More

  ಸಂಸದ ಅನಂತ್‌ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ

  ಮೈಸೂರು: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ ಅನಂತ್‌ಕುಮಾರ್ ಹೆಗಡೆ ವಿರುದ್ಧ ಕರ್ನಾಟಕ ರಾಜ್ಯ ಸಂಶೋಧಕರ ವೇದಿಕೆ ವತಿಯಿಂದ ಮಾನಸಗಂಗೋತ್ರಿಯ ಗಡಿಯಾರ ಗೋಪುರದ ಎದುರು ಗುರುವಾರ ಪ್ರತಿಭಟನೆ ನಡೆಯಿತು.


  ಇತ್ತೀಚೆಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಹಾಗೂ ತಿದ್ದುಪಡಿ ಮಾಡಬಹುದು ಎಂಬ ಅವರ ಹೇಳಿಕೆಯನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.


  ವೇದಿಕೆ ಅಧ್ಯಕ್ಷ ರಾಜೇಶ್ ಚಾಕನಹಳ್ಳಿ ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಳು, ಮನುವಾದಿಗಳು ಅನಾದಿ ಕಾಲದಿಂದಲೂ ಶೂದ್ರರನ್ನು ಶೋಷಣೆ ಮಾಡಿ ಆಳ್ವಿಕೆ ಮಾಡುತ್ತಲೇ ಬಂದಿದ್ದಾರೆ. ಡಾ.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಎಲ್ಲ ಪ್ರಜೆಗಳಿಗೂ ಸಮಾನತೆಯ ಹಕ್ಕು ಸಿಕ್ಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುವಾದಿಗಳು ತಮ್ಮ ಅಸ್ತಿತ್ವಕ್ಕಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆ ನೀಡುತ್ತಿರುವುದು ಖೇದಕರ ಸಂಗತಿ ಎಂದು ಕಿಡಿಕಾರಿದರು.


  ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮನುವಾದಿಯಾದ ಅವರು ಪ್ರಜ್ಞೆ ಇಲ್ಲದೆ ಹಲವು ಬಾರಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬಂತಹ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ತಕ್ಷಣ ಇವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


  ಸಂಶೋಧಕ ಲಿಂಗರಾಜು ಮಾತನಾಡಿ, ಭಾರತದ ಸಂವಿಧಾನ ರಾಷ್ಟ್ರ ಗ್ರಂಥ. ಇದನ್ನು ಯಾರೇ ವಿರೋಧಿಸಿದರು ಅದು ಅಕ್ಷಮ್ಯ ಅಪರಾಧ. ಆದ್ದರಿಂದ ಸಂಸದರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.


  ಸಂಶೋಧಕ ವರಹಳ್ಳಿ ಆನಂದ್ ಮಾತನಾಡಿ, ಹೆಗಡೆ ಅವರ ಹಿಂದುತ್ವದ ಮಂತ್ರಸಾರದ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.


  ವೇದಿಕೆ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಕಾರ್ಯದರ್ಶಿ ಪಾರ್ಥ, ಸಂಶೋಧಕರಾದ ಸಂಜಯ್ ಕುಮಾರ್, ಕುಶಾಲ್, ಜಗದೀಶ್ ಮಹದೇವಯ್ಯ, ರಂಗಸ್ವಾಮಿ, ಮಲ್ಲೇಶ್, ಸುರೇಶ್, ಪ್ರತಾಪ್ ನಟರಾಜ್ ಬೊಮ್ಮಲಪುರ, ರಾಜೇಶ್ ಶಿವ, ನವೀನ್ ಜೀವಿ, ಪ್ರಸನ್ನ ಮಹದೇವ, ಹನುಮಂತಪ್ಪ, ಶಿವು ಹೊಸಳ್ಳಿ, ಶಿವು ಬಂಡಳ್ಳಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಚಿನ್, ಗೋಪಾಲ್ ಮುಂತಾದ ಹಲವಾರು ಸಂಶೋಧಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts