ರಸ್ತೆಗೆ ಹಾಲು ಸುರಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಮಂಡ್ಯ: ಮನ್‌ಮುಲ್ ಹಿಂದಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ನೀಡಿದ್ದ ಆದೇಶಕ್ಕೆ ತಡೆ ನೀಡಿರುವುದನ್ನು ಖಂಡಿಸಿ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರು ತಾಲೂಕು ಗೆಜ್ಜಲಗೆರೆ ಮನ್‌ಮುಲ್ ಕಚೇರಿ ಎದುರು ರೈತರು ಹಾಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಂಚಾರ ಬಂದ್ ಮಾಡಿ, ಬಹುಕೋಟಿ ಹಗರಣ ನಡೆದಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಹಿಂದಿನ ಆಡಳಿತ ಮಂಡಳಿಯನ್ನು ಮೈತ್ರಿ ಸರ್ಕಾರ ವಜಾಗೊಳಿಸಿತ್ತು. ಜತೆಗೆ ಒಂದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿತ್ತು.

ಆದರೆ, ಈಗ ಈ ಆದೇಶಕ್ಕೆ ಸಹಕಾರ ಸಂಘದ ಹಿರಿಯ ಅಧಿಕಾರಿಯೊಬ್ಬರು ತಡೆ ನೀಡಿದ್ದಾರೆ. ಸರ್ಕಾರದ ಗಮನಕ್ಕೆ ಬಾರದಂತೆ ಆದೇಶ ಹೊರಡಿಸಿರುವ ಅನುಮಾನವಿದೆ. ಹೊಸ ಆದೇಶದಿಂದ ವಜಾಗೊಂಡಿದ್ದ ನಿರ್ದೇಶಕರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.

ಹಿಂದಿನ ಆಡಳಿತ ಮಂಡಳಿ ದುರಾಡಳಿತದಿಂದಾಗಿ ಮನ್‌ಮುಲ್ ನಷ್ಟದ ಹಾದಿಯಲ್ಲಿದೆ. ಸೆಪ್ಟಂಬರ್‌ನಲ್ಲಿ ಚುನಾವಣೆ ಇದ್ದು, ಮತ್ತೆ ಇಂತಹ ವ್ಯಕ್ತಿಗಳೇ ಅಧಿಕಾರಕ್ಕೆ ಬಂದರೆ ಮನ್‌ಮುಲ್ ಬಾಗಿಲು ಮುಚ್ಚುವುದರಲ್ಲಿ ಅನುಮಾನವಿಲ್ಲ.

ಆದ್ದರಿಂದ ಹಿಂದಿನ ಸರ್ಕಾರದ ಆದೇಶ ಮುಂದುವರಿಸಬೇಕು. ಈವರೆಗೆ ನಡೆದಿರುವ ಹಗರಣದ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಎಸ್.ಸಿ.ಮಧುಚಂದನ್, ಕಾರ್ಯದರ್ಶಿ ಕಾರಸವಾಡಿ ಮಹದೇವು, ಸಮಿತಿ ಗೌರವ ಸಲಹೆಗಾರ ಎಚ್.ಕೆ.ಕೃಷ್ಣೇಗೌಡ, ಉಪಾಧ್ಯಕ್ಷರಾದ ತಂಗಳಗೆರೆ ಶಿವಲಿಂಗಯ್ಯ, ಎಂ.ಎಲ್.ದೊಡ್ಡಿ ಲಕ್ಷ್ಮೀನಾರಾಯಣ, ಎಚ್.ಕೋಡಿಹಳ್ಳಿ ವರಲಕ್ಷ್ಮೀ, ಉಪ್ಪಾರಕನಹಳ್ಳಿ ಸುಧಾ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *