ಅಪಾಯಕ್ಕೆ ಸಿಲುಕಿದ ಮೀನುಗಾರರ ರಕ್ಷಿಸಿದ ಕರಾವಳಿ ರಕ್ಷಣಾ ಪಡೆ

ಮಂಗಳೂರು/ಸುರತ್ಕಲ್: ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ತಮಿಳುನಾಡು ಮೂಲದ 10 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಶನಿವಾರ ಸುರಕ್ಷಿತವಾಗಿ ನವಮಂಗಳೂರು ಬಂದರಿಗೆ ಕರೆತಂದಿದ್ದಾರೆ.

ಕಳೆದೆರಡು ಮೂರು ದಿನಗಳಿಂದ ಕಡಲು ಪ್ರಕ್ಷುಬ್ಧವಾಗಿದ್ದು ಸೇಂಟ್ ಜೋಸೆಫ್ ಎಂಬ ತಮಿಳುನಾಡು ಮೂಲದ ನೌಕೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಇಂಜಿನ್ ವೈಫಲ್ಯದಿಂದ ದೋಣಿ ಕೆಟ್ಟು ನಿಂತಿತು. ಕೊಚ್ಚಿಯಿಂದ ಈ ದೋಣಿ ಮೀನುಗಾರಿಕೆಗೆ ಆಗಮಿಸಿತ್ತು. ಭಾರಿ ಬಿರುಗಾಳಿ ಪರಿಸ್ಥಿತಿ ಸಮುದ್ರದಲ್ಲಿ ಇದ್ದು ಮೀನುಗಾರರು ದಿಕ್ಕೆಟ್ಟಿದ್ದರು. ಮೀನುಗಾರರು ಜೀವರಕ್ಷಣೆ ಕೋರಿ ಕಳುಹಿಸಿದ್ದ ಅಪಾಯದ ಸಂಕೇತವನ್ನು ಮಂಗಳೂರಿನಲ್ಲಿದ್ದ ಕೋಸ್ಟ್‌ಗಾರ್ಡ್ ನೌಕೆ ಐಸಿಜಿಎಸ್ ಅಮಾರ್ತ್ಯ ಗ್ರಹಿಸಿ, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ರೂಪಿಸಿದರು. ಶುಕ್ರವಾರ ರಾತ್ರಿಯಿಡೀ ಅನೇಕ ಬಾರಿ ರಕ್ಷಣೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಕೊನೆಗೂ ಎಲ್ಲ ಮೀನುಗಾರರು ಹಾಗೂ ದೋಣಿಯನ್ನು ನವಮಂಗಳೂರು ಬಂದರಿಗೆ ಶನಿವಾರ ಮುಂಜಾನೆ ಕರೆತರಲಾಯಿತು.

ಅಬ್ಬರಿಸುತ್ತಿದ್ದ ಸಮುದ್ರ ಮಧ್ಯೆ ಸಿಲುಕಿದ್ದ ಮೀನುಗಾರರನ್ನು ಪ್ರತಿಕೂಲ ಪರಿಸ್ಥಿತಿಯಲ್ಲೂ ಅಮಾರ್ತ್ಯ ನೌಕಾ ತಂಡದವರು ರಕ್ಷಿಸುವ ಮೂಲಕ ಸಾಧನೆ ಮೆರೆದಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಕಮಾಂಡರ್-ಕರ್ನಾಟಕ ಡಿಐಜಿ ಎಸ್.ಎಸ್.ದಸೀಲಾ ಹೇಳಿದ್ದಾರೆ.

ದಡಕ್ಕಪ್ಪಳಿಸುತ್ತಿವೆ ಕಡಲ ಬೃಹತ್ ಅಲೆಗಳು: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದ ಉಳ್ಳಾಲ, ಸೋಮೇಶ್ವರ, ಸುರತ್ಕಲ್, ಸಸಿಹಿತ್ಲು ಮೊದಲಾದ ಕಡೆ ಕಡಲು ಪ್ರಕ್ಷುಬ್ಧಗೊಂಡು ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಉಳ್ಳಾಲ, ಸೋಮೇಶ್ವರ ಕಡಲ ಕಿನಾರೆಯಲ್ಲಿ ತಡೆಗೋಡೆಯಾಗಿ ಹಾಕಿದ್ದ ಬೃಹತ್ ಗಾತ್ರದ ಕಲ್ಲುಗಳನ್ನು ಅಪ್ಪಳಿಸಿ ಅಲೆಗಳು ಸಮೀಪದ ಮನೆಗಳತ್ತ ನುಗ್ಗಲಾರಂಭಿಸಿವೆ.

ಈ ನಡುವೆಯೇ ಉಳ್ಳಾಲದ ಕೈಕೋ, ಕೋಟೆಪುರ ಪ್ರದೇಶಗಳಲ್ಲಿ ಮನೆಗಳ ಸಮೀಪ ಕಡಲ ತಡಿಗೆ ಬೃಹತ್ ಗಾತ್ರದ ಕಲ್ಲುಗಳನ್ನು ಜೆಸಿಬಿ, ಹಿಟಾಚಿ, ಕ್ರೇನ್ ಮೂಲಕ ಹಾಕುವ ಕಾರ್ಯವೂ ಮುಂದುವರಿದಿದೆ. ಈ ಬಾರಿ ಮೊದಲ ಬಾರಿಗೆ ಕಡಲು ಇಷ್ಟೊಂದು ಪ್ರಕ್ಷುಬ್ಧ ಗೊಂಡಿರುವುದು ಇದೇ ಮೊದಲು ಎಂದು ಕಡಲ ಕಿನಾರೆ ನಿವಾಸಿಗಳು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ವೇಗವಾಗಿ ಬೀಸಿದ ಗಾಳಿಯಿಂದ ಇಲ್ಲಿನ ಬೀಚ್‌ನಲ್ಲಿದ್ದ ಅಂಗಡಿಯೊಂದರ ಮಾಡು ಸಂಪೂರ್ಣ ನೆಲಸಮವಾಗಿದೆ. ವಿದ್ಯುತ್ ತಂತಿ ಸರಿ ಮಾಡುತ್ತಿದ್ದಾಗ ಕಂಬ ವಾಲಿ ನೆಲಕ್ಕೆ ಬಿದ್ದು, ಲೈನ್‌ಮೆನ್ ಕಾಲಿಗೆ ಗಾಯವಾಗಿದೆ.

ಅಪಾಯ ತಪ್ಪಿದ್ದಲ್ಲ: ಉಳ್ಳಾಲದ ಕೈಕೋ ಪ್ರದೇಶದುದ್ದಕ್ಕೂ ಮನೆಗಳಿರುವ ಕಡೆ ಕಡಲ ಕಿನಾರೆಗೆ ಬೃಹತ್ ಗಾತ್ರದ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಹಾಗಾಗಿ ಈ ಬಾರಿ ಸದ್ಯಕ್ಕೆ ಸ್ಥಳೀಯರು ಕೊಂಚ ನಿರಾಳವಾಗುವಂತಾಗಿದೆ. ಹಾಗಿದ್ದರೂ ಕೆಲವೊಮ್ಮೆ ಕಡಲು ಪ್ರಕ್ಷುಬ್ಧಗೊಂಡಾಗ ಅಲೆಗಳು ಕಲ್ಲಿನ ತಡೆಗೋಡೆ ಏರಿ ಮನೆಗಳತ್ತ ಅಪ್ಪಳಿಸುತ್ತಿವೆ. ಮಳೆ ಇನ್ನಷ್ಟು ಬಿರುಸುಗೊಂಡು ಕಡಲು ಪ್ರಕ್ಷುಬ್ಧವಾದರೆ ಇಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಉಳ್ಳಾಲ ಬೀಚ್ ಅಪಾಯಕಾರಿಯಾಗಿದೆ. ಕಡಲ ಕಿನಾರೆಗೆ ಬರುವ ಪ್ರವಾಸಿಗರು ಸಮುದ್ರದ ಬಳಿಗೆ ಹೋಗದಂತೆ ಅಲ್ಲಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ನುರಿತ ಈಜುಗಾರರು ಸಜ್ಜಾಗಿದ್ದಾರೆ.

25 ವರ್ಷಗಳಿಂದ ಕಲ್ಲು ಹಾಕುತ್ತಿದ್ದಾರೆ: ‘25 ವರ್ಷಗಳಿಂದ ಸಮುದ್ರಕ್ಕೆ ಕಲ್ಲು ಹಾಕುವುದನ್ನು ನೋಡುತ್ತಿದ್ದೇನೆ. ಈಗಲೂ ಹಾಕುತ್ತಲೇ ಇದ್ದಾರೆ. ಆರಂಭದಲ್ಲಿ ಬಂಡೆ ಕಲ್ಲುಗಳನ್ನು ಅಟ್ಟಿಯಾಗಿಟ್ಟು ಸಮುದ್ರಕ್ಕೆ ಹಾಕಲಾಗುತ್ತಿತ್ತು. ಬಳಿಕ ಕಬ್ಬಿಣದ ಬಲೆಗಳಲ್ಲಿ ಕಲ್ಲುಗಳನ್ನು ಹಾಕಿ ಕಡಲಿಗೆ ಹಾಕುತ್ತಿದ್ದರು. ಆ ಕಬ್ಬಿಣದ ಬಲೆ ಸಮುದ್ರ ದಡ ಸೇರಿ ಅದನ್ನು ಗುಜುರಿಗೆ ಮಾರಿದ ನಿದರ್ಶನವೂ ಇಲ್ಲಿದೆ. ಅದಾಗಿ ಬೃಹತ್ತಾದ ಚೀಲಗಳಲ್ಲಿ ಮರಳನ್ನು ತುಂಬಿಸಿ ಅದನ್ನು ತಡೆಗೋಡೆಯಾಗಿ ನಿರ್ಮಿಸಲಾಯಿತು. ಬಳಿಕ ಉಳ್ಳಾಲದ ಸಮುದ್ರದುದ್ದಕ್ಕೂ ಬ್ರೇಕ್ ವಾಟರ್ ನಿರ್ಮಾಣವಾಯಿತು. ಇದೀಗ ಬೃಹತ್ ಕಲ್ಲಿನ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಈ ಬಾರಿ ಕೋಟೆಪುರ, ಕೈಕೋ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ಬಿರುಸು ಕೊಂಚ ಕಡಿಮೆಯಾದಂತೆ ಕಾಣಿಸುತ್ತಿದೆ. ಆದರೆ, ಸೋಮೇಶ್ವರ ಪ್ರದೇಶದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಬಾರಿ ಸೋಮೇಶ್ವರದ ಸ್ಮಶಾನಕ್ಕೆ ಅಪಾಯವಿರುವಂತೆ ಗೋಚರವಾಗುತ್ತಿದೆ’ ಎಂದು ಸಮ್ಮರ್ ಸ್ಯಾಂಡ್ ಬೀಚ್ ಬಳಿಯ ವ್ಯಾಪಾರಿಯೊಬ್ಬರು ಹೇಳಿದರು.

Leave a Reply

Your email address will not be published. Required fields are marked *