ಹನೂರು: ತಾಲೂಕಿನ ಗ್ರಾಮವೊಂದರಲ್ಲಿ ಅಪಹರಿಸಿದ್ದ ಅಪ್ರಾಪ್ತೆಯನ್ನು ರಾಮಾಪುರ ಪೊಲೀಸರು ಸೋಮವಾರ ರಕ್ಷಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ತೊಳಸಂಪಟ್ಟಿ ಗ್ರಾಮದ ಅಜಿತ್(22) ಬಂಧಿತ ಆರೋಪಿ. ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ 17 ವರ್ಷದ ಅಪ್ತಾಪ್ತೆಯನ್ನು ಅಜಿತ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ವರ್ಷದ ಹಿಂದೆ ವಿವಾಹ ಮಾಡಿಕೊಡುವಂತೆ ಪಾಲಕರನ್ನು ಪೀಡಿಸುತ್ತಿದ್ದ. ಆದರೆ ಅಪ್ರಾಪ್ತೆಯಾದ ಕಾರಣ ಪಾಲಕರು ಒಪ್ಪಿಗೆ ನೀಡಿರಲಿಲ್ಲ. ಫೆ.8ರಂದು ಬಾಲಕಿಯು ರಾಮಾಪುರ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಈತ ಪುಸಲಾಯಿಸಿ ತಮಿಳುನಾಡಿಗೆ ಕರೆದೊಯ್ದಿದ್ದ. ಈ ಬಗ್ಗೆ ಶಂಕೆ ವ್ಯಕ್ತಪಡಿಸಿ ಬಾಲಕಿಯ ತಾಯಿ ಫೆ.27ರಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಕಳೆದ 2 ದಿನದ ಹಿಂದೆ ತಮಿಳುನಾಡಿನ ಮನೆಯಲ್ಲಿರಿಸಿದ್ದ ಬಾಲಕಿಯನ್ನು ರಕ್ಷಿಸಿದ್ದು, ಈಗ ಚಾ.ನಗರ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.