ಆನ್​ಲೈನ್​ನಲ್ಲಿ ಹಣ ವಂಚನೆ, ಹಣ ವಾಪಸ್ ಕೊಡಲು ಆಗ್ರಹ

ಬಾಳೆಹೊನ್ನೂರು: ಸಿಂಡಿಕೇಟ್ ಬ್ಯಾಂಕ್​ನಲ್ಲಿಟ್ಟಿದ್ದ ಹಣವನ್ನು ಆನ್​ಲೈನ್ ಮೂಲಕ ಎಗರಿಸಿದ್ದ ಪ್ರಕರಣದಲ್ಲಿ ಗ್ರಾಹಕನಿಗೆ ಜು.23ರೊಳಗೆ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಹಣ ಕಳೆದುಕೊಂಡ ಮುರುಗೇಶ್ ಪರವಾಗಿ ಗ್ರಾಮಸ್ಥರು, ಸ್ಥಳೀಯ ಮುಖಂಡರು ಕೊಪ್ಪ ತಾಲೂಕಿನ ಹೇರೂರು ಗ್ರಾಮದ ಎಲೆಮಡಲು ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ ಮಾತನಾಡಿ, ಹಣ ಕಳೆದುಕೊಂಡ ಗ್ರಾಹಕನಿಗೆ ಜು.23ರಂದು ಹಣ ವಾಪಸ್ ನೀಡದಿದ್ದರೆ ಜು.24ರಂದು ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸಮಯದಲ್ಲಿ ಬ್ಯಾಂಕ್​ನ ಹಣ ಡ್ರಾ ಆದಾಗ ಮೊಬೈಲ್​ಗೆ ಮೆಸೇಜ್ ತಲುಪುತ್ತಿಲ್ಲ. ಅಪರಿಚಿತರು ಆನ್​ಲೈನ್ ಮೂಲಕ ಖಾತೆಯಿಂದ ಹಣ ಡ್ರಾ ಮಾಡಿದರೆ ಅದಕ್ಕೆ ಜವಾಬ್ದಾರರು ಯಾರು? ಬ್ಯಾಂಕಿನ ವ್ಯವಸ್ಥಾಪಕರು ತಕ್ಷಣ ಗ್ರಾಹಕರಿಗೆ ಸಾಲ ಅಥವಾ ಒಡಿ ಮೂಲಕ ಹಣ ನೀಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ಪಾಪಾ ನಾಯ್ಕ ಮಾತನಾಡಿ, ಘಟನೆ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಂತಿಮವಾಗಿ ಮುರುಗೇಶ್ ಅವರು ಖಾತೆಯಿಂದ ಅಪರಿಚಿತರು ಹಣ ಡ್ರಾ ಮಾಡಿರುವ ಬಗ್ಗೆ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?: ಹೇರೂರು ಗ್ರಾಮದ ನಿಡುವಾನೆಯ ಮುರುಗೇಶ್ ಪ್ರತಿದಿನ ಕೂಲಿಯ ಹಣದಲ್ಲಿ ಸ್ವಲ್ಪ ಉಳಿಸಿ ಎಲೆಮಡಲು ಸಿಂಡಿಕೇಟ್ ಬ್ಯಾಂಕ್​ನಲ್ಲಿ 1,00,340 ರೂ. ಠೇವಣಿ ಇಟ್ಟಿದ್ದರು. ಅವರ ನಾದಿನಿಯ ಮದುವೆ ಸಿದ್ಧತೆಗಾಗಿ ಶುಕ್ರವಾರ ಸಂಬಂಧಿಯೊಬ್ಬರಿಗೆ 25 ಸಾವಿರ ರೂ.ಮೊತ್ತದ ಚೆಕ್ ನೀಡಿದ್ದರು. ಅವರು ಬ್ಯಾಂಕಿಗೆ ತೆರಳಿ ಚೆಕ್ ನೀಡಿದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಬೆಳಕಿಗೆ ಬಂದಿದೆ. ನಂತರ ಅವರ ಖಾತೆ ಪರಿಶೀಲಿಸಿದಾಗ ಜು.9ರಿಂದ 13ರೊಳಗೆ 1.00.333 ರೂ. ಆನ್​ಲೈನ್​ನಲ್ಲಿ ಕಳವು ಮಾಡಿರುವುದು ಗೊತ್ತಾಗಿದೆ.