More

    ಕಳವಾಗಿದ್ದ 74 ಲಕ್ಷ ರೂ. ಮೌಲ್ಯದ ಸೊತ್ತು ವಾರಸುದಾರರಿಗೆ ಹಸ್ತಾಂತರ

    ಉಡುಪಿ: ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ 74,52,170 ಮೌಲ್ಯದ ಚಿನ್ನಾಭರಣ ಹಾಗೂ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

    ಕಾರ್ಕಳ ಗ್ರಾಮಾಂತರ ಠಾಣೆ, ಹಿರಿಯಡ್ಕ, ಬೈಂದೂರು, ಕೊಲ್ಲೂರು, ಕಾಪು ಠಾಣೆಗಳ ತಲಾ ಒಂದು ಪ್ರಕರಣ, ಕೋಟ, ಮಲ್ಪೆ, ಠಾಣೆಯ ತಲಾ 2 ಪ್ರಕರಣಗಳು, ಉಡುಪಿ ನಗರ 3, ಕುಂದಾಪುರ 5, ಪಡುಬಿದ್ರಿ 4, ಕುಂದಾಪುರ ಗ್ರಾಮಾಂತರ 4, ಭ್ರಹ್ಮಾವರ 5 ಹಾಗೂ ಮಣಿಪಾಲ ಠಾಣೆಯ 10 ಪ್ರಕರಣಗಳು ಸೇರಿ ಒಟ್ಟು 40 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸೊತ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ಸಂಬಂಧಪಟ್ಟವರಿಗೆ ಹಿಂತಿರುಗಿಸಲಾಗಿದೆ.

    ಅಂದಾಜು ಬೆಲೆ ರೂಪಾಯಿ 2,94,000 ಮೌಲ್ಯದ 7 ಮೋಟಾರು ವಾಹನ, 1 ಕೆಜಿ 195 ಗ್ರಾಂ ತೂಕದ ಅಂದಾಜು ಬೆಲೆ ರೂಪಾಯಿ 68,23,810 ಮೌಲ್ಯದ ಚಿನ್ನ, 1 ಕೆಜಿ 192 ಗ್ರಾಂ ತೂಕದ ಅಂದಾಜು ಬೆಲೆ ರೂಪಾಯಿ 88,510 ಮೌಲ್ಯದ ಬೆಳ್ಳಿ, ಅಂದಾಜು ಬೆಲೆ ರೂ. 75,700 ಮೌಲ್ಯದ ಮೊಬೈಲ್ ಫೋನ್ 10 ಮತ್ತು ನಗದು 1,70,150 ರೂ. ಸೇರಿ ಒಟ್ಟು 74,52,170 ಮೌಲ್ಯದ ಸೊತ್ತುಗಳನ್ನು ವಾರೀಸುದಾರರಿಗೆ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಮಚ್ಚೇಂದ್ರ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಾಖಲಾಗಿದ್ದ ಸುಮಾರು 40ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಕಳವಾಗಿದ್ದ 75 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಾರಸುದಾರರಿಗೆ ವಾಪಾಸು ನೀಡಿದ್ದೇವೆ. ಪೋಲಿಸ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಮೆಚ್ಚುಗೆ ವ್ಯಕ್ತಪಡಿಸುವ ಅವಕಾಶ ಜನರಿಗೆ ನೀಡಲಾಗಿದೆ. ಇಲಾಖೆಯೂ ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಿ, ಮತ್ತಷ್ಟು ಜನಸ್ನೇಹಿ ಪೋಲಿಸ್ ವ್ಯವಸ್ಥೆ ರೂಪಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಚಿನ್ನಾಭರಣ ಅಂಗಡಿ, ದೊಡ್ಡ ಮಟ್ಟದ ಜಾಗದ ವ್ಯಾಪಾರ ಮಾಡುವವರು, ನಾಗರಿಕರು ತಮ್ಮ ಸೊತ್ತುಗಳನ್ನು ಕಾಪಾಡಿಕೊಳ್ಳಲು ಮುಂಜಾಗೃತೆ ವಹಿಸಿಕೊಳ್ಳಬೇಕು. ಧಾರ್ಮಿಕ ಸ್ಥಳಗಳಲ್ಲಿಯೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ರಕ್ಷಣಾ ಕಾಯ್ದೆಯ ಪ್ರಕಾರ 100ಕ್ಕಿಂತ ಹೆಚ್ಚು ಜನ ಸೇರುವಲ್ಲಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ಒಂದು ಕ್ಯಾಮೆರಾ ಸಾರ್ವಜನಿಕರ ದೃಶ್ಯಾವಳಿಯನ್ನು ಸೆರೆಹಿಡಿಯುತ್ತಿರಬೇಕು. ಉಳಿದ ಕ್ಯಾಮೆರಾಗಳು ಚಲನವಲನವನ್ನು ಸೆರೆಹಿಡಿಯುತ್ತಿರಬೇಕು ಎಂಬ ನಿಯಮವಿದೆ. ಸಾರ್ವಜನಿಕರೆಲ್ಲರಿಗೂ ತಿಳುವಳಿಕೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಬಹಳ ಜನರು ಜಾಗೃತರಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಲವರು ನಿರ್ಲಕ್ಷ್ಯವಹಿಸಿದ್ದು, ನಂತರ ಘಟನೆಗಳು ಆದಾಗ ಪಶ್ಚಾತ್ತಾಪಪಡುತ್ತಿದ್ದಾರೆ ಎಂದರು.

    ಗ್ರಾಮೀಣ ಭಾಗದ ಜನರು ಮನೆಗೆ ಬೀಗವನ್ನು ಹಾಕಿ, ಕೀಯನ್ನು ಅಲ್ಲೇ ಪಕ್ಕದೆಲ್ಲದರೂ ಇಟ್ಟು ಹೋಗಿರುತ್ತಾರೆ. ಇದು ಕೂಡ ಹಗಲಿನಲ್ಲಿ ಕಳ್ಳತನವಾಗಲು ಮುಖ್ಯ ಕಾರಣ. ಗ್ರಾಮೀಣ ಭಾಗದಲ್ಲಿ ಅಪರಿಚಿತರು, ಅನುಮಾನಸ್ಪದವಾಗಿ ಯಾರದರೂ ಕಂಡು ಬಂದರೇ ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದವರು ತಿಳಿಸಿದರು.

    ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ್, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts