ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಅಂಬ್ಲಮೊಗರು ಗ್ರಾಮದಲ್ಲಿ ನೂರಾರು ಎಕರೆ ಭೂಮಿ ನವಭೂಮಾಲೀಕರು ವಶಪಡಿಸಿಕೊಳ್ಳುತ್ತಿರುವ ವಿರುದ್ಧ, ಪಂಚಾಯಿತಿಯಿಂದ ನಿರ್ಮಿಸಲ್ಪಟ್ಟಿದ್ದ 1.40 ಕೋಟಿ ರೂ.ವೆಚ್ಚದ ಪ್ರಮುಖ ರಸ್ತೆ ಕಡಿತ ಮಾಡಿರುವುದರ ವಿರುದ್ಧ ಹಾಗೂ ಸರ್ಕಾರಿ ಭೂಮಿಗಳನ್ನು ಅತಿಕ್ರಮಿಸಿಕೊಂಡಿರುವುದನ್ನು ಖಂಡಿಸಿ ಅಂಬ್ಲಮೊಗರು ಗ್ರಾಮದ ಕ್ರಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಾಟೆಕಲ್‌ನಲ್ಲಿರುವ ಉಳ್ಳಾಲ ತಾಲೂಕು ಕಚೇರಿಯೆದುರು ಧರಣಿ ಸತ್ಯಾಗ್ರಹ ನಡೆಯಿತು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು ಧರಣಿ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಭೂಮಿ, ಆಸ್ತಿ ರಕ್ಷಣೆ ಮಾಡಬೇಕಾದ ತಾಲೂಕು ಆಡಳಿತ ಇತರರಿಗೆ ಲೂಟಿಗೈಯ್ಯಲು ಅವಕಾಶ ನೀಡಿರುವುದು ಮಹಾಪರಾಧ. ತಹಸೀಲ್ದಾರ್‌ರ ಪಾತ್ರವನ್ನೇ ಪ್ರಶ್ನಿಸಬೇಕಾಗಿದೆ. ಗ್ರಾಮಸ್ಥರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಹಿಸದೆ ಮೌನವಹಿಸಿರುವ ಪಂಚಾಯಿತಿ ಮತ್ತು ತಾಲೂಕು ಆಡಳಿತದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಕಾನೂನು ಸಮರಕ್ಕೆ ಸಜ್ಜಾಗಬೇಕಾಗಿದೆ ಎಂದು ತಿಳಿಸಿದರು.
ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ನಾಯಕರಾದ ರಫೀಕ್ ಹರೇಕಳ, ಜಯಂತ ನಾಯಕ್ ಮಾತನಾಡಿದರು.
ತಹಸೀಲ್ದಾರ್ ಆಗಮಿಸದ ಹಿನ್ನೆಲೆಯಲ್ಲಿ ಕಚೇರಿಯೊಳಗೆ ಧರಣಿ ನಡೆಸಿದ ತಹಸೀಲ್ದಾರ್ ಬರುವವರೆಗೆ ಇಲ್ಲಿಂದ ಏಳುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ತಹಸೀಲ್ದಾರ್ ಪುಟ್ಟರಾಜು ಆಗಮಿಸಿದ್ದು, ಕಡಿತ ಮಾಡಿದ ಪ್ರಮುಖ ರಸ್ತೆ ಕಾರ್ಯ ಕೂಡಲೇ ನಿಲ್ಲಿಸುವುದಾಗಿ ಹಾಗೂ ಮೇ 30ರಂದು ಸಮಾಲೋಚನಾ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ನಾಯಕರಾದ ಶೇಖರ್ ಕುಂದರ್, ರಿಝ್ವನ್ ಹರೇಕಳ, ರಝಾಕ್ ಮೊಂಟೆಪದವು, ಸುಂದರ ಕುಂಪಲ, ರಝಾಕ್ ಮುಡಿಪು, ಸಾಮಾಜಿಕ ಹೋರಾಟಗಾರ ಅಬೂಬಕ್ಕರ್ ಜೆಲ್ಲಿ, ಇಬ್ರಾಹಿಂ ಮದಕ, ಸುಂದರ ಅಂಬ್ಲಮೊಗರು, ಶಾಲಿನಿ ಪೂಜಾರಿ, ಕಮರುನ್ನೀಸಾ, ಯಶೋದಾ, ಭಾರತಿ, ಪುಷ್ಪಾ, ಜಮೀಲಾ, ರಫೀಕ್, ಉಮೇಶ್, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.
ಕೆಲವು ವರ್ಷಗಳಿಂದ ಕೃಷಿಭೂಮಿ ಸಂರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟ ನಗಣ್ಯವಾಗಿ ಕಾಣುತ್ತಿರುವ ಅಂಬ್ಲಮೊಗರು ಗ್ರಾಪಂ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಸ್ಥಳೀಯ ಗ್ರಾಮಸ್ಥರು ಭೂಮಿಯೊಂದಿಗೆ ನಡೆದಾಡಲು ರಸ್ತೆಯಿಲ್ಲದೆ, ಕುಡಿಯಲು ನೀರಿಲ್ಲದೆ, ದಾರಿದೀಪವಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ತಮ್ಮ ಕೈವಶದಲ್ಲಿರುವ ಭೂಮಿಗಳ ಸುತ್ತ ತಡೆಗೋಡೆ ನಿರ್ಮಿಸಿಕೊಂಡ ನವಭೂಮಾಲೀಕರು ಸ್ಥಳೀಯರ ಭಾವನೆಗಳಿಗೆ ಗೌರವ ನೀಡದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಖಂಡನೀಯ. ಇಂತಹ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಇನ್ನಷ್ಟು ಪ್ರಬಲ ಚಳುವಳಿ ರೂಪಿಸಲು ಜನತೆ ಸರ್ವ ಸನ್ನದ್ಧರಾಗಬೇಕಾಗಿದೆ.
ಸುನೀಲ್ ಕುಮಾರ್ ಬಜಾಲ್
ಕಾರ್ಯದರ್ಶಿ, ಸಿಪಿಐಎಂ ಉಳ್ಳಾಲ ವಲಯ