ಆಸ್ತಿ ವಿವರ ಸಲ್ಲಿಸದಿದ್ದರೆ ಸದಸ್ಯತ್ವ ವಜಾ!

>

ವೇಣುವಿನೋದ್ ಕೆ.ಎಸ್.ಮಂಗಳೂರು
ಪ್ರತೀ ವರ್ಷ ಆಸ್ತಿ ವಿವರಗಳನ್ನು ಸಕಾಲದಲ್ಲಿ ಸಲ್ಲಿಸದೆ ಉದಾಸೀನ ತೋರಿಸಿದ್ದಲ್ಲದೆ, ನೊಟೀಸ್ ನೀಡಿದರೂ ಸ್ಪಂದಿಸದ ದ.ಕ. ಜಿಲ್ಲೆಯ ಮೂವರು ಗ್ರಾ.ಪಂ.ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ವಜಾಗೊಳಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್(ಗ್ರಾ.ಪಂ, ತಾ.ಪಂ, ಜಿ.ಪಂ ಸದಸ್ಯರ ಆಸ್ತಿ ಘೋಷಣೆ) ನಿಯಮಗಳ 2016ರ ನಿಯಮ 3(1)ರನ್ವಯ ನಮೂನೆ-1ರಲ್ಲಿ ಪ್ರತಿಯೊಬ್ಬ ಸದಸ್ಯ ತಾನು ಹಾಗೂ ತನ್ನ ಅವಿಭಕ್ತ ಕುಟುಂಬದ ಎಲ್ಲ ಸದಸ್ಯರು ಎರಡು ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯನ್ನು ಮತ್ತು ಹೊಣೆಗಾರಿಕೆ ಹೊಂದಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಬೇಕು.
ಸದಸ್ಯರು ತಮ್ಮ ಪದಾವಧಿ ಪ್ರಾರಂಭವಾದ ದಿನಾಂಕದಿಂದ ಮೂರು ತಿಂಗಳ ಒಳಗೆ ಮತ್ತು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಅವರ ಅಧಿಕಾರ ಅವಧಿ ಮುಗಿಯುವ ತನಕ ಪ್ರತೀ ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳ ಒಳಗೆ ಸಂಬಂಧಿಸಿದ ಗ್ರಾ.ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಮೂಲಕ ದಾಖಲು ಮಾಡಬೇಕು ಎನ್ನುತ್ತದೆ ನಿಯಮಾವಳಿ.
ಗ್ರಾಮ ಸ್ವರಾಜ್ ಅಧಿನಿಯಮದ ಪ್ರಕರಣ 43-ಬಿ(2)ರ ಅನ್ವಯ ಆಯಾ ಪಂಚಾಯಿತಿ ಪಿಡಿಒ ಎಲ್ಲಾ ಸದಸ್ಯರು ದಾಖಲಿಸಿದ ಘೋಷಣೆ ಸ್ವೀಕರಿಸಬೇಕು ಮತ್ತು ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಬೇಕು. ಒಂದು ವೇಳೆ ತಡವಾಗಿ ಸಲ್ಲಿಸಿದ್ದಲ್ಲಿ ವರ್ಷದ ಜುಲೈ ಮೊದಲನೇ ವಾರದಲ್ಲಿ ಘೋಷಣೆ ದಾಖಲಿಸಿದ ಸದಸ್ಯರ ಹಾಗೂ ಘೋಷಿಸದವರ ಪಟ್ಟಿ ಕಳುಹಿಸಬೇಕು.

ಯಾರೆಲ್ಲ ವಜಾ?
2017-18ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ಘೋಷಣೆ ಮಾಡದ ದ.ಕ ಜಿಲ್ಲೆಯ ಒಟ್ಟು ಮೂವರು ಗ್ರಾ.ಪಂ ಸದಸ್ಯರು ವಜಾಗೊಂಡಿದ್ದು, ಅವರ ಸ್ಥಾನವನ್ನು ಆಯೋಗ ಖಾಲಿ ಎಂದು ಘೋಷಿಸಿ ಆದೇಶವನ್ನೂ ಹೊರಡಿಸಿದೆ. ಮಂಗಳೂರು ತಾಲೂಕು ಮುಚ್ಚೂರು ಗ್ರಾಮ ಪಂಚಾಯಿತಿ ಮುಚ್ಚೂರು-2ನೇ ಕ್ಷೇತ್ರದ ಸದಸ್ಯೆ ಶೋಭಾ ಸುರೇಂದ್ರ, ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾ.ಪಂ.ನ ಅಮ್ಮುಂಜೆ ಕ್ಷೇತ್ರದ ಸದಸ್ಯ ನವೀನ್ ಹಾಗೂ ಬಂಟ್ವಾಳ ತಾಲೂಕು ಕನ್ಯಾನ ಗ್ರಾ.ಪಂನ ಜ್ಯೋತಿ ಎಂಬ ಮೂವರ ಸದಸ್ಯತ್ವ ರದ್ದಾಗಿದೆ. ಆಯೋಗ ನೀಡಿರುವ ವಿವರಣೆಯಂತೆ ಮೂವರೂ ಸದಸ್ಯರೂ 2017-18ರ ಆಸ್ತಿ ವಿವರ ಸಲ್ಲಿಸಿಲ್ಲ. ಇದಕ್ಕಾಗಿ ಅವರ ಸದಸ್ಯತ್ವವನ್ನು ಪಂಚಾಯತ್‌ರಾಜ್ ಅಧಿನಿಯಮ ಪ್ರಕರಣ 4-3ಬಿ(4)ರ ಅನ್ವಯ ಯಾಕಾಗಿ ರದ್ದುಪಡಿಸಬಾರದು ಎಂಬುದಕ್ಕೆ 20-2-2019ರಂದು ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಆಯೋಗದಿಂದ ಪಿಡಿಒ ಮೂಲಕ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಮೂವರೂ ಇದನ್ನು ಮಾನ್ಯ ಮಾಡಿಲ್ಲ. ಬಳಿಕ ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವುದು, ಆಯೋಗದ ಮುಂದೆ ಖುದ್ದಾಗಿ ಹಾಜರಾಗುವಂತೆ ರಿಜಿಸ್ಟರ್ ಅಂಚೆ ಮೂಲಕ ನೋಟಿಸ್ ನೀಡಲಾಗಿದೆ. ಇದಾದ ಬಳಿಕವೂ ಸದಸ್ಯರು ವಿವರಣೆ ನೀಡದ ಕಾರಣ ಚುನಾವಣಾ ಆಯುಕ್ತರು ಕ್ರಮ ಕೈಗೊಂಡಿದ್ದಾರೆ.

ಹೈಕೋರ್ಟ್‌ಗೆ ಹೋಗಲು ಅವಕಾಶ
ಚುನಾವಣಾ ಆಯೋಗ ಸದಸ್ಯತ್ವ ರದ್ದುಗೊಳಿಸಿದ್ದರೂ, ಅಂತಹ ಸದಸ್ಯರಿಗೆ ತಮ್ಮ ಸದಸ್ಯತ್ವ ಉಳಿಸಿಕೊಳ್ಳಲು ನ್ಯಾಯಾಂಗದಲ್ಲಿ ಅವಕಾಶವಿದೆ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ.

ಸರ್ವರ್ ಸಮಸ್ಯೆ: 2018-19ನೇ ಸಾಲಿನ ಆಸ್ತಿ ವಿವರ ಸಲ್ಲಿಸಲು ಮೇ ತಿಂಗಳಲ್ಲಿ ಅವಕಾಶ ನೀಡಲಾಗಿದೆ. ಪಿಡಿಒಗಳ ಮೂಲಕ ಜಿಪಂ/ತಾಪಂ/ಗ್ರಾ.ಪಂ ಸದಸ್ಯರು ವಿವರ ಸಲ್ಲಿಸಬೇಕಾಗುತ್ತದೆ. ಆದರೆ ಸರ್ವರ್ ಎರರ್ ಕಾರಣದಿಂದಾಗಿ ವಿವರ ಸಲ್ಲಿಕೆಗೂ ವಿಳಂಬ ಆಗುತ್ತಿರುವ ಬಗ್ಗೆ ದೂರುಗಳಿವೆ.

ನಮ್ಮ ಪಂಚಾಯಿತಿ ಉಪಾಧ್ಯಕ್ಷರ ವರ್ತನೆ ಸರಿಯಿಲ್ಲ ಎಂಬ ಕಾರಣಕ್ಕೆ ನಾನು ಕಲಾಪಗಳಿಗೂ ಹೋಗಿಲ್ಲ. ಆಸ್ತಿ ವಿವರ ಸಲ್ಲಿಸಿಲ್ಲ. ಆಯೋಗದ ಆದೇಶ ಕೈಸೇರಿದೆ.
-ಜ್ಯೋತಿ, ಕನ್ಯಾನ ಗ್ರಾ.ಪಂ.