ಪ್ರಾಪರ್ಟಿ ಕಾರ್ಡ್ ಕಡ್ಡಾಯದಿಂದ ಭಾರಿ ಜನಸಂದಣಿ

ಮಂಗಳೂರು:  ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಆದೇಶ ಅಂತಿಮಗೊಂಡ ಬಳಿಕ ಯುಪಿಒಆರ್(ನಗರ ಆಸ್ತಿ ಮಾಲೀಕತ್ವದ ಹಕ್ಕು ದಾಖಲೆಗಳ ಯೋಜನೆ) ಕಚೇರಿಯಲ್ಲಿ ದಿಢೀರ್ ಜನದಟ್ಟಣೆ ಹೆಚ್ಚಾಗಿದೆ.

ಪ್ರಾಪರ್ಟಿ ಕಾರ್ಡ್‌ಗೆ ಅರ್ಜಿ ಹಾಕುವವರ ಸಂಖ್ಯೆ ದುಪ್ಪಟ್ಟಾಗಿದ್ದು, ಕಚೇರಿ ಸಿಬ್ಬಂದಿ ನಿಭಾಯಿಸಲಾಗದೆ ಕಂಗಾಲಾಗಿದ್ದಾರೆ. ಕರಡು ಹಾಗೂ ಅಂತಿಮ ಪ್ರಾಪರ್ಟಿ ಕಾರ್ಡ್ ಪಡೆಯಲು ಬರುವವರು ಅವರೊಂದಿಗೆ ಕಡ್ಡಾಯ ಎಂದು ಗಾಬರಿಯಾಗಿ ಅರ್ಜಿ ಹಾಕಲು ಬರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಈ ಬೆಳವಣಿಗೆಯಿಂದಾಗಿ ನಿಜಕ್ಕೂ ಆಸ್ತಿ ನೋಂದಣಿಗೆಂದು ತುರ್ತಾಗಿ ಪಿ.ಆರ್.ಕಾರ್ಡ್ ಪಡೆಯಲು ಬರುವವರಿಗೂ ಸಮಸ್ಯೆಯುಂಟಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಕೆಲದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪ್ರಾಪರ್ಟಿ ಕಾರ್ಡ್ ಬಗ್ಗೆ ಬಗ್ಗೆ ಸಾರ್ವಜನಿಕರು ಆತುರಪಡುವ, ಅನಗತ್ಯ ಆತಂಕಗೊಳ್ಳುವ ಅಗತ್ಯವಿಲ್ಲ. ಸದ್ಯ ಆಸ್ತಿಯ ಮಾರಾಟಕ್ಕೆ ನೋಂದಣಿ ಸಂದರ್ಭ ಮಾತ್ರ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ.
ಪ್ರಸ್ತುತ ದಿನಂಪ್ರತಿ 100ರಿಂದ 120ರಷ್ಟು ಕರಡು ಪ್ರಾಪರ್ಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. 80-90ರಷ್ಟು ಅಂತಿಮ ಕಾರ್ಡ್ ನೀಡಲಾಗುತ್ತಿದೆ.

ದಾಖಲೆ ಸಲ್ಲಿಕೆಗೆ ಪ್ರತ್ಯೇಕ ಕೇಂದ್ರ
ಪ್ರತಿನಿತ್ಯ ಅರ್ಜಿ ಸಲ್ಲಿಸುವುದಕ್ಕಾಗಿ ಯುಪಿಒಆರ್ ಕಚೇರಿಗೆ ನೂರಾರು ಮಂದಿ ಎಡತಾಕುತ್ತಿದ್ದಾರೆ, ಹೀಗಾಗಿ ಸುಗಮ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕಾಗಿ ಅರ್ಜಿ ಹಾಕುವವರ ದಾಖಲೆಗಳನ್ನು ಸಲ್ಲಿಸುವುದು ಹಾಗೂ ದಾಖಲೆಗಳ ಸ್ಕಾೃನ್ ಮಾಡುವುದಕ್ಕಾಗಿ ಅನುಮತಿ ಕೋರಿ ಅಧಿಕಾರಿಗಳು ಈಗಾಗಲೇ ಬೆಂಗಳೂರು ಆಯುಕ್ತರಿಗೆ ಬರೆದಿದ್ದಾರೆ.

ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ವಾಣಿಜ್ಯ ಸಂಕೀರ್ಣದಲ್ಲಿ ಕಚೇರಿ ಪ್ರಾರಂಭಿಸುವ ಪ್ರಸ್ತಾಪವಿದೆ, ಅದಕ್ಕೆ ಬೇಕಾದ ಡಾಟಾ ಸಂಪರ್ಕ ಪಡೆಯುವ ಕೆಲಸ ಆಗಬೇಕಿದೆ. ಅನುಮತಿ ಸಿಕ್ಕಿದ ಬಳಿಕ ಕಚೇರಿ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಟೋಕನ್ ವ್ಯವಸ್ಥೆ
ಪ್ರಾಪರ್ಟಿ ಕಾರ್ಡ್ ವಿತರಣೆ ಸುಗಮ ಉದ್ದೇಶದಿಂದ ಅರ್ಜಿ ಹಾಕುವ ವೇಳೆ ದಾಖಲೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೆ 48 ಗಂಟೆಗಳಲ್ಲಿ ಕರಡು ಕಾರ್ಡ್ ವಿತರಣೆ ಮಾಡುವಂತೆ ದಿನಾಂಕ ನಮೂದಿಸಿ ಟೋಕನ್ ನೀಡಲಾಗುತ್ತದೆ. ನೀಡಲಾದ ದಿನಾಂಕದಂದು ಬಂದು ಕಾರ್ಡ್ ಸಂಗ್ರಹಿಸಬಹುದು. ಆದರೆ ಸದ್ಯ ಬರುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಫೀಲ್ಡ್ ವೆರಿಫಿಕೇಶನ್, ಅಳತೆ ಅಗತ್ಯವಿರುವುದರಿಂದ 10 ದಿನ ಸಮಯ ಪಡೆಯಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಐದು ವರ್ಷ ಹಿಂದೆ ಅರ್ಜಿ ಹಾಕಿದ ಆಸ್ತಿ ಮಾರಾಟವಾಗಿದ್ದು, ಹೊಸ ಮಾಲೀಕರು ಮತ್ತೆ ಅರ್ಜಿ ಹಾಕುತ್ತಿದ್ದಾರೆ, ಇಂಥವನ್ನೆಲ್ಲ ಪರಿಶೀಲಿಸುವಾಗ ಸಮಯ ತಗಲುತ್ತದೆ.

ನಾಗರಿಕರೇ ಗಡಿಬಿಡಿ ಬೇಡ
ಯಾವುದೇ ನಾಗರಿಕರೂ ಗಡಿಬಿಡಿ ಮಾಡದೆ ಬಂದು ಪಿ.ಆರ್.ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು, ಅವಸರ ಮಾಡುವ ಅಗತ್ಯವಿಲ್ಲ ಎಂದು ಭೂದಾಖಲೆಗಳ ಇಲಾಖೆ ಸಹನಿರ್ದೇಶಕಿ ಪ್ರಸಾದಿನಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಎಲ್ಲ ದಾಖಲೆಗಳು ಸರಿ ಇದ್ದಲ್ಲಿ ಈಗಾಗಲೇ ಅಳತೆಯಾಗಿರುವ ಆಸ್ತಿಗಳಿಗೆ ಕರಡು ಪ್ರಾಪರ್ಟಿ ಕಾರ್ಡ್ ಅನ್ನು 48 ಗಂಟೆಯೊಳಗೆ ನೀಡಲಾಗುತ್ತದೆ. ಅಳತೆ ಆಗದೆ ಇರುವ ಕಡತಗಳಲ್ಲಿ 10 ದಿನಗಳಲ್ಲಿ ಅಳತೆ ನಡೆಸಿ ಕಾರ್ಡ್ ವಿತರಿಸುವ ಕಾರ್ಯ ನಡೆಯುತ್ತಿದೆ.

Leave a Reply

Your email address will not be published. Required fields are marked *