More

  21ರಂದು ರಾಜ್ಯ, ಕೇಂದ್ರದ ವಿರುದ್ಧ ಪ್ರತಿಭಟನಾ ಸಭೆ

  ಮೈಸೂರು: ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕುವ ಜೊತೆಗೆ ಜನ ವಿರೋಧಿ ಕೃತ್ಯದಲ್ಲಿ ತೊಡಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜ.21ರಂದು ಪ್ರತಿಭಟನಾ ಸಭೆ ಆಯೋಜಿಸಲು ಸಂವಿಧಾನ ರಕ್ಷಣಾ ಸಮಿತಿ ನಿರ್ಣಯಿಸಿದೆ.

  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಕುವೆಂಪು ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಚಳವಳಿಗಳ ಮೊಟಕು ಕುರಿತ ದುಂಡುಮೇಜಿನ ಸಭೆಯಲ್ಲಿ ಜಿಲ್ಲೆಯ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಂಘಟನೆಗಳು ಒಗ್ಗೂಡಿ ಸಂವಿಧಾನ ರಕ್ಷಣಾ ಸಮಿತಿ ಅಡಿಯಲ್ಲಿ ಪುರಭವನದ ಆವರಣದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

  ಮೈಸೂರು ವಿಶ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ವಿದ್ಯಾರ್ಥಿಗಳ ಮೇಲೆ ದೇಶ ವಿರೋಧಿ ಪ್ರಕರಣ ದಾಖಲಿಸಿರುವುದನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕುಲಪತಿ, ಪೊಲೀಸ್ ಕಮಿಷನರ್‌ರನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಹೋರಾಟದ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ಮನವಿ ಸಲ್ಲಿಸುವುದು, ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಯಾವುದೇ ಭಯ ಪಡಬೇಡಿ ಎಂದು ಮನವಿ ಮಾಡುವುದು, ಗಂಗೋತ್ರಿ ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

  ಕನ್ನಡ ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ, ದೇಶದಲ್ಲಿ ಇಂದು ಆರ್‌ಎಸ್‌ಎಸ್ ಸರ್ಕಾರವಿದ್ದು, ಅವರೇ ಮೋದಿಗೆ ನಾಯಕರು. ಇಂತಹ ದೊಡ್ಡ ದೇಶದಲ್ಲಿ ಪ್ರತಿಪಕ್ಷಗಳೆ ಇಲ್ಲದಂತೆ ಆಗಿದೆ. ಹೀಗಾಗಿ ಸಮಾನ ಮನಸ್ಕರೆ ಒಂದಾಗಿ ಹೋರಾಟ ರೂಪಿಸುವ ಅವಕಶ್ಯತೆ ಇದೆ ಎಂದರು.
  ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ನಮ್ಮದು ಸರ್ವಜನಾಂಗ ಶಾಂತಿಯ ತೋಟ. ಇಲ್ಲಿ ಎಲ್ಲ ಧರ್ಮದವರು ಒಟ್ಟಾಗಿದ್ದೇವೆ. ಮಂಗಳೂರಲ್ಲಿ ಬೆಂಕಿ ಹಚ್ಚಿದ್ದು ಸಾಲದು ಎಂದು ಯೇಸು ಪ್ರತಿಮೆ ಮಾಡುವುದನ್ನು ವಿರೋಧಿಸಿ ಕಲ್ಲಡ್ಕ ಪ್ರಭಾಕರ್ ಭಟ್, ಕನಕಪುರಕ್ಕೆ ಬಂದು ಅಲ್ಲಿನ ನಾಗರೀಕರ ಭಾವನೆಗಳನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದರು.

  ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮೈಸೂರು ವಿವಿ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಪ್ರತಿಭಟನೆ ನಡೆಸಲು ವಿವಿಯ ಅನುಮತಿ ಪಡೆಯಬೇಕು ಎಂದು ನೋಟಿಸ್ ನೀಡಿರುವುದು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿರು. ಪ್ರಗತಿಪರ ಚಿಂತಕ ಪ್ರೊ.ಶಬೀರ್ ಮುಸ್ತಫಾ, ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ(ಜನ್ನಿ), ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಗೋಪಾಲಕೃಷ್ಣ, ರಾಜೇಂದ್ರ, ಲಕ್ಷ್ಮೀನಾರಾಯಣ, ಶಾಂತರಾಜು, ಆಲಗೂಡು ಶಿವಕುಮಾರ್, ಬಸವರಾಜು ಇನ್ನಿತರರು ಇದ್ದರು.
   

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts