ಗ್ರಾಮ ಲೆಕ್ಕಾಧಿಕಾರಿ ಕೊಲೆ ಖಂಡಿಸಿ ಪ್ರತಿಭಟನೆ

ಚಾಮರಾಜನಗರ: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮ ಲೆಕ್ಕಾಧಿಕಾರಿಯನ್ನು ಟಿಪ್ಪರ್ ಹರಿಸಿ ಕೊಲೆ ಮಾಡಿರುವುದನ್ನು ಖಂಡಿಸಿ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಗ್ರಾಮಲೆಕ್ಕಾಧಿಕಾರಿಯನ್ನು ಕೊಲೆ ಮಾಡಿರುವವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಡಿ.22ರಂದು ಚೀಕಲಪರ್ವಿ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರು ಕರ್ತವ್ಯ ನಿರತರಾಗಿದ್ದ ವೇಳೆ ಅಕ್ರಮ ಮರಳು ತುಂಬಿದ ಟಿಪ್ಪರ್ ಅನ್ನು ತಡೆದು ಪರಿಶೀಲಿಸಲು ಮುಂದಾದಾಗ ಟಿಪ್ಪರ್‌ನ ಚಾಲಕ ಲಾರಿಯನ್ನು ಏಕಾಏಕಿ ಸಾಹೇಬ್ ಪಟೇಲ್‌ರ ಮೇಲೆ ಹರಿಸಿದ್ದಾನೆ.

ಪರಿಣಾಮ ಸಾಹೇಬ್ ಪಟೇಲ್‌ರ ಎರಡು ಕಾಲುಗಳು ನಜ್ಜುಗುಜ್ಜಾಗಿ ರಕ್ತಸ್ರಾವದಿಂದ ನರಳಾಡುತ್ತಿದ್ದು, ಸ್ಥಳೀಯರ ಸಹಕಾರದಿಂದ ಅವರನ್ನು ರಾಯಚೂರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆದ್ದರಿಂದ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಾಹೇಬ್ ಪಟೇಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮೃತ ಸಾಹೇಬ್ ಪಟೇಲ್ ಅವರ ಮಕ್ಕಳ ವಿದ್ಯಾಭ್ಯಾಸದ ಜವಾಬ್ಧಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಟಿಪ್ಪರ್ ಮಾಲೀಕರು ಹಾಗೂ ಮರಳು ಬ್ಲಾಕ್ ಟೆಂಡರ್ ಪಡೆದವರ ಮೇಲೆ ಐಪಿಸಿ 353ರ ಅಡಿ ಎಫ್‌ಐಆರ್ ದಾಖಲಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳ ಜೀವಕ್ಕೆ ಭದ್ರತೆ ಇಲ್ಲದ ಅಕ್ರಮ ಮರಳು ತಡೆ, ಅಕ್ರಮ ಮೇವು ಸಾಗಾಟ ತಡೆ, ರಾತ್ರಿ ಪಾಳಿಯಲ್ಲಿ ಟೋಲ್ ಗೇಟ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದು, ಅಕ್ರಮ ಗಣಿಗಾರಿಕೆ ಕೆಲಸಗಳಿಗೆ ನಿಯೋಜಿಸದಂತೆ ಸರ್ಕಾರ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ಶಂಕರ್‌ರಾವ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ರಾಚಪ್ಪ, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ನಂಜೇಗೌಡ, ರಾಜ್ಯ ಗ್ರಾಮಲೆಕ್ಕಿಕರ ಕೇಂದ್ರ ಸಂಘದ ಅಧ್ಯಕ್ಷ ರಾಜಕುಮಾರ, ತಾಲ್ಲೂಕು ಅಧ್ಯಕ್ಷರಾದ ಮಹೇಶ್, ನಟೇಶ್, ನಾಗೇಂದ್ರ, ಸತೀಶ್, ರೇವಣ್ಣ, ರಾಮಸ್ವಾಮಿ, ರಾಚಯ್ಯ, ರಾಮಸ್ವಾಮಿ, ಲಿಂಗರಾಜ ಇತರರಿದ್ದರು.