ಬಜೆಟ್ ಎಫೆಕ್ಟ್ ಏರಲಿದೆ ಭೂಮಿ ಬೆಲೆ

| ಹೊಸಹಟ್ಟಿ ಕುಮಾರ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್​ನಲ್ಲಿ ಅಭಿವೃದ್ಧಿಯ ಅವಕಾಶಗಳನ್ನು ರಾಮನಗರ ಬಾಚಿಕೊಂಡಿದೆ. ಹೀಗಾಗಿ ರಿಯಾಲ್ಟಿ ಕ್ಷೇತ್ರದ ಕೇಂದ್ರಬಿಂದುವಾಗಿ ರಾಮನಗರ ಹೊರಹೊಮ್ಮಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಘೋಷಣೆ ಮಾಹಿತಿ ತಂತ್ರಜ್ಞಾನ ನಗರ ಬೆಂಗಳೂರಿನ ಸೆರಗಿನಲ್ಲಿರುವ ರಾಮನಗರ ಜಿಲ್ಲೆಗೆ ಅವಕಾಶಗಳ ಬಾಗಿಲನ್ನು ಮುಕ್ತಗೊಳಿಸಿದೆ.

ರಾಜೀವ್​ಗಾಂಧಿ ಆರೋಗ್ಯ ವಿವಿ ಸ್ಥಾಪನೆ ಕೆಲಸ ತೀವ್ರಗೊಳ್ಳುತ್ತಿದ್ದಂತೆ ರಿಯಾಲ್ಟಿ ಕ್ಷೇತ್ರ ಆಕರ್ಷಣೆಯಾಗಿರುವ ರಾಮನಗರ ಜಿಲೆ, ಈಗ ಬಜೆಟ್ ಘೋಷಣೆ ನಂತರ ಮತ್ತೊಮ್ಮೆ ರಿಯಾಲ್ಟಿಯ ಸೂಜಿಗಲ್ಲಾಗಿದೆ.

ಜಿಲ್ಲೆಯ ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ನಿರ್ವಣ, ಜಿಲ್ಲಾ ಕೇಂದ್ರ ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆರ್ಟ್ಸ್ ಮತ್ತು ಕ್ರಾಫ್ಟ್ ಗ್ರಾಮ ಕಣ್ವ, ಜಲಾಶಯದ ತಪ್ಪಲಲ್ಲಿ ಚಿಲ್ಡ್್ರ್ ವರ್ಲ್ಡ್ ನಿಮಾಣವಾಗುತ್ತಿರುವುದು ಜಿಲ್ಲೆಯ ಆರ್ಥಿಕ ಸ್ಥಿತಿಗತಿಯನ್ನೇ ಬದಲಾಯಿಸಲಿದೆ ಎಂಬುದು ತಜ್ಞರ ಅಭಿಮತ.

ಕೃಷಿ ಪ್ರಧಾನ ಜಿಲ್ಲೆಯಾದ ರಾಮನಗರ ಇನ್ನು ಮುಂದೆ ಆರ್ಥಿಕ ಚುಟುವಟಿಕೆಗಳ ಕೇಂದ್ರವಾಗಲಿದೆ. ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ವಿಶ್ವದ ಹೂಡಿಕೆದಾರರ ಕಣ್ಣು ಈಗ ರಾಮನಗರದ ಮೇಲೆ ಬಿದ್ದಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ರಾಮನಗರ ಅಭಿವೃದ್ಧಿಗೆ ಬಜೆಟ್​ನಲ್ಲಿ ಘೋಷಿಸಿರುವ ಯೋಜನೆಗಳು ಹೂಡಿಕೆದಾರರನ್ನು ಮತ್ತಷ್ಟು ಸೆಳೆದಿದೆ.

ಆಹ್ಲಾದಕರ ವಾತಾವರಣ, ಮೂಲಸೌಲಭ್ಯಗಳಾದ ನೀರು, ವಿದ್ಯುತ್, ರಸ್ತೆ ಹಾಗೂ ಜಮೀನು ನೀಡಲು ಸರ್ಕಾರ ಉದಾರವಾಗಿ ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಬೃಹತ್ ರಿಯಾಲ್ಟಿ ಕಂಪನಿಗಳು ರಾಮನಗರಕ್ಕೆ ತಮ್ಮ ಚಟುವಟಿಕೆ ವಿಸ್ತರಿಸಲು ಮುಂದಾಗಿವೆ. ಹೀಗಾಗಿ ಇನ್ನು ರಾಮನಗರ ಜಿಲ್ಲೆಯ ಭೂಮಿಗೆ ಚಿನ್ನದ ಬೆಲೆ ಬರಲಿದೆ. ರಾಮನಗರದ ಪಕ್ಕದ ತಾಲೂಕುಗಳಾದ ಚನ್ನಪಟ್ಟಣ, ಮಾಗಡಿ ಕೂಡ ಈ ಯೋಜನೆಗಳ ಲಾಭ ಪಡೆಯಲಿವೆ. ತೀವ್ರ ಹಿಂದುಳಿದ ತಾಲೂಕು ಎಂದೇ ಬಿಂಬಿತವಾಗುತ್ತಿದ್ದ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ವಣಗೊಳ್ಳುತ್ತಿರುವುದು ಆರ್ಥಿಕ ಚಟುವಟಿಕೆಗೆ ಚೇತರಿಕೆ ನೀಡಿದೆ. ವೈದ್ಯಕೀಯ ಕಾಲೇಜು ನಿರ್ಮಾಣ ಭೂಮಿಗೆ ತೀವ್ರ ಬೇಡಿಕೆ ತಂದಿದೆ.

ರಾಷ್ಟ್ರೀಯ ಹೆದ್ದಾರಿ: ರಾಜ್ಯ ಹೆದ್ದಾರಿಯಾಗಿದ್ದ ಬೆಂಗಳೂರು-ಮೈಸೂರು ರಸ್ತೆ ಈಗ ಮೇಲ್ದರ್ಜೆಗೇರಿ ರಾಷ್ಟ್ರೀಯ ಹೆದ್ದಾರಿ-275 ಆಗಿದೆ. ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. 6 ಪಥಗಳ ಹೆದ್ದಾರಿ ನಿರ್ವಣಗೊಳ್ಳಲಿದೆ. ಹೆದ್ದಾರಿ ಮೂಲಕ ಬೆಂಗಳೂರು, ಮೈಸೂರು ಬಂಟ್ವಾಳ, ಮಂಗಳೂರು, ಕೇರಳ ಹಾಗೂ ತಮಿಳುನಾಡು ರಾಜ್ಯಗಳನ್ನು ಸಂರ್ಪಸಲಿದೆ. ಹೀಗಾಗಿ ಆರ್ಥಿಕ ಚಟುವಟಿಕೆ ವೇಗ ಪಡೆಯಲಿವೆ.

ಭೂಮಿಯೇ ಬಂಗಾರ!

ಸರ್ಕಾರದ ಎಲ್ಲ ಯೋಜನೆಗಳು ರಾಮನಗರ ಜಿಲ್ಲೆಯನ್ನು ಪ್ರವಾಸಿ ಹಾಗೂ ಆರ್ಥಿಕ ಕೇಂದ್ರ ಮಾಡುವುದೇ ಆಗಿವೆ. ತೀವ್ರ ಒತ್ತಡದಿಂದ ಬಳಲುತ್ತಿರುವ ಬೆಂಗಳೂರನ್ನು ಒತ್ತಡದಿಂದ ಮುಕ್ತಗೊಳಿಸಲು ಇರುವ ಏಕೈಕ ಮಾರ್ಗ ಬೆಂಗಳೂರು ಸುತ್ತಲಿನ ಪ್ರದೇಶಗಳಿಗೆ ಯೋಜನೆಗಳನ್ನು ವರ್ಗಾಯಿಸುವುದು. ಸದ್ಯ ಬೆಂಗಳೂರಿಗೆ ಸಮೀಪದಲ್ಲಿರುವ ಪ್ರದೇಶ ರಾಮನಗರ. ಅಲ್ಲದೆ ಸಿಎಂ ಪ್ರತಿನಿಧಿಸುವ ಕ್ಷೇತ್ರವಾಗಿರುವುದರಿಂದ ಮೂಲಸೌಕರ್ಯಗಳಿಗೆ ಕೊರತೆ ಇರುವುದಿಲ್ಲ. ಹೀಗಾಗಿ ರಾಮನಗರ ಪ್ರಸ್ತುತ ರಾಜ್ಯದಲ್ಲೇ ಭೂಮಿಗೆ ಅಧಿಕ ಬೇಡಿಕೆ ಹೊಂದಿರುವ ಪ್ರದೇಶವಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ, ಹೊಸ ಯೋಜನೆಗಳಾದ ಕಲಾ ಗ್ರಾಮ, ಮಕ್ಕಳ ವರ್ಲ್ಡ್​ಗೆ ಸಾವಿರಾರು ಎಕರೆ ಪ್ರದೇಶದ ಭೂಮಿ ಅಗತ್ಯ ಇದೆ. ಹೊಸ ಯೋಜನೆಗಳು ಖಾಸಗಿ ಸಹಭಾಗಿತ್ವದಲ್ಲಿ ಚಾಲನೆಗೊಳ್ಳುವುದರಿಂದ ಭೂಮಿ ನೀಡುವವರಿಗೆ ಹೆಚ್ಚು ಬೆಲೆ ಸಿಗಲಿದೆ. ಹೆಚ್ಚು ಹಣ ಕೊಟ್ಟು ಜಮೀನು ಖರೀದಿಸಿ ಯೋಜನೆಗಳನ್ನು ಆರಂಭಿಸಲು ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಇದರಿಂದ ರಾಮನಗರ ಜಿಲ್ಲೆ ಪ್ರಸ್ತುತ ಬೆಂಗಳೂರು ಹೊರತುಪಡಿಸಿ ದುಬಾರಿ ನಗರವಾಗಲಿದೆ. ಭೂಮಿಗೆ ಬೇಡಿಕೆ ಅಧಿಕಗೊಳ್ಳುವುದರಿಂದ ರೈತರು ಹೆಚ್ಚು ಬೆಲೆಗೆ ಭೂಮಿ ಮಾರಾಟ ಮಾಡಲು ಮುಂದಾಗುತ್ತಾರೆ. ಹೀಗಾಗಿ ಆರ್ಥಿಕ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ಭವಿಷ್ಯದಲ್ಲಿ ಬೆಂಗಳೂರು ಹಾಗೂ ರಾಮನಗರ ಒಂದುಗೂಡಲಿವೆ.

ಮೇಕೆದಾಟು ಯೋಜನೆ ವೇಗ

ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಮೇಕೆದಾಟು ನೀರಾವರಿ ಯೋಜನೆ ಎಲ್ಲ ಅಡೆತಡೆಗಳು ನಿವಾರಣೆಯಾಗಿ ಪೂರ್ವ ಕಾರ್ಯಸಾಧ್ಯತಾ ವರದಿ ಪಡೆಯಲು ಸರ್ಕಾರ ಮುಂದಾಗಿದೆ. ವರದಿ ಕೈ ಸೇರುತ್ತಲೇ ಯೋಜನೆ ಜಾರಿಯಾಗಲಿದೆ. ಇದರಿಂದ ಕನಕಪುರ ಹಾಗೂ ಸುತ್ತಲಿನ ಪ್ರದೇಶಗಳ ಕೃಷಿ ಭೂಮಿಗೆ ನೀರು ದೊರೆಯಲಿದೆ. ಈ ಯೋಜನೆ ಕೂಡ ಭವಿಷ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲಿದೆ.

ತೆಲಂಗಾಣ ಸೇರಿ ಕೆಲ ರಾಜ್ಯಗಳಲ್ಲಿ ಮನೆ ಖರೀದಿ ಮೇಲೆ ಸ್ಟ್ಯಾಂಪ್​ಡ್ಯೂಟಿ ಶೇ.2 ಇದೆ. ಮೆಟ್ರೋ 3ನೇ ಹಂತ, ಪೆರಿಫರಲ್ ವರ್ತಲ ರಸ್ತೆ, 6 ಎಲಿವೇಟೆಡ್ ಕಾರಿಡಾರ್ ಸೇರಿ ನಗರದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಟ್ರಾಫಿಕ್ ಸಮಸ್ಯೆ ಇಳಿಕೆಯಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ವರದಾನವಾಗಲಿದೆ.

| ಸುರೇಶ್ ಹರಿ, ಉಪಾಧ್ಯಕ್ಷ, ಕ್ರೆಡೈ ಬೆಂಗಳೂರು