More

    ಬಾಲಕಿ ಮೇಲೆ ಅತ್ಯಾಚಾರ ಯತ್ನ ; ಶಿರಾದಲ್ಲಿ ಹಿಂದುಪರ ಸಂಘಟನೆಗಳ ಪ್ರತಿಭಟನೆ ; ಪ್ರಕ್ಷುಬ್ಧ ವಾತಾವರಣ ನಿರ್ಮಾಣ

    ಶಿರಾ : ಬಾಲಕಿ ಮೇಲೆ ಅನ್ಯಕೋಮಿನಿ ಬಾಲಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಹಿಂದುಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.

    ನಗರದ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 11.30ಕ್ಕೆ ಹಿಂದು ಜಾಗರಣಾ ವೇದಿಕೆ, ವೀರಶೈವ ಮಹಾಸಭಾ, ಕಟ್ಟೆ ಬಸವೇಶ್ವರ ಸಮಿತಿ, ವೀರಶೈವ ಲಿಂಗಾಯಿತ ಹಿತರಕ್ಷಣಾ ಸಮಿತಿ, ಬಿಜೆಪಿ ಮಹಿಳಾ ಮೋರ್ಚಾ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಮಂದಿ ಕಾಲ್ನಡಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ನಗರ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಗೆ ಪ್ರತಿಭಟನಾನಿರತರು ಮನವಿ ಸಲ್ಲಿಸಿ, ಯಾರ ಒತ್ತಡಕ್ಕೂ ಮಣಿಯದೆ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

    ಅವಮಾನೀಯ ಹಾಗೂ ದುಷ್ಕೃತ್ಯವನ್ನು ಕೇವಲ ಹಿಂದು ಸಂಘಟನೆಗಳು ಖಂಡಿಸುವಂತಹದ್ದಲ್ಲ, ಇಡೀ ನಾಗರಿಕ ವ್ಯವಸ್ಥೆಯೇ ಖಂಡಿಸಬೇಕಾಗಿದೆ ಎಂದು ರೇಷ್ಮೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಎಸ್.ಆರ್. ಗೌಡ ಹೇಳಿದರು.
    ಶಿರಾ ಮಿನಿ ಬಾಂಬೆ ತರಹ ಹೊರಹೊಮ್ಮಿದೆ. ಎಲ್ಲ ಮಾಫಿಯಾಗಳು ಇಲ್ಲಿ ನಡೆಯುತ್ತಿವೆ. ಡ್ರಗ್, ಅಫೀಮು, ಗಾಂಜಾ ಎಲ್ಲವೂ ಇಲ್ಲಿ ನಡೆಯುತ್ತಿದೆ. ಈ ಬಗ್ಗೆ ಸೂಕ್ಷ್ಮವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಇದಕ್ಕೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷೃ ತೋರಲಾಗುತ್ತಿದೆ. ಬಸ್ ನಿಲ್ದಾಣದ ಬಳಿ ಇಡ್ಲಿ ಹೋಟೆಲ್‌ಗಳನ್ನು ರಾತ್ರಿ 10 ಗಂಟೆಗೆ ಬಂದ್ ಮಾಡಿಸುತ್ತಾರೆ. ಆದರೆ, ಕೆಲವು ಪ್ರದೇಶಗಳಲ್ಲಿ ರಾತ್ರಿ 2 ಗಂಟೆವರೆಗೆ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದರೂ ಪೊಲೀಸರು ಮೌನವಹಿಸುತ್ತಾರೆ. ಎಲ್ಲರಿಗೂ ಒಂದೇ ಮಾನದಂಡವಿರಬೇಕು ಎಂದು ಒತ್ತಾಯಿಸಿದರು.

    ಹಿಂದೂ ಜಾಗರಣಾ ವೇದಿಕೆಯ ಮಂಜುನಾಥ್ ಮಾತನಾಡಿ, ಈ ಘಟನೆ ಕೇವಲ ಹಿಂದೂ ಮಾತ್ರವಲ್ಲ. ಮುಸ್ಲಿಂ, ಕ್ರೈಸ್ತ ಹಾಗೂ ಯಾವುದೇ ಧರ್ಮಕ್ಕೆ ಸೇರಿದ ಹೆಣ್ಣು ಮಗುವಿನ ಮೇಲೆ ಆಗಿದ್ದರೂ ನಾವು ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷ ಆಗಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

    ತೆಂಗು ನಾರು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಬಿಜೆಪಿ ನಗರಾಧ್ಯಕ್ಷ ವಿಜಯರಾಜ್, ನಗರ ಯುವ ಘಟಕ ಅಧ್ಯಕ್ಷ ಯಶವಂತ್, ತಾಲೂಕು ಗ್ರಾಮಾಂತರ ಯುವ ಘಟಕ ಅಧ್ಯಕ್ಷ ಮಧುಸೂದನ್, ನಗರ ಪ್ರಧಾನ ಕಾರ್ಯದರ್ಶಿ ದೇವರಾಜು, ರಾಘವೇಂದ್ರ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸ್ವಪ್ನ, ಶಿವಮ್ಮ, ನಗರ ಖಜಾಂಚಿ ನಾಗರತ್ನಾ, ವೀರಶೈವ ಮಹಾಸಭಾ ಅಧ್ಯಕ್ಷ ಮಂಜುನಾಥ್, ರವಿಶಂಕರ್, ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜು, ಗೌರವಾಧ್ಯಕ್ಷ ಮಲ್ಲಯ್ಯ ನಿಲುವಂಗಿ ಮಠ್, ಕಾರ್ಯದರ್ಶಿ ಆನಂದ್, ಸಂಘಟನಾ ಕಾರ್ಯದರ್ಶಿ ಸೋಮಶೇಖರ್, ಮಾಹವ ಹಕ್ಕು ಹಾಗೂ ಭ್ರಷ್ಟಾಚಾವ ವಿರೋಧಿ ಸಂಸ್ಥೆಯ ಅಧ್ಯಕ್ಷ ಸಿಂಚು ನಾರಾಯಣ್ ಪಾಲ್ಗೊಂಡಿದ್ದರು.

    ದೌಡಾಯಿಸಿದ ಎಸ್ಪಿ : ಶಿರಾ ತಾಲೂಕಿನಾದ್ಯಂತ ಬುಧವಾರ ಸಂಜೆಯಿಂದಲೇ ಘಟನೆ ಕಾಡ್ಗಿಚ್ಚಿನಂತೆ ಹಬ್ಬಿದ್ದು ಗುರುವಾರ ಪರಿಸ್ಥಿತಿ ಕೈಮೀರುವ ಸಾಧ್ಯತೆ ಕಂಡಬಂತು. ಹಾಗಾಗಿ, ಡಿವೈಎಸ್ಪಿ ಕುಮಾರಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಗುರುವಾರ ಬೆಳಗ್ಗೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ದೌಡಾಯಿಸಿದ್ದು ಹಿಂದುಪರ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿ ಅಹಿತಕರ ಘಟನೆಗೆ ಆಸ್ಪದ ಕೊಡಲಿಲ್ಲ.

    ಅನಾಹುತ ತಪ್ಪಿಸಿದ ಯುವಕರು : ಬುಧವಾರ ಮಧ್ಯಾಹ್ನ 1 ಗಂಟೆ ಆಸುಪಾಸಿನಲ್ಲಿ 9 ವರ್ಷದ ಬಾಲಕಿಯನ್ನು ಅನ್ಯಕೋಮಿನ 16 ವರ್ಷದ ಯುವಕ ಬಲವಂತವಾಗಿ ತನ್ನ ಮನೆಯ ಹಿಂಭಾಗದಲ್ಲಿರುವ ಸ್ಮಶಾನದ ಬಳಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು ಇದನ್ನು ಗಮನಿಸಿದ ಯುವಕರಿಬ್ಬರು ಆತನನ್ನು ತಡೆದಿದ್ದರಿಂದ ಅನಾಹುತ ತಪ್ಪಿದೆ. ಈ ವಿಷಯ ಕಾಡ್ಗಿಚ್ಚಿನಂತೆ ತಾಲೂಕಿನಾದ್ಯಂತ ಹರಡಿದ್ದು ಗುರುವಾರ ಬೆಳಗ್ಗೆ ಹೊತ್ತಿಗೆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದುಪರ ಸಂಘಟನೆಗಳ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾದ ಪೊಲೀಸರು, ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

    ಇಂತಹ ಪ್ರಕರಣಗಳು ಮುಂದೆಂದೂ ನಡೆಯದಂತೆ ಎಚ್ಚರವಹಿಸಬೇಕು. ಆರೋಪಿಗೆ ತಕ್ಕ ಶಿಕ್ಷೆ ನೀಡಿ ಇಲ್ಲವಾದಲ್ಲಿ ನಮ್ಮ ಕೈಗೆ ಒಪ್ಪಿಸಿ. ಇಂತಹ ನೀಚರನ್ನು ಶಿಕ್ಷಿಸದೇ ಇದ್ದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವಾಗಲಿದೆ.
    ನಾಗರತ್ನ ಖಜಾಂಚಿ, ಬಿಜೆಪಿ ನಗರ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts