ಆಸ್ತಿ ಪತ್ತೆ, ತೆರಿಗೆ ನಿಗದಿಗೆ ಏರಿಯಲ್ ಸರ್ವೆ

| ಗಿರೀಶ್ ಗರಗ ಬೆಂಗಳೂರು

ಒಂದೊಮ್ಮೆ ಉದ್ಯಾನನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು, ಇದೀಗ ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಂಡಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಕಟ್ಟಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಹೊಸದಾಗಿ ನಿರ್ವಣವಾಗುವ ಕಟ್ಟಡಗಳು ತೆರಿಗೆ ವ್ಯಾಪ್ತಿಗೆ ಬರದೆ, ಬಿಬಿಎಂಪಿ ಆದಾಯ ಖೋತಾ ಆಗುವಂತಾಗಿದೆ. ಹೀಗಾಗಿಯೇ ತೆರಿಗೆ ವ್ಯಾಪ್ತಿಗೊಳಪಡದ ಆಸ್ತಿಗಳನ್ನು ಪತ್ತೆ ಮಾಡಿ, ಆ ಕಟ್ಟಡಗಳಿಂದ ತೆರಿಗೆ ವಸೂಲಿ ಮಾಡಲು ಡ್ರೋನ್ ಕ್ಯಾಮರಾ ಮೂಲಕ ಏರಿಯಲ್ ಸರ್ವೆ ಮಾಡಲು ಬಿಬಿಎಂಪಿ

ಚಿಂತನೆ ನಡೆಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರ ಮೇಲೆ ನಂಬಿಕೆಯಿಡಲು 2000 ಇಸವಿಯಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್​ಎಎಸ್) ಪದ್ಧತಿ ಜಾರಿಗೆ ತರಲಾಗಿದೆ. ಇನ್ನು ಆಸ್ತಿಗಳಿಗೆ ಪ್ರತ್ಯೇಕ ಗುರುತು ಸಂಖ್ಯೆ ನೀಡುವ ಸಲುವಾಗಿ ಜಿಐಎಸ್ ಮ್ಯಾಪಿಂಗ್ ಮಾಡಲಾಗಿದೆ.

ಇಷ್ಟಾದರೂ ಆಸ್ತಿಗಳ ಸಂಖ್ಯೆ ಎಷ್ಟಿದೆ, ವಿಸ್ತೀರ್ಣ ಏನು, ಅಷ್ಟು ಅಳತೆಯ ಆಸ್ತಿಗೆ ತೆರಿಗೆ ಎಷ್ಟು ಪಾವತಿಸಬೇಕು ಎಂಬಂತಹ ನಿಖರ ಮಾಹಿತಿ ಬಿಬಿಎಂಪಿಯಲ್ಲಿಲ್ಲ. ಅದರ ಜತೆಗೆ ಹೊಸದಾಗಿ ನಿರ್ವಣವಾಗುವ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರುವ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.

ಹೀಗಾಗಿ ಡ್ರೋನ್ ಕ್ಯಾಮರಾ ಮೂಲಕ ನಗರದೆಲ್ಲೆಡೆ ಸರ್ವೆ ನಡೆಸಿ, ಎಷ್ಟು ಕಟ್ಟಡಗಳಿವೆ, ಅವುಗಳ ವಿಸ್ತೀರ್ಣವೆಷ್ಟು ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಆನಂತರ ಆ ಕಟ್ಟಡಗಳಲ್ಲಿ ತೆರಿಗೆ ವ್ಯಾಪ್ತಿಗೊಳಪಡದ ಕಟ್ಟಡಗಳು ಯಾವುವು ಎಂಬುದನ್ನು ತಿಳಿದು, ಅವುಗಳಿಗೆ ತೆರಿಗೆ ವಿಧಿಸಲಾಗುತ್ತದೆ.

ಅನ್​ವ್ಯಾನ್ಡ್ ಏರಿಯಲ್ ಸಿಸ್ಟಂ: ಡ್ರೋನ್ ಕ್ಯಾಮರಾ ಬಳಕೆ ಮಾಡಿ ಅನ್​ವ್ಯಾನ್ಡ್ ಏರಿಯಲ್ ಸಿಸ್ಟಂ (ಯುಎಎಸ್) ಮೂಲಕ ಆಸ್ತಿಗಳ ಏರಿಯಲ್ ಸರ್ವೆ ಮಾಡುವ ಕುರಿತು ಐಟಿ-ಬಿಟಿ ಇಲಾಖೆಯೊಂದಿಗೆ ಬಿಬಿಎಂಪಿ ಚರ್ಚೆ ನಡೆಸಲು ಮುಂದಾಗಿದೆ.

ಈ ಕುರಿತು ಐಟಿ-ಬಿಟಿ ಇಲಾಖೆ ಕೂಡ ಬಿಬಿಎಂಪಿಗೆ ಸಲಹೆ ನೀಡಿದ್ದು, ಆಸ್ತಿಗಳ ಪತ್ತೆ ಕಾರ್ಯಕ್ಕೆ ಡ್ರೋನ್ ಬಳಸುವಂತೆ ತಿಳಿಸಿದೆ.

ಹಲವು ಕಡೆಗಳಲ್ಲಿ ಡ್ರೋನ್ ಬಳಕೆ

ಡ್ರೋನ್ ಕ್ಯಾಮರಾ ಈಗಾಗಲೆ ಹಲವು ಕಾರ್ಯಗಳಿಗೆ ಬಳಸಲಾಗುತ್ತಿದೆ. ಕಳೆದ ವರ್ಷ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣ, ಒತ್ತುವರಿಯಾಗಿರುವ ಜಾಗದ ಪತ್ತೆ ಮತ್ತಿತರ ಮಾಹಿತಿಗಳನ್ನು ಕಲೆ ಹಾಕಲು ಡ್ರೋನ್ ಮೂಲಕ ಏರಿಯಲ್ ಸರ್ವೆ ನಡೆಸಲಾಗಿತ್ತು. ಅದೇ ರೀತಿ ಪೊಲೀಸ್ ಇಲಾಖೆ ಭದ್ರತಾ ಕಾರ್ಯಗಳಿಗೂ ಬಳಸುತ್ತಿದೆ.

ಇಸ್ರೋ ನೆರವಿಗೆ ಚಿಂತನೆ

ಕಟ್ಟಡಗಳ ವಿಸ್ತೀರ್ಣ ಅಳೆಯಲು ಡ್ರೋನ್ ಕ್ಯಾಮರಾ ಬಳಸುವುದರ ಜತೆಗೆ, ಹೊಸ ಕಟ್ಟಡಗಳ ಪತ್ತೆಗೆ ಇಸ್ರೋ ನೆರವು ಪಡೆಯಲು ಕೂಡ ಬಿಬಿಎಂಪಿ ಸಿದ್ಧತೆ ನಡೆಸಿದೆ. ಅದರಂತೆ ಕಳೆದ ವರ್ಷದ ಸೆಟಲೈಟ್ ಇಮೇಜ್ ಹಾಗೂ ಇತ್ತೀಚಿನ ಸೆಟಲೈಟ್ ಇಮೇಜ್ ಪಡೆದು, ಅವುಗಳನ್ನು ತಾಳೆ ಹಾಕಲು ಬಿಬಿಎಂಪಿ ನಿರ್ಧರಿಸಿದೆ. ಅದರಿಂದ ಹಿಂದಿನ ವರ್ಷ ಖಾಲಿಯಿದ್ದ ಜಾಗದಲ್ಲಿ ಕಟ್ಟಡ ನಿರ್ವಣವಾಗಿದ್ದರೆ ಅದು ತಿಳಿದುಬರಲಿದೆ. ಅದನ್ನಾಧರಿಸಿ, ಡ್ರೋನ್ ಮೂಲಕ ಆ ಕಟ್ಟಡ ಅಳತೆಯನ್ನು ತಿಳಿದು ತೆರಿಗೆ ವಿಧಿಸಲಾಗುತ್ತದೆ. ಈ ಕುರಿತಂತೆ ಇಸ್ರೋ ವಿಜ್ಞಾನಿಗಳ ಜತೆಗೆ ಮಾತುಕತೆ ನಡೆಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *