ಟ್ರಾಯ್​ ನಿಯಮ ವಿರೋಧಿಸಿ ಪ್ರತಿಭಟನೆ: ಮೈಸೂರಿನಲ್ಲೂ ಟಿವಿಗಳು ಬಂದ್

ಮೈಸೂರು: ಮೈಸೂರು ನಗರದಲ್ಲೂ ಬಹುತೇಕ ಟಿವಿಗಳು ಬಂದ್ ಆಗಿವೆ.

ಟಿವಿ ಚಾನೆಲ್ ವೀಕ್ಷಣೆಗೆ ಹೊಸ ದರವನ್ನು ವಿಧಿಸಿರುವ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನಿಯಮ ವಿರೋಧಿಸಿ ಕೇಬಲ್ ಆಪರೇಟರ್ಸ್ ಕೈಗೊಂಡಿರುವ ಪ್ರತಿಭಟನೆಯ ಎಫೆಕ್ಟ್ ಇದು…!

ಇದರಿಂದ ನಗರದ ಟಿವಿ ಚಾನೆಲ್‌ಗಳ ಪ್ರಸಾರ ಸ್ಥಗಿತಗೊಂಡಿದ್ದು, ಬಹುತೇಕ ಟಿವಿಗಳು ಬಂದ್ ಆಗಿವೆ. ನಗರದ ಕೆಲ ಕಡೆ ಬೆಳಗ್ಗೆ 6ರಿಂದಲೇ ಟಿವಿ ಚಾನೆಲ್‌ಗಳ ಪ್ರಸಾರ ಸ್ತಬ್ಧಗೊಂಡಿದ್ದರೆ, ಇನ್ನು ಕೆಲ ಬೆಳಗ್ಗೆ 9ರಿಂದ ಟಿವಿಗಳು ನಿಸ್ತೇಜಗೊಂಡಿವೆ. 

ದಕ್ಷಿಣ ಭಾರತ ಕೇಬಲ್ ನಿರ್ವಾಹಕರ ಸಂಘಟನೆ ವತಿಯಿಂದ ಪ್ರಸಾರ ಸ್ಥಗಿತಕ್ಕೆ ಕರೆ ನೀಡಲಾಗಿದ್ದು, ಇದಕ್ಕೆ ಸ್ಥಳೀಯ ಕೇಬಲ್ ಆಪರೇಟರ್ ಕೂಡ ಬೆಂಬಲ ಸೂಚಿಸಿದ್ದಾರೆ.ಈ ಮೊದಲು ನಗರ ಪ್ರದೇಶದ ಗ್ರಾಹಕರು 300 ರೂ. ಮತ್ತು ಗ್ರಾಮೀಣ ಭಾಗದ ಗ್ರಾಹಕರು 150 ರೂ. ನೀಡಿ ಸುಮಾರು 400 ಚಾನೆಲ್‌ಗಳನ್ನು ನೋಡುವ ಅವಕಾಶವಿತ್ತು. ಇನ್ಮುಂದೆ ತಮ್ಮ ಆಸಕ್ತಿಯ ಚಾನೆಲ್‌ಗಳಿಗೆ ಪ್ರತ್ಯೇಕ ದರ ಪಾವತಿಸಬೇಕಾಗುತ್ತದೆ. ಜತೆಗೆ ಶೇ 18ರಷ್ಟು ಜಿಎಸ್‌ಟಿಯನ್ನೂ ಪಾವತಿಸಬೇಕಾಗುತ್ತದೆ. ಇದು ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಕೇಬಲ್ ನಿರ್ವಾಹಕರೊಬ್ಬರು ಹೇಳಿದರು.