ಅಕ್ರಮ ಮದ್ಯ ಮಾರಾಟ ತಡೆಗೆ ಪ್ರತಿಭಟನೆ

ರೋಣ: ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಸಾರಾಯಿ ಮಾರಾಟ ತಡೆಯಲು ಆಗ್ರಹಿಸಿ ಗ್ರಾಮದ ಮಹಿಳೆಯರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಎಸ್.ಸಿ. ನದಾಫ್​ಗೆ ಬುಧವಾರ ಮನವಿ ಸಲ್ಲಿಸಿದರು.

ಈ ವೇಳೆ ನೀಲಮ್ಮ ನಾಯ್ಕರ ಮಾತನಾಡಿ, ‘ನಮ್ಮ ಗ್ರಾಮದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಸಾರಾಯಿ ಕುಡಿತದಿಂದ ಗ್ರಾಮದಲ್ಲಿ ಸಾರ್ವಜನಿಕರಿಗೆ, ಕೂಲಿ ಕಾರ್ವಿುಕರಿಗೆ ಬಹಳ ತೊಂದರೆಯಾಗುತ್ತಿದೆ. ಹುಲ್ಲೂರ ಗ್ರಾಮದಲ್ಲಿ ಸುಮಾರು 10 ರಿಂದ 12 ಅನಧಿಕೃತ ಸಾರಾಯಿ ಅಂಗಡಿಗಳಿವೆ. ಗ್ರಾಮದ ಕಿರಾಣಿ ಅಂಗಡಿ, ಚಹಾದ ಅಂಗಡಿ, ಗೂಡಂಗಡಿಗಳಲ್ಲಿ, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಮುಂದೆ ಸಾರಾಯಿ ಬಾಟಲಿ ಇಟ್ಟು ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಮದ್ಯ ಸೇವನೆ ಚಟಕ್ಕೆ ಅಂಟಿಕೊಂಡಿರುವುದರಿಂದ ಬಡವರು ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ನೋವು ತೋಡಿಕೊಂಡರು. ಒಂದು ವಾರದೊಳಗಾಗಿ ಸೂಕ್ತ ಕ್ರಮ ಜರುಗಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಮದ ಮಹಿಳೆಯರು ಆಮರಣ ಉಪವಾಸ ಹೋರಾಟ ಕೈಗೊಳ್ಳುತ್ತೇವೆ’ ಎಂದರು. ಹೊಳೆಆಲೂರ ಜಿಪಂ ಸದಸ್ಯ ಪಡಿಯಪ್ಪ ಪೂಜಾರ, ಈರಮ್ಮ ದಾನಪ್ಪಗೌಡ್ರ, ಬಸಮ್ಮ ನಾಯ್ಕರ, ಯಲ್ಲವ್ವ ಮಾದರ, ಲಕ್ಷ್ಮವ್ವ ಪೂಜಾರ, ಬಸವ್ವ ಕಟ್ಟಿಮನಿ, ಲಕ್ಷ್ಮವ್ವ ಹಾದಿಮನಿ, ಇತರರಿದ್ದರು.