ಕೂಡ್ಲಿಗಿ: ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಕಾರ್ಯದಲ್ಲಿ ಪ್ರತಿಯೊಬ್ಬರು ಕ್ರೀಯಾಶೀಲರಾಗಬೇಕು ಎಂದು ಸಹಾಯಕ ಸರ್ಕಾರಿ ಅಭಿಯೋಜಕಿ ವೈ.ಶಿಲ್ಪಾ ಹೇಳಿದರು.
ಇದನ್ನೂ ಓದಿ:ಜೂ.12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡ ಮಕ್ಕಳು ಹೆಚ್ಚಾಗಿ ಬಾಲಕಾರ್ಮಿಕ ಪದ್ಧತಿಗೆ ಶರಣಾಗುತ್ತಿದ್ದು, ಕೆಲಸ ಮಾಡಿಸುವುದನ್ನು ಬಿಟ್ಟು ಉತ್ತಮ ಶಿಕ್ಷಣ ನೀಡುವಂತೆ ಅರಿವು ಮೂಡಿಸಬೇಕು. ಈ ಭಾಗದಲ್ಲಿ ಬಹಳಷ್ಟು ಜನರು ಉದ್ಯೋಗ ಅರಸಿ ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಕಡ್ಡಾಯವಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರಪ್ಪ ಡಂಬುರ ಮತ್ತೂರ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ ಇಲಾಖೆಯ ನಿತರಂತರವಾಗಿ ಪ್ರಯತ್ನಿಸುತ್ತಿದೆ. ಬಾಲ ಕಾರ್ಮಿಕರು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿ. ಮಕ್ಕಳನ್ನು ರಕ್ಷಿಸಿ ಕಂಪನಿ ಮಾಲಿಕರಿಗೆ ಹಾಗೂ ಪಾಲಕರಿಗೆ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಕ್ಷೇತ್ರಾಧಿಕಾರಿ ಪಿ.ಎಂ.ಈಶ್ವರಯ್ಯ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಪ್ಯಾನಲ್ ವಕೀಲ ಡಿ.ಕರಿಬಸವರಾಜ, ವೃತ್ತದ ಪ್ರಭಾರ ಕಾರ್ಮಿಕ ಅಧಿಕಾರಿ ಬಿ.ಶಿವಶಂಕರ ತಳವಾರ, ತಾಪಂ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಪ್ರಕಾಶ, ಶಿಕ್ಷಣ ಸಂಯೋಜಕ ನಾಗರಾಜ, ಶಿಕ್ಷಕ ಗುಪ್ಪಾಲ ಕೊಟ್ರೇಶ್, ಕಾರ್ಮಿಕ ಇಲಾಖೆಯ ಚಂದ್ರಕಾಂತ್ ಇತರರಿದ್ದರು.