
ನಂಜನಗೂಡು: ನಾಲಾ ಏರಿಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ ರೈತರು ತಾಲೂಕು ಆಡಳಿತ ಹಾಗೂ, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ತಾಲೂಕಿನಲ್ಲಿ ಗಣಿ ಮಾಫಿಯಾಗಳು ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿವೆ. ನಾಲಾ ಏರಿಗಳನ್ನು ಅಗೆಯುವುದರಿಂದ ನಾಲೆಗಳು ಒಡೆದು ಹೋಗುತ್ತವೆ. ಹೀಗಿದ್ದರೂ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ ವಹಿಸುತ್ತಿವೆ. ತಾಲೂಕಿನ ಕಬಿನಿ ಬಲದಂಡೆ, ನುಗು ಬಲದಂಡೆಗಳ ವ್ಯಾಪ್ತಿಯ ಅಳಗಂಚಿಪುರ, ಅಳಗಂಚಿ, ಹರತಲೆ, ಶಿರಮಳ್ಳಿ, ಹೆಗ್ಗಡಹಳ್ಳಿ, ಮೊಬ್ಬಳ್ಳಿ, ಕಾಳಿಹುಂಡಿ, ಸಿಂಧುವಳ್ಳಿ ಸಮೀಪದಲ್ಲಿರುವ ನಾಲಾ ಏರಿಗಳಲ್ಲಿ ಜೆಸಿಬಿ, ಟಿಪ್ಪರ್, ಟ್ರಾೃಕ್ಟರ್‌ಗಳ ಮೂಲಕ ಪ್ರತಿನಿತ್ಯ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ. ಅಕ್ರಮವಾಗಿ ಮಣ್ಣು ಸಾಗಾಟ ಮಾಡುವುದರಿಂದ ಓಡಾಡುವ ರಸ್ತೆಗಳು ಸೇರಿದಂತೆ ಏರಿಗಳು ಒಡೆದು ಹೋಗುವ ಆತಂಕ ಎದುರಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಸಿಂಧುವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತಡೆಯಲು ಹೋದ ಸಂದರ್ಭದಲ್ಲಿ ರೈತರ ಮೇಲೆ ಟಿಪ್ಪರ್ ಡ್ರೈವರ್‌ಗಳು ಹಲ್ಲೆಗೆ ಪ್ರಯತ್ನಪಟ್ಟರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ನೀರಾವರಿ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿತ್ತು. ಆದರೂ ಇದುವರೆಗೂ ನೀರಾವರಿ ಇಲಾಖೆ ಅಧಿಕಾರಿಗಳು ದೂರು ದಾಖಲು ಮಾಡಲು ವಿಫಲರಾಗಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ರಾಜು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಂಧವಳ್ಳಿ ಮಹದೇವ ನಾಯಕ, ಶ್ವೇತಾ, ರಂಗಸ್ವಾಮಿ ನಾಯಕ, ಗೋವಿಂದ, ಕತ್ತವಾಡಿಪುರ ಶಿವಣ್ಣ, ಶಂಕರ ನಾಯಕ, ಮಾದೇಗೌಡ, ಮಹದೇವ ನಾಯಕ ಸೇರಿದಂತೆ ಮತ್ತಿತರರು ಹಾಜರಿದ್ದರು.