ಮದ್ದೂರು: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ತಾಲೂಕಿಗೆ ಮತ್ತೆರಡು ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೆಲವೇ ದಿನಗಳಲ್ಲೇ ಮಂಜೂರಾತಿ ಸಿಗುವ ಭರವಸೆ ಇದೆ ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶುಕ್ರವಾರ 72.50 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದಿಂದ ಹೊಸ ಶೈಕ್ಷಣಿಕ ನೀತಿ ರೂಪಿತವಾಗಿದೆ. ಕ್ಷೇತ್ರದ ಕೆಲವು ಕಡೆ ಸರ್ಕಾರಿ ಶಾಲೆಗಳಿಗೆ ಉತ್ತಮ ಕಟ್ಟಡಗಳಿವೆ, ಶಿಕ್ಷಕರಿದ್ದಾರೆ. ಆದರೆ ಮಕ್ಕಳ ಕೊರತೆ ಕಾಡುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯುವ ಮೂಲಕ ಖಾಸಗಿ ಶಾಲೆಗಳ ಕಡೆ ಮುಖ ಮಾಡಿರುವ ಪಾಲಕರು ತಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ದಾಖಲು ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದರು.
ನಿಡಘಟ್ಟ ಗ್ರಾಮದಲ್ಲಿದ್ದ ಪ್ರಾಥಮಿಕ ಶಾಲಾ ಕೊಠಡಿಗಳು ಸುಮಾರು 125 ವರ್ಷಗಳಷ್ಟು ಹಳೆಯದಾಗಿದ್ದ ಕಾರಣ ಕೊಠಡಿಗಳು ಶಿಥಿಲಗೊಂಡಿತ್ತು. ಈ ಬಗ್ಗೆ ಶಿಕ್ಷಕರು ಹಾಗೂ ಗ್ರಾಮಸ್ಥರು ನನ್ನ ಗಮನಕ್ಕೆ ತಂದ ಪರಿಣಾಮ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಿಸಿದ್ದು, 4 ತಿಂಗಳಲ್ಲಿ ಶಾಲಾ ಕೊಠಡಿಗಳು ನಿರ್ಮಾಣವಾಗಲಿವೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಬೇರೆಡೆ ವಿದ್ಯಾರ್ಥಿಗಳಿಗೆ ಶಾಲೆ ನಡೆಸಲಾಗುವುದು ಎಂದರು.
ಸರ್ಕಾರಿ ಶಾಲೆಗಳ ಸಮಗ್ರ ಅಭವೃದ್ಧಿಗೆ ಈಗಾಗಲೇ ಹೆಚ್ಚಿನ ಒತ್ತು ನೀಡಿದ್ದು, ನವಿಲೆ, ಅರುವನಹಳ್ಳಿ, ಸುಣ್ಣನದೊಡ್ಡಿ, ಬಿದರಹೊಸಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಜತೆಗೆ ತಾಲೂಕಿನಲ್ಲಿರುವ ಶಿಥಿಲ ಕೊಠಡಿ, ಸೋರುತ್ತಿರುವ ಹಂಚಿನ ಕೊಠಡಿಗಳನ್ನು ಪಟ್ಟಿ ಮಾಡಿದ್ದು, ಹಂತ ಹಂತವಾಗಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು. ಜತೆಗೆ ಸರ್ಕಾರ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೇ 20ರಂದು ಮನ್‌ಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಆದರೆ ಮದ್ದೂರು ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದು, ಮದ್ದೂರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೈನುಗಾರಿಕೆ ಮಾಡುತ್ತಿರುವುದರಿಂದ ಅಧ್ಯಕ್ಷ ಸ್ಥಾನ ನೀಡಿದರೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಮದ್ದೂರು ಪಟ್ಟಣ ವ್ಯಾಪ್ತಿಯ ಸಾರ್ವಜನಿಕರ ಒತ್ತಾಯದಂತೆ ಬಿಎಂಐಸಿ ಯೋಜನೆಯಿಂದ ಕೈ ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೆ. ಹೀಗಾಗಿ ಸದನದಲ್ಲಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಆದರೆ ಮದ್ದೂರು ಪಟ್ಟಣವನ್ನು ಬಿಎಂಐಸಿ ವ್ಯಾಪ್ತಿಯಿಂದ ಕೈಬಿಡುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಬಿಎಂಐಸಿ ಯೋಜನೆಯ ಬಗ್ಗೆ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದ್ದು, ಈ ಸಮಸ್ಯೆಗೆ ಆದಷ್ಟು ಬೇಗ ಮುಕ್ತಿ ಸಿಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿದ್ದಾರೆ. ಶಾಸಕರಾದ ಎರಡೇ ವರ್ಷದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದಿರುವುದು ಅವರಿಗೆ ತಾಲೂಕಿನ ಅಭಿವೃದ್ಧಿಗೆ ಬಗೆಗಿರುವ ಕಾಳಜಿ ತೋರಿಸುತ್ತದೆ. ನಿಡಘಟ್ಟ ಗ್ರಾಪಂಯ ಸಮಗ್ರ ಅಭಿವೃದ್ಧಿಗೂ ಸಾಕಷ್ಟು ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲೂ ಸರ್ಕಾರದಿಂದ ಮತ್ತಷ್ಟು ವಿಶೇಷ ಅನದಾನಗಳನ್ನು ತಂದು ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದರು.
ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಗ್ರಾಪಂ ಅಧ್ಯಕ್ಷೆ ಉಮಾ, ಸದಸ್ಯರಾದ ರಾಮೇಗೌಡ, ಲಕ್ಷ್ಮೀ, ಮಹೇಶ್, ದೀಪಕ್, ರಾಜಣ್ಣ, ಪಿಡಿಒ ಶೀಲಾ, ಬಿಇಒ ಧನಂಜಯ, ಮುಖ್ಯ ಶಿಕ್ಷಕ ನಾಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಅರುಣ್, ಸದಸ್ಯ ಉಮೇಶ್, ಮುಖಂಡರಾದ ಎನ್.ಎಂ.ಪ್ರಕಾಶ್, ಪ್ರಭು, ರಾಜೇಶ್, ಅಭಿ, ಲಕ್ಷ್ಮಣ್, ಅಟೋ ಸ್ವಾಮಿ, ರಘು, ಎಇಇ ದೇವಾನಂದ ಇದ್ದರು.