದು ವರ್ಷದಿಂದಲೂ ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳದೆ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಒಂದು ವರ್ಷದಿಂದ ರೆಸಾರ್ಟ್‌ನಲ್ಲಿ ಕಾಲಹರಣ ಮಾಡಿ ಇದೀಗ ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ. ಸರ್ಕಾರ ರೈತರ ಯಾವುದೇ ಸಾಲ ಮನ್ನಾ ಮಾಡದೆ ವಂಚಿಸುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್, ನಗರಸಭೆ ಸದಸ್ಯರಾದ ಚಂದ್ರಶೇಖರ್, ಮನೋಜ್ ಪಟೇಲ್, ಮುಖಂಡರಾದ ಬಾಲಸುಬ್ರಹ್ಮಣ್ಯ, ಶಿವರುದ್ರ, ಆನಂದ್, ಕುಮಾರ್, ಮಹೇಶ್, ರುದ್ರೇಶ್, ಮಾಧ್ಯಮ ಪ್ರಮುಖ್ ವೀರೇಂದ್ರ ಇತರರಿದ್ದರು.

Leave a Reply

Your email address will not be published. Required fields are marked *