ಸ್ಟೂಡೆಂಟ್ ಹೌಸ್ ರಿಯಾಲ್ಟಿ ಕ್ಷೇತ್ರದ ಹೊಸ ಕಲ್ಪನೆ

ರಿಯಾಲ್ಟಿ ಕ್ಷೇತ್ರ ಎಂದರೆ ಹಿಂದೆ ನಿವೇಶನ, ಮನೆ ಅಪಾರ್ಟ್​ವೆುಂಟ್ ಹಾಗೂ ಕಚೇರಿ ಕಟ್ಟಡ ನಿರ್ಮಾಣ ಮಾಡಿ ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತವಾಗಿತ್ತು. ಕಾಲ ಬದಲಾಗಿದೆ. ರಿಯಾಲ್ಟಿ ಕ್ಷೇತ್ರ ಕೂಡ ಜನರ ಅಭಿರುಚಿಗೆ ತಕ್ಕಂತೆ ನಿವೇಶನ, ಮನೆ ಹಾಗೂ ಭೂಮಿಯನ್ನು ಸಿದ್ಧಪಡಿಸುತ್ತಿದೆ. ನಿವೃತ್ತರ ನಿವಾಸ, ಫಾರ್ಮ್‌ ​ಹೌಸ್, ಫಾರ್ಮ್‌ರ್‌ ಲ್ಯಾಂಡ್‌, ಆಯುರ್ವೆದ ಧಾಮ, ಹಸಿರು ಮನೆ ಸೇರಿದಂತೆ ಹಲವು ಹೊಸ ಪರಿಕಲ್ಪನೆಗಳನ್ನು ರಿಯಾಲ್ಟಿ ಕ್ಷೇತ್ರ ಮೈಗೂಡಿಸಿಕೊಂಡು ಚಟುವಟಿಕೆ ನಡೆಸಲು ಮುಂದಾಗಿದೆ.

| ಹೊಸಹಟ್ಟಿ ಕುಮಾರ ಬೆಂಗಳೂರು

ಬದಲಾವಣೆ ಜಗದ ನಿಯಮ. ಇದು ರಿಯಾಲ್ಟಿ ಕ್ಷೇತ್ರಕ್ಕೂ ಅನ್ವಯ. ಪ್ರಸ್ತುತ ರಿಯಾಲ್ಟಿ ಕ್ಷೇತ್ರದಲ್ಲಿ ಹೊಸ ಗಾಳಿ ಬೀಸುತ್ತಿದೆ. ಕಾಲ ಬದಲಾದಂತೆ ಹೊಸ ಪರಿಕಲ್ಪನೆಗಳನ್ನು ಸೃಷ್ಟಿಸಿ ಗ್ರಾಹಕರನ್ನು ಸೆಳೆಯಲು ಮುಂದಾಗುತ್ತಿದೆ.

ನಿವೃತ್ತರ ನಿವಾಸ, ಫಾರ್ಮ್‌ ​ಹೌಸ್, ಫಾರ್ಮ್‌ರ್‌ ​ಲ್ಯಾಂಡ್, ಆಯುರ್ವೆದ ಧಾಮ, ಹಸಿರು ಮನೆ, ಸೇರಿದಂತೆ ಹಲವು ಹೊಸ ಪರಿಕಲ್ಪನೆಯ ಮನೆ, ನಿವೇಶನ, ಕಾಟೇಜ್​ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಬಹುತೇಕ ಯಶಸ್ವಿಯಾಗಿ ಜನಪ್ರಿಯವಾಗಿವೆ. ಈಗ ಸ್ಟೂಡೆಂಟ್ ಹೌಸ್ (ವಿದ್ಯಾರ್ಥಿ ನಿಲಯಗಳು) ಎಂಬ ಹೊಸ ಪರಿಕಲ್ಪನೆ ಆರಂಭವಾಗಿದೆ.

ಇದು ಹೂಡಿಕೆಯ ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ವಿದ್ಯಾರ್ಥಿ ನಿಲಯ ಹಳೆಯ ವಸತಿ ತಾಣವಾದರೂ ಅದಕ್ಕೆ ಆಧುನಿಕತೆಯ ಸ್ಪರ್ಶ ನೀಡಿ ಹೂಡಿಕೆಯಲ್ಲಿ ಯಶಸ್ವಿಗೊಳಿಸಲು ರಿಯಾಲ್ಟಿ ಕಂಪನಿಗಳು ಮುಂದಾಗಿವೆ.

ರಿಯಲ್ ಎಸ್ಟೇಟ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯಿಂದ ತತ್ತರಿಸಿರುವ ಕ್ಷೇತ್ರಕ್ಕೆ ವಿದ್ಯಾರ್ಥಿ ವಸತಿ ಚೇತರಿಕೆ ನೀಡಬಹುದು ಎಂಬುದು ರಿಯಾಲ್ಟಿ ಕಂಪನಿಗಳ ನಿರೀಕ್ಷೆಯಾಗಿದೆ. ಸದ್ಯ ಮಾರಾಟವಾಗದೇ ಖಾಲಿ ಇರುವ ಅಪಾರ್ಟ್​ವೆುಂಟ್​ಗಳನ್ನು ಸ್ಟೂಡೆಂಟ್ ಹೌಸಿಂಗ್​ಗೆ ಬದಲಾಯಿಸಿಕೊಳ್ಳುವ ಚಿಂತನೆ ಕೂಡ ನಡೆದಿದೆ.

ಎಲ್ಲೆಲ್ಲಿ ಇದೆ ಸ್ಟೂಡೆಂಟ್ ಹೌಸ್ ಹೂಡಿಕೆ

ಸ್ಟೂಡೆಂಟ್ ಹೌಸ್ ಮೇಲೆ ಪ್ರಸ್ತುತ ಮಹಾ ನಗರಗಳಾದ ಬೆಂಗಳೂರು, ಪುಣೆ, ದೆಹಲಿ, ಮುಂಬೈ, ಹೈದರಾಬಾದ್, ಮೈಸೂರು ಸೇರಿದಂತೆ ರಾಷ್ಟ್ರದ ಬೃಹತ್ ಮಹಾನಗರಗಳಲ್ಲಿ ಹೂಡಿಕೆ ಮಾಡಲಾಗಿದೆ. ಮಹಾನಗರಗಳಿಂದ ಈಗ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಗೂ ಇದು ಹರಡುತ್ತಿದೆ. ಕಾಲೇಜು, ವೃತ್ತಿ ಶಿಕ್ಷಣ ಕೇಂದ್ರಗಳು ತಲೆ ಎತ್ತಿರುವ ಕಡೆಗಳಲ್ಲಿ ಹೂಡಿಕೆ ಉತ್ತಮವಾಗಿದೆ. ಭವಿಷ್ಯದಲ್ಲಿ ಸಣ್ಣ ಮಟ್ಟದ ಪಟ್ಟಗಳಿಗೂ ವ್ಯಾಪಿಸುವ ನಿರೀಕ್ಷೆ ಇದೆ.

ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಅಮೆರಿಕಾದ ರಿಯಾಲ್ಟಿ ಕ್ಷೇತ್ರದಲ್ಲಿ ಸ್ಟೂಡೆಂಟ್ ಹೌಸ್ ಉತ್ತಮ ಬೇಡಿಕೆ ಹೊಂದಿದೆ. ಇಂಗ್ಲೆಂಡ್​ನ ಆಕ್ಸ್​ಫರ್ಡ್ ನಗರದಲ್ಲಿ ಈ ಕ್ಷೇತ್ರದ ಮೇಲೆ ಬೃಹತ್ ಕಂಪನಿಗಳು ಹಣ ಹೂಡಿಕೆ ಮಾಡಿವೆ. ಭಾರತದಲ್ಲೂ ಭವಿಷ್ಯದಲ್ಲಿ ಈ ಕ್ಷೇತ್ರಕ್ಕೆ ತುಂಬಾ ಅವಕಾಶ ಲಭ್ಯವಾಗಲಿದೆ ಎನ್ನುತ್ತಾರೆ ರಿಯಾಲ್ಟಿ ಕ್ಷೇತ್ರದ ತಜ್ಞರು.

ರಾಷ್ಟ್ರದಲ್ಲಿ 35 ಕೋಟಿ ವಿದ್ಯಾರ್ಥಿಗಳು

ರಾಷ್ಟ್ರದಲ್ಲಿ 18ರಿಂದ 24ರ ವಯೋಮಾನದ ಸುಮಾರು 25 ಕೋಟಿ ವಿದ್ಯಾರ್ಥಿಗಳು ಇದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಇವರಲ್ಲಿ ಬಹುತೇಕ ಮಂದಿ ಉನ್ನತ ಶಿಕ್ಷಣ ಪಡೆಯುವ ಮನಸು ಹೊಂದಿದ್ದಾರೆ. ಹೀಗಾಗಿ ವಿದ್ಯಾರ್ಥಿ ನಿಲಯಗಳ ಮೇಲೆ ಹೂಡಿಕೆ ಮಾಡಿದರೆ ವಹಿವಾಟು ಉತ್ತಮವಾಗುತ್ತದೆ ಎಂಬುದು ರಿಯಾಲ್ಟಿ ಕಂಪನಿಗಳ ಚಿಂತನೆ.

ರಾಜ್ಯ ಹಾಗೂ ತಮಿಳುನಾಡು ದಕ್ಷಿಣ ಭಾರತದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವಲ್ಲಿ ಮುಂದಿವೆ. ಎರಡು ರಾಜ್ಯಗಳಲ್ಲಿ ತಲಾ 1 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳ ವಸತಿಯಲ್ಲಿ ಪುಣೆ ಹಾಗೂ ಬೆಂಗಳೂರು ಸದ್ಯ ಬೇಡಿಕೆ ನಗರಗಳಾಗಿವೆ.

ಮುಂಬೈ ಹಾಗೂ ದೆಹಲಿಯಲ್ಲೂ ಬೇಡಿಕೆ ಇದ್ದರೂ ಆಸ್ತಿ ದರ ಅಧಿಕವಾಗಿರುವುದರಿಂದ ರಿಯಾಲ್ಟಿ ಕಂಪನಿಗಳು ದಕ್ಷಿಣ ಭಾರತದತ್ತ ಕಣ್ಣು ನೆಟ್ಟಿವೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಕೂಡ ಈ ವಲಯದಲ್ಲಿ ಬೇಡಿಕೆ ಹೆಚ್ಚಾಗಲು ಕಾರಣ.

ಬೆಂಗಳೂರು ಆಕರ್ಷಣೆ

ಸ್ಟೂಡೆಂಟ್ ಹೌಸಿಂಗ್ ಹೂಡಿಕೆಗೆ ಸದ್ಯ ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳಿ, ಮಂಗಳೂರು ಸೂಕ್ತವಾದ ಸ್ಥಳವಾಗಿವೆ. ಈ ನಗರಗಳಲ್ಲಿ ರಾಜ್ಯದ ಹೆಸರಾಂತರ ಶಿಕ್ಷಣ ಸಂಸ್ಥೆಗಳು ಇರುವುದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕಾಗಿ ಈ ನಗರಗಳಿಗೆ ತೆರಳುತ್ತಾರೆ. ಇದನ್ನು ರಿಯಾಲ್ಟಿ ಕಂಪನಿಗಳು ಗಮನಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ವಿದ್ಯಾರ್ಥಿ ನಿಲಯಗಳನ್ನು ನಿರ್ವಿುಸುವ ಚಿಂತನೆ ನಡೆಸಿವೆ. ಖಾಲಿ ಇರುವ ಅಪಾರ್ಟ್​ವೆುಂಟ್​ಗಳನ್ನು ಇದಕ್ಕೆ ಬಳಸಿಕೊಳ್ಳುವ ಚಿಂತನೆ ಕೂಡ ನಡೆದಿದೆ.

ಸವಾಲು ಅಧಿಕ

ಸ್ಟೂಡೆಂಟ್ ಹೌಸಿಂಗ್ ವಲಯ ಆಕರ್ಷಕವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವುದು ದೊಡ್ಡ ಸವಾಲು ಎದುರಾಗುತ್ತದೆ. ಬಹುತೇಕ ನಗರಗಳಲ್ಲಿ ಪಿಜಿಗಳು ತಲೆ ಎತ್ತಿವೆ. ಅಲ್ಲದೆ ಶಿಕ್ಷಣ ಸಂಸ್ಥೆಗಳು ವಸತಿ ನಿಲಯ ಹೊಂದಿವೆ. ಇನ್ನು ವಿದ್ಯಾರ್ಥಿಗಳು ಬಾಡಿಗೆ ಮನೆ ಪಡೆದು ಎಲ್ಲರೂ ಸೇರಿ ಬಾಡಿಗೆ ಪಾವತಿ ಮಾಡುವ ವಿಧಾನವೂ ಇದೆ. ಇವುಗಳ ನಡುವೆ ಸ್ಟೂಡೆಂಟ್ ಹೌಸಿಂಗ್ ವಿದ್ಯಾರ್ಥಿಗಳನ್ನು ಸೆಳೆಯಬೇಕಾಗಿದೆ. ಹೀಗಾಗಿ ಇದು ದೊಡ್ಡ ಸವಾಲು ಎನ್ನುತ್ತಾರೆ ರಿಯಾಲ್ಟಿ ಕ್ಷೇತ್ರದ ತಜ್ಞರು.

Leave a Reply

Your email address will not be published. Required fields are marked *