ಕಲಾವಿದೆ ಅಂತ್ಯಕ್ರಿಯೆ ಜಾಗಕ್ಕೆ ಪರದಾಟ

ಮೈಸೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ, ಏಕಲವ್ಯನಗರದ ನಿವಾಸಿ, ಶತಾಯುಷಿ ಮುನಿಯಮ್ಮ (100) ಮಂಗಳವಾರ ಬೆಳಗ್ಗೆ ನಿಧನರಾದರು. ಇವರ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬ ವರ್ಗದವರು ಪರದಾಡಿದರು. ಇದರಿಂದ ತೀವ್ರ ಆಕ್ರೋಶಗೊ ಂಡ ಸ್ಥಳೀಯ ನಿವಾಸಿಗಳು ಶವವಿಟ್ಟು ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸಿದರು.

ಬಡಾವಣೆಗೆ ಸ್ಮಶಾನ ಮಂಜೂರು ಮಾಡುವಂತೆ ಸ್ಥಳೀಯ ನಿವಾಸಿಗಳು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ, ಯಾರು ಇದರ ಬಗ್ಗೆ ಕಿವಿಗೊಡಲಿಲ್ಲ. ಈ ಹಿಂದೆ ಸ್ಮಶಾನಕ್ಕೆ ಮಂಜೂರು ಮಾಡಿದ 1.11 ಎಕರೆ ಜಾಗ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.

ಪ್ರತಿಭಟನೆ: ಸ್ಮಶಾನಕ್ಕೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಮೃತದೇಹವನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸಲು ಸಾಗಿದಾಗ ಮೇಟಗಳ್ಳಿ ಪೊಲೀಸರು ತಡೆದರು. ನಂತರ ಏಕಲವ್ಯನಗರದಲ್ಲಿ ಗುರುತಿಸಲಾಗಿರುವ ಸ್ಮಶಾನ ಜಾಗದಲ್ಲಿ ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಶವ ಇಟ್ಟು ಪ್ರತಿಭಟನೆ ನಡೆಸಿದರು.

ಹಿರಿಯ ಕಲಾವಿದರು ಮೃತಪಟ್ಟಾಗ ಸರ್ಕಾರವೇ ಮುಂದೆ ನಿಂತು ಅವರ ಅಂತ್ಯ ಸಂಸ್ಕಾರ ನಡೆಸುತ್ತದೆ. ಆದರೆ, ಮುನಿಯಮ್ಮ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ನಿರ್ಲಕ್ಷೃ ತೋರಲಾಗುತ್ತಿದೆ. ಕನಿಷ್ಠ ಅವರ ಅಂತ್ಯಸಂಸ್ಕಾರಕ್ಕೆ ಜಾಗ ಕೂಡ ಇಲ್ಲದೆ ಇರುವುದು ಖಂಡನೀಯ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ್, ಸ್ಥಳೀಯ ನಿವಾಸಿಗಳ ಮನವಿ ಆಲಿಸಿ ಅವರನ್ನು ಸಮಾಧಾನ ಪಡಿಸುವ ಕಾರ್ಯ ಮಾಡಿದರು. ಈ ಸಂದರ್ಭ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಪಟ್ಟು ಹಿಡಿದರು. ತಕ್ಷಣ ಸ್ಥಳಕ್ಕೆ ಸರ್ವೇಯರ್‌ಗಳನ್ನು ಕರೆಸಿದ ತಹಸೀಲ್ದಾರ್ ಸರ್ವೇ ನಡೆಸಿ 20 ಗುಂಟೆ ಜಾಗವನ್ನು ತೆರವುಗೊಳಿಸಿದರು. ನಂತರ ಆ ಜಾಗವನ್ನು ಜೆಸಿಬಿಯಿಂದ ಮಟ್ಟ ಮಾಡಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಸ್ಮಶಾನಕ್ಕೆ ಸೇರಿದ ಇನ್ನು 30 ಗುಂಟೆ ಜಾಗವನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದ್ದಾರೆ. ಒತ್ತುವರಿ ತೆರವಿನ ನಂತರ ಸಂಜೆ 4ಕ್ಕೆ ಸ್ಥಳೀಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.

Leave a Reply

Your email address will not be published. Required fields are marked *