More

    ತೂಕ ಇಳಿಸಲು ಸರಿಯಾದ ಆಹಾರಕ್ರಮ, ಶಿಸ್ತು ಅಗತ್ಯ

    ತೂಕ ಇಳಿಸಲು ಸರಿಯಾದ ಆಹಾರಕ್ರಮ, ಶಿಸ್ತು ಅಗತ್ಯಹಿಂದಿನ ಲೇಖನದಲ್ಲಿ ತೂಕ ನೋಡುವ ಯಂತ್ರದಿಂದ ತೂಕ ಕಳೆಯಿರಿ ಅಂತ ಹೇಳಿದ್ದೆ. ಕೆಲವರು, ‘ಸರ್, ಮಶಿನ್ ತಗೊಂಡೆ, ಅದ್ರಿಂದ ತೂಕ ಹೇಗೆ ಕಮ್ಮಿ ಆಗುತ್ತೆ?’ ಅಂತ ಫೋನ್ ಮಾಡ್ತಾ ಇದ್ದಾರೆ. ಅವರು ಮಶಿನ್ ತಮ್ಮ ತೂಕ ಇಳಿಸುತ್ತೆ ಅಂತ ಅಂದುಕೊಂಡಿದ್ದಾರೆ ಪಾಪ! ಅವರಿಗೆ ವಿವರಿಸಿ ಹೇಳೋದ್ರಲ್ಲಿ ನಂದೆ ಎರಡು ಕೆಜಿ ಇಳೀತು! ಮಶಿನ್ ತಗೊಂಡ್ರೆ ತೂಕ ಹೇಗೆ ಕಮ್ಮಿ ಮಾಡಿಕೊಳ್ಳಬಹುದು ಅಂತ ಹೇಳ್ತೇನೆ, ಕೇಳಿ.

    ದಿನಾಲು ಬೆಳಗ್ಗೆ ಶೌಚಾದಿಗಳನ್ನು ಮುಗಿಸಿದ ನಂತರ ನಿಮ್ಮ ತೂಕವನ್ನು ನೋಡಿ ಬರೆದಿಟ್ಟುಕೊಳ್ಳಿ. ನಿಮ್ಮ ಮನಸ್ಸಿಗೆ ನಿಮ್ಮ ತೂಕ ಪದೇಪದೆ ನಾಟಲಿ. ಒಂದು ವೇಳೆ ಹೆಚ್ಚಾಗಿದ್ದರೆ ಮುನ್ನಾ ದಿನ ತೂಕ ಹೆಚ್ಚಾಗುವ ಯಾವ ಪದಾರ್ಥವನ್ನು ತಿಂದಿದ್ದೀರೆಂದು ನೆನಪಿಸಿಕೊಂಡು ಅದನ್ನು ತಿನ್ನಬೇಡಿ. ಕಡಿಮೆಯಾಗುತ್ತಿದೆ ಅನ್ನಿಸಿದರೆ ನಿಮಗೆ ಸ್ಪೂರ್ತಿ ಬರುತ್ತದೆ. ದಿನಕ್ಕೆ ನೂರೇ ಗ್ರಾಂ ತೂಕ ಇಳಿಸಿ. ಅದಕ್ಕಿಂತ ಜಾಸ್ತಿ ಆದರೆ ತೊಂದರೆ. ನಿಮ್ಮ ವಯಸ್ಸು, ಎತ್ತರಕ್ಕೆ ಎಷ್ಟು ತೂಕ ಅಪೇಕ್ಷಣೀಯ ಎಂಬುದನ್ನು ತಿಳಿದುಕೊಂಡು ಅಷ್ಟು ತೂಕ ಪಡೆಯುವ ಪಣ ತೊಡಿ. ಹೆಂಗಸರ ತೂಕ 5 ಅಡಿಗೆ 49 ಕೆಜಿ ಇರಬೇಕು. ನಂತರ ಪ್ರತಿ ಒಂದು ಇಂಚು ಎತ್ತರಕ್ಕೆ 1.7 ಕೆಜಿ ಜಾಸ್ತಿ ಇರಬೇಕು. ಗಂಡಸರ ತೂಕ 5 ಅಡಿಗೆ 52 ಕೆಜಿ. ಇರಬೇಕು. ನಂತರ ಪ್ರತಿ ಒಂದು ಇಂಚು ಎತ್ತರಕ್ಕೆ 1.9 ಕೆಜಿ ಜಾಸ್ತಿ ಇರಬೇಕು.

    ತೂಕ ಇಳಿಸುವವರು, ‘ಇಂದು ತಿಂದುಬಿಡೋಣ, ನಾಳೆಯಿಂದ ತೂಕ ಇಳಿಸೋಣ’ ಅಂದರೆ ನಾಳೆಗಳು ಮುಗಿಯುವುದೇ ಇಲ್ಲ! ನಾಳೆಗೆ ಮತ್ತಿನ್ನೊಂದು ನಾಳೆ ಇದೆ! ನಾಳೆ ಅನ್ನೋದು ಶತ್ರು. ಅದಕ್ಕೆ ಹೀಗೆ ಮಾಡಿ. ಮೊದಲು ಒಂದೇ ವಾರದ ಮಟ್ಟಿಗೆ ಡಯೆಟ್ ಮಾಡುತ್ತೇನೆ ಎಂದು ನಿರ್ಧರಿಸಿ, ಎಷ್ಟೇ ಕಷ್ಟ ಅನ್ನಿಸಿದರೂ ಕಟ್ಟುನಿಟ್ಟಾಗಿ ಮಾಡಿ. ನಂತರ ಅದು ಅಭ್ಯಾಸವಾಗಿ ಸುಲಭವೆನಿಸಿ ಬಿಡುತ್ತದೆ.

    ಆಹಾರ ಸೇವನೆ ನಿಯಂತ್ರಣದಲ್ಲಿದ್ದಷ್ಟೂ ಕ್ಷೇಮ. ಏನೂ ತಿನ್ನೋದೆ ಇಲ್ಲಾ ಅನ್ನುವವರು ಏನೇ ತಿಂದರೂ ಒಂದು ಪುಸ್ತಕದಲ್ಲಿ ಬರೆದಿಡಿ. ಆಗ ನಿಮಗೇ ತಿಳಿಯುತ್ತದೆ ನೀವೆಷ್ಟು ತಿನ್ನುತ್ತಿದ್ದೀರಿ ಎಂದು. ದಿನವೂ ತೂಕ ನೋಡೋದನ್ನ ಮರೆಯಬೇಡಿ. ಸಮತೂಕದ ಆಹಾರ ಸೇವಿಸದಿದ್ದಲ್ಲಿ ಚರ್ಮ ಸುಕ್ಕುಗಟ್ಟುತ್ತದೆ, ಖಿನ್ನತೆ ಶುರು ಆಗುವ ಸಾಧ್ಯತೆ ಇದೆ.

    ಎರಡು ಊಟಗಳ ನಡುವೆ ಅಗತ್ಯವಾದಲ್ಲಿ ಲಘು ಉಪಾಹಾರ ಸೇವಿಸಿ. ಕನಿಷ್ಠ ಎರಡು ಗಂಟೆ ಅಂತರದಲ್ಲಿ ಸ್ವಲ್ಪ ಸ್ವಲ್ಪವೇ ಏನಾದರೂ ತಿನ್ನಿ. ಹಸಿವನ್ನು ತಡೆಯಲೇಬೇಡಿ. ತುಂಬ ಹಸಿವಾದಾಗ ಆಹಾರ ಸೇವನೆಯ ಪ್ರಮಾಣವೂ ಹೆಚ್ಚುವ ಅಪಾಯವಿದೆ. ಇದರ ನಡುವೆ ಬಾಯಿಚಪಲಕ್ಕೆ ಒಂದು ಸ್ವೀಟ್ ಅಥವಾ ಚಾಕೋಲೇಟ್ ತಿಂದರೂ ಕ್ಯಾಲರಿ ಹೆಚ್ಚುತ್ತದೆ ಎಂಬುದನ್ನು ಮರೆಯಬೇಡಿ. ನೀವು ಇಷ್ಟರವರೆಗೆ ತಿನ್ನದಿರುವ ಹೊಸ ಪದಾರ್ಥವೇನಾದರೂ ಇದ್ದಲ್ಲಿ ಮಾತ್ರವೇ ಸ್ವಲ್ಪವೇ ತಿನ್ನಿ. ಕರಿದ ತಿಂಡಿ ಮನೆಯಲ್ಲಿರಲೇಬಾರದು. ಅವಿದ್ದಷ್ಟೂ ತಿನ್ನುವ ಚಪಲ ಹೆಚ್ಚುತ್ತದೆ. ಕ್ಯಾಲರಿ ಕಡಿಮೆ, ಪೌಷ್ಟಿಕಾಂಶ ಹೆಚ್ಚಿರುವ ಹಸಿರುಸೊಪು್ಪ, ತರಕಾರಿ ಸೇವನೆ ಯಾವತ್ತೂ ಕ್ಷೇಮ.

    ಆಹಾರಸೇವನೆ ಇಳಿಸುವ ತಂತ್ರ: ಸಾಧ್ಯವಾದಷ್ಟು ಆಹಾರವನ್ನು ನೀವೇ ಬಡಿಸಿಕೊಳ್ಳಿ. ಆಗ ಎಷ್ಟು ಬೇಕೊ ಅಷ್ಟೇ ಬಡಿಸಿಕೊಳ್ಳಬಹುದು. ಆದರೆ ಬಡಿಸುವವರು ಇದ್ದಾಗ ಹೆಚ್ಚು ತಿನ್ನುವ ಸಾಧ್ಯತೆ ಇದೆ. ಆಗ ಅರ್ಧ ಹೊಟ್ಟೆ ತುಂಬುತ್ತಿದ್ದಂತೆ ಒಂದು ವ್ಯಾಯಾಮ ಮಾಡಿ. ವ್ಯಾಯಾಮನಾ ಏನದು! ಅಂದ್ರೆ, ತಲೆಯನ್ನು ಎಡ-ಬಲಕ್ಕೆ ಆಡಿಸೋದು. ತಲೆ ಆಡಿಸಿದರೆ ತೂಕ ಕಮ್ಮಿ ಆಗುತ್ತಾ? ಹೌದು. ಅದು ಹೇಗೆಂದರೆ, ನಿಮ್ಮ ಬಳಿ ಬಡಿಸುವವರು ‘ಬಡಿಸಲೇ?’ ಎಂದು ಕೇಳಿದರೆ ಮೇಲೆ ಹೇಳಿದ ವ್ಯಾಯಾಮ ಮಾಡಿ. ಅಂದ್ರೆ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಅಲ್ಲಾಡಿಸಿ. ತಪ್ಪಿಯೂ ಮೇಲೆ ಕೆಳಗೆ ಆಡಿಸಬೇಡಿ! ಇದೊಂದು ಹಳೇ ಜೋಕು, ನಮ್ಮ ಅಪ್ಪ ಹೇಳ್ತಿದ್ರು. ನಾ ಹೇಳುವ ತೂಕ ಇಳಿಸುವ ವಿಧಾನದಿಂದ ಒಂದೆರಡು ದಿನಕ್ಕೆ ಅದರ ಪರಿಣಾಮ ಗೊತ್ತಾಗುವುದಿಲ್ಲ. ಮೂರ್ನಾಲ್ಕು ದಿನ ಕಸರತ್ತು ಮಾಡಿ ನಿರಾಸೆ ಹೊಂದಬೇಡಿ. ‘ಡೋಂಟ್ ಕ್ವಿಟ್’. ದೇಹ ತನ್ನ ತೂಕ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ, ನಂತರ ನಿಧಾನವಾಗಿ ಅದನ್ನು ಕಳೆದುಕೊಳ್ಳಲಾರಂಭಿಸುತ್ತದೆ. ನೀರಿನಂಶ ಹೊರಹೋದ ಕೂಡಲೇ ತೂಕ ಇಳಿಯಲಾರಂಭಿಸುತ್ತದೆ. ಆದ್ದರಿಂದ ತೂಕ ಒಮ್ಮೆಲೆ ಇಳಿಯತೊಡಗುತ್ತದೆ. ಇಳಿದಲ್ಲಿ ಜಾಸ್ತಿ ತಿನ್ನಬೇಡಿ, ಹೆಚ್ಚಾದಲ್ಲಿ ಉಪವಾಸ ಮಾಡಬೇಡಿ.

    ಬೆಳಗಿನ ಉಪಾಹಾರವನ್ನು ತಪ್ಪಿಸಲೇಬೇಡಿ. ಹೀಗೆ ಮಾಡುವುದರಿಂದ ದೇಹ ಮೆಟಬಾಲಿಸಂನ್ನು ಕಡಿಮೆ ಮಾಡಿ ಎಷ್ಟೇ ಕಮ್ಮಿ ತಿಂದರೂ ಅದಕ್ಕೆ ಹೊಂದಿಕೊಳ್ಳುತ್ತದೆ. ಆಹಾರದಲ್ಲಿ ಪ್ರೋಟೀನ್, ವಿಟಮಿನ್, ಕೊಬ್ಬು, ಕಾರ್ಬೇಹೈಡ್ರೇಟ್ಸ್, ಲವಣಾಂಶಗಳು ಸಮ ಪ್ರಮಾಣದಲ್ಲಿರಬೇಕು. ನಾನು ಹೇಳೋದೇನಂದ್ರೆ ನೀವು ಬಹಳ ಲೆಕ್ಕಾಚಾರದಲ್ಲಿ ತಿನ್ನುವ ಅಗತ್ಯವೂ ಇಲ್ಲ. ಬೇರೆ-ಬೇರೆ ತಿನಿಸುಗಳನ್ನು ತಿನ್ನಿ. ಆದರೆ ಕಡಿಮೆ ತಿನ್ನಿ. ಒಂದು ಕೆ.ಜಿ. ತೂಕ ಇಳಿಯಲು 62 ಮೈಲಿ ನಡೆಯಬೇಕಂತೆ. ದಿನಕ್ಕೆ 5 ಮೈಲಿಯಂತೆ ನಡೆದರೂ ತಿಂಗಳಿಗೆ 150 ಮೈಲಿ ಆಗುತ್ತೆ. ಒಂದಷ್ಟು ತೂಕ ಇಳಿದ ಮೇಲೆ ದೇಹದ ತೂಕ ಒಂದೇ ಸಮ ಇರುತ್ತದೆ. ನಿಮ್ಮ ದೇಹ ಹೊಸ ತೂಕಕ್ಕೆ ಹೊಂದತೊಡಗುತ್ತದೆ. ಮನಸ್ಸು ಪ್ರಫುಲ್ಲವಾಗಿರುತ್ತದೆ. ತೂಕ ಜಾಸ್ತಿ ಇದ್ದಲ್ಲಿ ಕೈ-ಕಾಲಿಗೆ ಐದೈದು ಕೆಜಿ ಕಬ್ಬಿಣ ಕಟ್ಟಿಕೊಂಡು ನಡೆದಂತೆ.

    ಅಪೇಕ್ಷಣೀಯ ತೂಕ ಪಡೆದ ಮೇಲೆ ಪಥ್ಯ, ವ್ಯಾಯಾಮ ಬಿಡಬೇಡಿ. ಇದು ನಮ್ಮ ಜೀವನಪರ್ಯಂತ ಮಾಡುವ ತಪಸ್ಸು. ಅದು ನಾವು ಸೇವಿಸುವ ಆಹಾರದಂತೆ ನಿರಂತರವಾಗಿರಲಿ. ತೂಕ ಹೆಚ್ಚಾದಾಗ ಮತ್ತೆ ಇಳಿಸಬಲ್ಲೆನೆಂಬ ಧಿಮಾಕು ಬೇಡ. ಮೊದಲ ಸಲ ತೂಕ ಇಳಿಸಿದ ಗತಿಯಲ್ಲಿ ನಂತರ ಏರಿದ ತೂಕವನ್ನು ಇಳಿಸಲಾಗುವುದಿಲ್ಲ. ಇದಕ್ಕೆ ಠಛಿಛಿಠಚಡಿ ಎನ್ನುತ್ತಾರೆ. ನಿಮಗೆ ಮಲಗಬೇಕೆನಿಸಿದಾಗ ಕುಳಿತುಕೊಳ್ಳಿ; ಕುಳಿತು ಕೊಳ್ಳಬೇಕು ಎನಿಸಿದಾಗ ನಿಂತುಕೊಳ್ಳಿ, ನಿಲ್ಲಬೇಕೆನಿಸಿದಾಗ ನಡೆಯಲು ಆರಂಭಿಸಿ. ಹೀಗೆ ಮಾಡಲಾರಂಭಿಸಿದರೆ ಹೆಚ್ಚಿನ ಕ್ಯಾಲರಿ ಖರ್ಚಾಗುತ್ತದೆ.

    ಹೋರಿಯಾಗಿ, ಕೋಣನಾಗಬೇಡಿ: ಹಣ ಗಳಿಸಲು ಹೀಗೇಕೆ ಹೇಳುತ್ತಿದ್ದೇನೆನ್ನಬೇಡಿ. ಹಣಗಳಿಕೆಗೆ ದೇಹ ಶಕ್ತಿಯುತ ಹೋರಿಯಂತಾಗಬೇಕು. ತಿಂದು ತಿಂದು ಕೊಬ್ಬಿದ ನಿರುತ್ಸಾಹಿ ಕೋಣನಂತೆ ಆದರೆ ಪ್ರಯೋಜನವಿಲ್ಲ. ಕೂತ ಆಲಸಿ ಕೆಲಸ ಮಾಡಲಾರ; ಕೆಲಸ ಮಾಡದೆ ಹಣ ಗಳಿಸಲಾರ.

    ದೇಹಭಾರ ಒಂದು ರೀತಿಯಲ್ಲಿ ಬ್ಯಾಂಕ್ ಅಕೌಂಟ್ ಇದ್ದ ಹಾಗೆ. ನಿಮಗೆ ಅಗತ್ಯವಿರುವಷ್ಟು ಕ್ಯಾಲರಿ ಮೀರಿ ಏನನ್ನೂ ತಿನ್ನಬೇಡಿ. ಶ್ರಮಸಾಧ್ಯ ಕೆಲಸ ಮಾಡುವವರಾದರೆ ನಿಮ್ಮ ತಕ್ಕ ತೂಕಕ್ಕೆ 25ರಿಂದಲೂ, ಆರಾಮ ಕೆಲಸವಾದರೆ 15 ರಿಂದಲೂ ಗುಣಿಸಿ. ಅಗತ್ಯ ಕ್ಯಾಲರಿ ದೊರೆಯುತ್ತದೆ. ಉದಾಹರಣೆಗೆ, 5 ಅಡಿ 7 ಅಂಗುಲದವರ ತಕ್ಕ ತೂಕ 140 ಪೌಂಡ್. 140 ್ಡ5= 2100 ಕ್ಯಾಲರಿ. ಕಷ್ಟದ ಕೆಲಸದವರಿಗೆ 3100 ಕ್ಯಾಲರಿ ಅಗತ್ಯ.

    ಯಾವತ್ತೂ ಮದ್ಯಸೇವನೆ ಮಾಡಲೇ ಬೇಡಿ. ಯಾಕೆಂದರೆ ಒಂದು ಗ್ರಾಂ ಆಲ್ಕೋಹಾಲಿನಲ್ಲಿ ಏಳು ಕ್ಯಾಲರಿ ಇರುತ್ತದೆ. ಜತೆಗೆ, ಕರಿದ ತಿಂಡಿ, ಚಿಪ್ಸ್, ಕುರುಕಲು ತಿಂಡಿ ತಿಂದಾಗ ತೂಕ ಮತ್ತಷ್ಟು ಏರುತ್ತದೆ. 1 ಗ್ರಾಂ ಕೊಬ್ಬಿಗೆ 9 ಕ್ಯಾಲರಿ. 1 ಗ್ರಾಂ ಪ್ರೋಟೀನ್ ಮತ್ತು ಶರ್ಕರ ಪಿಷ್ಟದಲ್ಲಿ 4 ಕ್ಯಾಲರಿ ಇರುತ್ತದೆ.

    ಜೋಕು: ಅದೊಂದು ಸೋಮಾರಿಗಳ ಸಂಘ. ಸಂಘದ ಅಧ್ಯಕ್ಷನ ಆಯ್ಕೆ ನಡೆಯಲು ವೇದಿಕೆ ಸಿದ್ಧವಾಯಿತು. ಅಧ್ಯಕ್ಷನಾಗುವವರು ಇದ್ದವರಲ್ಲಿ ಅತ್ಯಂತ ಸೋಮಾರಿ ಆಗಿರಬೇಕು ಎಂಬುದು ಶರತ್ತು. ಒಬ್ಬನನ್ನುಳಿದು ಎಲ್ಲರೂ ಕೈ ಎತ್ತಿದರು. ‘ನಿನಗೆ ಅಧ್ಯಕ್ಷನಾಗುವ ಆಸಕ್ತಿ ಇಲ್ಲವೇ?’ ಎಂದು ಕೇಳಿದಾಗ- ‘ಯಾರು ಕೈಯನ್ನ ಮೇಲ್ತನಕ ಎತ್ತುತ್ತಾರೆ!’ ಅಂದ. ಸರ್ವಾನುಮತದಿಂದ ಅವನನ್ನೇ ಆರಿಸಿದರು ಅಂತ ಹೇಳೋದೇ ಬೇಡ ಅಲ್ವೇ?

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts