ಆಸ್ತಿ ವ್ಯವಹಾರಕ್ಕೆ ತಟ್ಟಲಿದೆ ಗ್ರಹಣ!

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 32 ಕಂದಾಯ ಗ್ರಾಮಗಳಲ್ಲಿ ಮುಂದಿನ ತಿಂಗಳಿನಿಂದ ಆಸ್ತಿ ವ್ಯವಹಾರಕ್ಕೆ ಗ್ರಹಣ ತಟ್ಟಲಿದೆ!
ಪ್ರಸ್ತಾವಿತ ನಗರದ ಕಂದಾಯ ಗ್ರಾಮಗಳಲ್ಲಿ ಡಿ.1ರಿಂದ ಆಸ್ತಿ ಮಾರಾಟ, ಖರೀದಿ ವ್ಯವಹಾರಗಳಿಗೆ ನಗರಾಸ್ತಿ ಮಾಲೀಕತ್ವ ಕಾರ್ಡ್ (ಪಿಆರ್ ಕಾರ್ಡ್) ಕಡ್ಡಾಯಗೊಳಿಸಲಾಗಿರುವುದೇ ಹೊಸ ಸಮಸ್ಯೆ ಸೃಷ್ಟಿಯಾಗಲು ಕಾರಣ.
ನಗರ ವ್ಯಾಪ್ತಿಯಲ್ಲಿ 1,50,428 ಆಸ್ತಿಗಳ ಸರ್ವೇ ಪೂರ್ಣಗೊಂಡಿದ್ದು, ಇದರಲ್ಲಿ 18,491 ಮಂದಿಗೆ ಮಾತ್ರ ಪಿ.ಆರ್. ಕಾರ್ಡ್ ವಿತರಣೆಯಾಗಿದೆ. ಯೋಜನೆ ಜಾರಿಗೊಂಡ 2012- 13ನೇ ಸಾಲಿನಲ್ಲಿ ಪ್ರಥಮ ಸರ್ವೇ ನಡೆದಿದ್ದು, ಬಳಿಕ ನಿರ್ಮಾಣಗೊಂಡ ಹೊಸ ಆಸ್ತಿಗಳ ಸಂಖ್ಯೆ ಹಳೇ ಪಟ್ಟಿಗೆ ಸೇರ್ಪಡೆಯಾಗಬೇಕಿದೆ. ಅಂದರೆ ಕಾರ್ಡ್ ದೊರೆತಿರುವವರ ಸಂಖ್ಯೆ ಶೇ.20ರಷ್ಟೂ ದಾಟಲೂ ಸಾಧ್ಯವಿಲ್ಲ.

ಅವಸರದ ಹೇರಿಕೆ: ಪ್ರಥಮ ಹಂತದಲ್ಲಿ ನಗರಾಸ್ತಿ ಮಾಲೀಕತ್ವದ ಕಾರ್ಡ್ ಪರಿಚಯಿಸಲ್ಪ್ಪಡುತ್ತಿರುವ ರಾಜ್ಯದ ಆರು ಜಿಲ್ಲೆಗಳಲ್ಲಿ ಮಂಗಳೂರಾಗಿದ್ದು, ಸಮಸ್ಯೆ ಇಲ್ಲಿಂದಲೇ ಆರಂಭಗೊಂಡಿದೆ. 2012ರಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಆರಂಭಿಸಿದ ಸರ್ಕಾರ ಆರು ವರ್ಷ ಸುಮ್ಮನಿದ್ದು, ಈಗ ಏಕಾಏಕಿ ಜನರ ಮೇಲೆ ಹೇರಿರುವುದು ಟೀಕೆಗೆ ಒಳಗಾಗಿದೆ.
ಯೋಜನೆ ಒಳ್ಳೆಯದೇ, ಆದರೆ ಕಾಲಾವಕಾಶ ಒದಗಿಸದಿದ್ದರೆ ಸಾರ್ವಜನಿಕರು ಹೆಚ್ಚು ತೊಂದರೆಗೊಳಗಾಗಲಿದ್ದಾರೆ. ಕಾರ್ಡ್ ದೊರೆಯುವ ತನಕ ಬಡ ಕುಟುಂಬದ ಹೆತ್ತವರು ತಮ್ಮ ಆಸ್ತಿಯ ಪಾಲು ಮಾರಾಟ ಮಾಡಿ ಮಗಳಿಗೆ ಮದುವೆ ಮಾಡುವುದು ಅಸಾಧ್ಯ. ಕುಟುಂಬದ ಸದಸ್ಯರಿಗೆ ಕೂಡ ಪಾಲು ವರ್ಗಾವಣೆ ಅಸಾಧ್ಯ ಎಂದು ಸರ್ಕಾರದ್ದೇ ಕೆಲಸ ನಿರ್ವಹಿಸುತ್ತಿರುವ ಕಾನೂನು ತಜ್ಞರೊಬ್ಬರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಎನ್‌ಆರ್‌ಐಗಳ ಸಂಕಷ್ಟ
ಸಾಮಾನ್ಯವಾಗಿ ದೀಪಾವಳಿ, ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸಂದರ್ಭ ವರ್ಷದಲ್ಲಿ ಒಂದೆರಡು ಬಾರಿ ದೇಶಕ್ಕೆ ಆಗಮಿಸುವ ಅನಿವಾಸಿ ಭಾರತೀಯರು ಆಸ್ತಿ ವ್ಯವಹಾರ ನಡೆಸುವ ಸಂದರ್ಭ ಹೆಚ್ಚು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಊರಿನಲ್ಲಿರುವ ಕನಿಷ್ಠ ಅವಧಿಯಲ್ಲಿ ಪಿ.ಆರ್ ಕಾರ್ಡ್ ಪಡೆಯುವುದು ಸುಲಭವಿಲ್ಲ. ಕಾರ್ಡ್ ಪಡೆಯುವ ತನಕ ವ್ಯವಹಾರ ಸಂದರ್ಭ ಬಳಸಲು ತಾತ್ಕಾಲಿಕ ನಂಬರ್ ಒದಗಿಸಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಹೆಚ್ಚಿನವರ ಅಭಿಪ್ರಾಯ.

ಭ್ರಷ್ಟಾಚಾರಕ್ಕೆ ಅವಕಾಶ ಸಾಧ್ಯತೆ
ಅವಸರದಲ್ಲಿ ಜಾರಿಗೊಳಿಸುವ ಇಂತಹ ನಿಯಮಗಳು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತವೆ. ಸಾರ್ವಜನಿಕರು ಸರ್ವೇ ಆಗಿದ್ದರೂ, ಕಾರ್ಡ್ ಪಡೆಯಲು ಮಧ್ಯವರ್ತಿಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮ ಆಸ್ತಿಯ ಸರ್ವೇ ಕಾರ್ಯ 2012ರಲ್ಲೇ ನಡೆದಿದ್ದು, ಇನ್ನೂ ಕಾರ್ಡ್ ದೊರೆತಿಲ್ಲ ಎಂದು ಸಮಸ್ಯೆ ವಿವರಿಸುತ್ತಾರೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್. ಸರ್ವೇ ಕಾರ್ಯ ಪೂರ್ಣಗೊಂಡು ಕಾರ್ಡ್ ಪಡೆದವರಲ್ಲಿ ಫ್ಲಾೃಟ್ ಮಾಲೀಕರೇ ಅಧಿಕ ಇರಬಹುದು. ಯಾಕೆಂದರೆ ಫ್ಲಾೃಟ್ ನಿರ್ಮಾಣ ಸಂದರ್ಭ ದಾಖಲೆಗಳು ಕ್ರೋಡೀಕರಣಗೊಳ್ಳುವ ಕಾರಣ ಅಧಿಕಾರಿಗಳ ಕೆಲಸ ಸುಲಭವಾಗುತ್ತದೆ ಎನ್ನುತ್ತಾರೆ ಅವರು.

ಮಾಹಿತಿ ಕೊರತೆ
ಆರು ವರ್ಷ ಹಿಂದೆ ನಗರದಲ್ಲಿ ಚಾಲನೆ ಪಡೆದ ಯೋಜನೆಯ ಬಗ್ಗೆ ಇನ್ನೂ ಸಾರ್ವಜನಿಕರಲ್ಲಿ ಸರಿಯಾದ ಮಾಹಿತಿ ಇಲ್ಲ. ಜಿಲ್ಲಾಧಿಕಾರಿಯವರ ವೆಬ್‌ಸೈಟ್‌ನಲ್ಲಿ ಕೂಡ ಅಧಿಸೂಚನೆ ಪ್ರತಿ ದೊರೆಯುವುದಿಲ್ಲ ಎನ್ನುವ ಆಕ್ಷೇಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿವೆ.

ಪ್ರಾಪರ್ಟಿ ಕಾರ್ಡ್ ಕಡ್ಡಾಯ ದಿನ ಮುಂದೂಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಕಾರ್ಡ್ ಸಿದ್ಧತೆ ಕಾರ್ಯ ವೇಗ ಪಡೆದುಕೊಂಡಿದೆ. 22 ಸರ್ವೇಯರ್ ಸಹಿತ ಅಧಿಕಾರಿಗಳ ಪೂರ್ಣ ತಂಡ ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಎಲ್ಲ ವಿಭಾಗಗಳಲ್ಲಿ ಹೆಚ್ಚುವರಿ ಸಿಬಂದಿ ನಿಯೋಜಿಸಲಾಗಿದ್ದು ಸರ್ವೆ ಹಾಗೂ ದಾಖಲೆಗಳ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ. ದಾಖಲೆಗಳನ್ನು ನೀಡಲು ಬಾಕಿ ಇರುವ ಆಸ್ತಿಗಳ ಮಾಲೀಕರು ಶೀಘ್ರ ನೀಡಬೇಕು.
– ಬಿ.ಕೆ.ಕುಸುಮಾಧರ್, ಪ್ರಾಪರ್ಟಿ ಕಾರ್ಡ್ ಯೋಜನಾಧಿಕಾರಿ