ಐಎಸ್‌ಪಿಆರ್‌ಎಲ್ ಭೂಸ್ವಾಧೀನ ಸರ್ವೆಗೆ ತಡೆ

ಉಡುಪಿ: ಮಜೂರು ಗ್ರಾ.ಪಂ.ವ್ಯಾಪ್ತಿಯ ಪಾದೂರು ಗ್ರಾಮದಲ್ಲಿ ಭೂಗತ ಕಚ್ಛಾತೈಲ ಸಂಸ್ಕರಣೆ (ಐಎಸ್‌ಪಿಆರ್‌ಎಲ್) 2ನೇ ಹಂತದ ವಿಸ್ತರಣೆಗೆ ಭೂಸ್ವಾಧೀನಕ್ಕಾಗಿ ಶುಕ್ರವಾರ ಬೆಳಗ್ಗೆ ಸರ್ವೆ ಕಾರ್ಯ ನಡೆದಿದ್ದು, ಆಕ್ಷೇಪವ್ಯಕ್ತಪಡಿಸಿದ ಸ್ಥಳೀಯರು ತಡೆಯೊಡ್ಡಿ ಪ್ರತಿನಿಧಿಗಳನ್ನು ವಾಪಸ್ ಕಳುಹಿಸಿದರು.
ಕೆಲ ದಿನಗಳ ಹಿಂದೆ ಮಜೂರು ಗ್ರಾಪಂನಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಾಧಕ ಭಾಧಕಗಳ ಚರ್ಚೆ ನಡೆಸದೆ ಘಟಕದ ಯಾವುದೇ ಚಟುವಟಿಕೆ ಆರಂಭಿಸಬಾರದೆಂದು ವಿನಂತಿಸಿದ್ದರೂ, ಸರ್ವೆ ಕಾರ್ಯಕ್ಕೆ ಮುಂದಾಗಿದ್ದಕ್ಕೆ ಗ್ರಾಮಸ್ಥರು, ಜನಜಾಗೃತಿ ಸಮಿತಿ ಮತ್ತು ಜನಪ್ರತಿನಿಧಿಗಳು ಆಕ್ರೋಶವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ.ಸದಸ್ಯರಾದ ಶಶಿಪ್ರಭಾ ಶೆಟ್ಟಿ , ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು, ಮಜೂರು ಗ್ರಾ.ಪಂ.ಉಪಾಧ್ಯಕ್ಷೆ ಸಹನಾ ತಂತ್ರಿ, ಸದಸ್ಯರಾದ ಪ್ರಸಾದ್ ಶೆಟ್ಟಿ ವಳದೂರು, ಗಣೇಶ್ ಶೆಟ್ಟಿ ಹೇರೂರು ಹಾಗೂ ಸ್ಥಳೀಯರಾದ ಸುರೇಂದ್ರ ಕುಮಾರ್, ಮೇಬಲ್ ಕೋರ್ಡ, ಶಾಲಿನಿ ಕೋರ್ಡ, ಪ್ರಶಾಂತ್ ರಾವ್ , ಮುಖೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸತೀಶ್ ಶೆಟ್ಟಿ ವಳದೂರು, ರಾಘು ಆಚಾರ್ಯ, ರಿಚರ್ಡ ಕೋರ್ಡ, ಡಯಾನ ಸಲ್ಡಾನ, ಐಡಾ ಪಿಂಟೊ , ದಿವಾಕರ ಆಚಾರ್ಯ ಉಪಸ್ಥಿತರಿದ್ದರು.

ಸಂಸ್ಥೆ ಜತೆ ಮಾತುಕತೆ ಡಿಸಿ ಭರವಸೆ: ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಭೇಟಿ ಮಾಡಿದ ನಿಯೋಗ, ಪಾದೂರು, ಕಳತ್ತೂರು ಮತ್ತು ಶಿರ್ವ ಗ್ರಾಮದ ಒಟ್ಟು 210 ಎಕರೆ ಜಾಗ ಸ್ವಾಧೀನ ಕುರಿತು ಗೂಗಲ್ ನಕ್ಷೆ ಹಾಗೂ ಸರ್ವೆ ನಂಬ್ರಗಳನ್ನು ಸಂಸ್ಥೆ ನೀಡಿದೆ. ಕಳೆದ ಗ್ರಾಮಸಭೆಯಲ್ಲಿ ಜಾಗ, ಮನೆ ಹಾಗೂ ಮರಗಳ ಮೌಲ್ಯ ನಿಗದಿಯಾಗದೆ ಯೋಜನೆಗೆ ಸಂಬಂಧಿಸಿ ಯಾವುದೇ ಚಟುವಟಿಕೆ ನಡೆಸದಂತೆ ನಿರ್ಣಯಿಸಲಾಗಿತ್ತು. 1ನೇ ಹಂತದ ಯೋಜನೆ ಸಂದರ್ಭ ಬಂಡೆ ಸ್ಫೋಟದಿಂದ ಹಾನಿಗೊಳಗಾದ ಮನೆಗಳನ್ನು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿದ್ದು, ಇದರ ವರದಿಯಂತೆ ಸುಮಾರು 120 ಮನೆಗಳಿಗೆ ಸರಿಸುಮಾರು 1 ಕೋಟಿಯಷ್ಟು ಪರಿಹಾರ ಮೊತ್ತ ವಿತರಿಸಲು ಬಾಕಿಯಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಶನಿವಾರ ಐಎಸ್‌ಪಿಆರ್‌ಎಲ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *