ಮಂಡ್ಯ: ರಾಯಚೂರು ವಿದ್ಯಾರ್ಥಿನಿ ಮಧು ಪತ್ತಾರಳ ಬರ್ಬರ ಹತ್ಯೆ ಖಂಡಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿ.ಎಸ್. 4) ಕಾರ್ಯಕರ್ತರು ನಗರದಲ್ಲಿ ಮೌನ ಪ್ರತಿಭಟನೆ ಮಾಡಿದರು.
ನಗರದ ಕಾವೇರಿ ಭವನದ ಬಳಿ ಮೌನ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ ಪ್ರತಿಭಟನಾರರು, ರಾಜ್ಯದಲ್ಲಿ ಕೊಲೆಪಾತಕಿಗಳು, ಅತ್ಯಾಚಾರಿಗಳು, ಆಸ್ತಿ ಲೂಟಿಕೋರರು, ಗುಂಡಾಗಳು ತಲೆಯೆತ್ತಿ ಮೆರೆದಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಿದೆ. ಅತ್ಯಾಚಾರಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಶ್ರೀಲಂಕಾದ ಕೊಲಂಬೋದಲ್ಲಿನ ಚರ್ಚ್, ಹೋಟೆಲ್ ಗಳ ಮೇಲೆ ಮುಸ್ಲಿಂ ಉಗ್ರರು ಸರಣಿ ಬಾಂಬ್ ಸ್ಪೋಟಿಸಿ ನೂರಾರ ಜನರ ಹತ್ಯಾಕಾಂಡ ನಡೆಸಿರುವುದು ಖಂಡನೀಯ, ವಿಶ್ವಸಂಸ್ಥೆ ಉಗ್ರರ ದಮನಕ್ಕೆ ದಿಟ್ಟ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಶಿವರಾಜ್ ಮರಳಿಗ, ಚನ್ನಕೇಶವ, ಆನಂದ, ನಟೇಶ್, ಮ್ಯಾನಾಗ್ರ ಸೋಮಶೇಖರ್, ವೀರಭದ್ರಪ್ಪ ನೇತೃತ್ವ ವಹಿಸಿದ್ದರು.