ಪರಿಹಾರ ಕೋರಿ ಪ್ರಸ್ತಾವನೆ

ಸಿದ್ದಾಪುರ: ಸತತ ಮಳೆಯಿಂದ ಜಲಾವೃತಗೊಂಡ ಕವಂಚೂರು ಗ್ರಾಪಂ ವ್ಯಾಪ್ತಿಯ ಅರೆಂದೂರು, ಕವಂಚೂರು ಭಾಗದ ಭತ್ತದ ಗದ್ದೆಗಳಿಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಭಾರಿ ಮಳೆಯಿಂದಾಗಿ ಬಿತ್ತನೆಯಾದ, ನಾಟಿ ಮಾಡಲು ಸಿದ್ಧಗೊಂಡ ಅಗೆಮಡಿಗಳು ನೆರೆಹಾವಳಿಯಿಂದ ಮುಳುಗಿ ಕೊಳೆತುಹೋಗಿದ್ದು, ಏನು ಮಾಡಬೇಕೆಂದು ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸಿದ್ದು ತಾಲೂಕಿನಲ್ಲಿ ಸುಮಾರು 120 ಹೆಕ್ಟೇರ್ ಭತ್ತದ ಗದ್ದೆಯಲ್ಲಿನ ಭತ್ತದ ಸಸಿಗಳು ಅತಿವೃಷ್ಟಿಯಿಂದ ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ಈ ಕುರಿತಂತೆ ಬೆಳೆ ವಿಮೆ ಮತ್ತು ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ರೈತರಿಗೆ ಆಗಿರುವ ಹಾನಿ ಭರಿಸಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತೇನೆ ಎಂದರು.
ಜಿ.ಪಂ. ಸದಸ್ಯ ನಾಗರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಕವಂಚೂರು ಗ್ರಾಪಂ ಸದಸ್ಯ ರಾಜು ಕಟ್ಟೇಮನೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್ ಇತರರಿದ್ದರು.