ಮುಂಬಡ್ತಿ-ಹಿಂಬಡ್ತಿ ರದ್ದು

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ತಣ್ಣಗಾಗಿದ್ದ ಬಡ್ತಿ ಮೀಸಲಾತಿ ವಿವಾದದ ಹುತ್ತಕ್ಕೆ ರಾಜ್ಯ ಸರ್ಕಾರ ಮತ್ತೆ ಕೈಹಾಕಿದೆ. ನ್ಯಾಯಾಲಯದ ಆದೇಶದಿಂದ ಆಗಿರುವ ಮುಂಬಡ್ತಿ-ಹಿಂಬಡ್ತಿ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಸುತ್ತೋಲೆಗಳನ್ನು ರದ್ದು ಮಾಡಲು ಮುಂದಾಗಿರುವ ಸರ್ಕಾರದ ನಡೆ ಮತ್ತೊಂದು ಸುತ್ತಿನ ಕಾನೂನು ಹೋರಾಟ ಆರಂಭವಾಗುವ ಸಾಧ್ಯತೆಗಳನ್ನು ದಟ್ಟವಾಗಿಸಿದೆ.

ಬಡ್ತಿ ಮೀಸಲಾತಿ ವಿಧೇಯಕಕ್ಕೆ ರಾಷ್ಟ್ರಪತಿ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವರು ಇತ್ತೀಚೆಗೆ ಮಹತ್ವದ ಸಭೆ ನಡೆಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕೆಲವೊಂದು ಸೂಚನೆ ನೀಡಿದ್ದಾರೆ.ಸುಪ್ರೀಂಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆಯ ಪ್ರಕರಣದ ವಿಚಾರಣೆ ಜು.27ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಹೊಸ ವಿಧೇಯಕಕ್ಕೆ ರಾಷ್ಟ್ರಪತಿಯೇ ಒಪ್ಪಿಗೆ ಕೊಟ್ಟಿರುವುದರಿಂದ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಸರ್ಕಾರ ವಾದಿಸುತ್ತಿದೆ.

ಈ ವಿಚಾರವಾಗಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳ ಜತೆಗೆ ನಿರಂತರ ಸಭೆ ನಡೆಸಿ ದ್ದಾರೆ. ರಾಷ್ಟ್ರಪತಿಯಿಂದ ಒಪ್ಪಿಗೆ ಪಡೆದಿರುವ ವಿಧೇಯಕ ಜಾರಿಗೆ ಪ್ರಯತ್ನ ಮಾಡುತ್ತಿರುವ ಫಲವಾಗಿಯೇ ಈ ಸೂಚನೆ ಹೊರಬಿದ್ದಿದೆ.

ಪರಿಶೀಲನೆ

ಸಚಿವರ ಸೂಚನೆಯ ಹಿನ್ನೆಲೆಯಲ್ಲಿ ವಿಧೇಯಕ ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೂ ಕಾನೂನು ತಜ್ಞರ ಜತೆಗೂ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉನ್ನತ ಮೂಲಗಳು ಹೇಳುತ್ತವೆ.

ಪರಿಶಿಷ್ಟ ನೌಕರರ ಹಿತ ಕಾಯುವ ಉದ್ದೇಶದಿಂದ ವಿಧೇಯಕ ಜಾರಿಗೆ ಸಭೆ ನಡೆಸಿದ್ದೇನೆ. ಕೆಲವು ಸೂಚನೆಗಳನ್ನು ನೀಡಿದ್ದೇನೆ. ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಿದ್ದಾರೆ.

– ಪ್ರಿಯಾಂಕ ಖರ್ಗೆ ಸಮಾಜ ಕಲ್ಯಾಣ ಸಚಿವ

ಲೋಕೋಪಯೋಗಿ ಇಲಾಖೆಯಲ್ಲಿ ಸಮಸ್ಯೆ

ರಾಷ್ಟ್ರಪತಿಯಿಂದ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕು ಅಧಿಸೂಚನೆ ಹೊರಡಿಸಿದ ನಂತರವೂ ಲೋಕೋಪಯೋಗಿ ಇಲಾಖೆಯಲ್ಲಿ 250ಕ್ಕೂ ಹೆಚ್ಚಿನ ಇಂಜಿನಿಯರ್​ಗಳಿಗೆ ಬಡ್ತಿ ನೀಡಲಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಇದೀಗ ಈ ರೀತಿಯ ಸೂಚನೆ ನೀಡಿರುವುದರಿಂದ ಸಮಸ್ಯೆ ಉಂಟಾಗಿದೆ. ಅದನ್ನು ಯಾವ ರೀತಿಯಲ್ಲಿ ಬಗೆಹರಿಸಬೇಕು ಎಂಬ ಬಗ್ಗೆಯೂ ಸರ್ಕಾರದಲ್ಲಿ ಚರ್ಚೆ ನಡೆದಿದೆ.

ಅಧಿಕಾರಿಗಳಲ್ಲಿ ಗೊಂದಲ

ಸುಪ್ರೀಂ ಕೋರ್ಟ್ ನಲ್ಲಿರುವ ನ್ಯಾಯಾಂಗ ನಿಂದನೆ ಅರ್ಜಿ ಒಂದೆಡೆಯಾದರೆ, ರಾಷ್ಟ್ರಪತಿ ಒಪ್ಪಿಗೆ ನೀಡಿರುವ ವಿಧೇಯಕ ಇನ್ನೊಂದು ಕಡೆ. ಇದರಿಂದಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಗೊಂದಲದಲ್ಲಿದ್ದು, ಸರ್ಕಾರದ ಸೂಚನೆ ಎದುರು ನೋಡುತ್ತಿದ್ದಾರೆ.

ಆದೇಶ ರದ್ದತಿಗೆ ಸೂಚನೆ

ಬಿ.ಕೆ. ಪವಿತ್ರಾ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ನಿವೃತ್ತ ನೌಕರರ ವೇತನವನ್ನು ಕಟಾಯಿಸಲು ಸರ್ಕಾರ ಜೂನ್ 8ರಂದು ಆದೇಶ ಹೊರಡಿಸಿದೆ. ತೀರ್ಪಿನಲ್ಲಿ ಆ ರೀತಿಯ ಉಲ್ಲೇಖ ಇರದಿದ್ದರೂ ಅಧಿಕಾರಿಗಳೇ ಆದೇಶ ಮಾಡಿದ್ದರು. ಇದೀಗ ಸಚಿವರು ಆ ಆದೇಶವನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದಾರೆ.

ಸರ್ಕಾರದ ಸೂಚನೆ ಏನು?

# ಬಿ.ಕೆ. ಪವಿತ್ರಾ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಹೊರಡಿಸಿದ್ದ ಸುತ್ತೋಲೆ ಹಾಗೂ ಆದೇಶಗಳನ್ನು ತಕ್ಷಣವೇ ರದ್ದು ಮಾಡಬೇಕು.

# ಎಲ್ಲ ಮುಂಬಡ್ತಿ/ಹಿಂಬಡ್ತಿಯನ್ನು ರದ್ದು ಮಾಡಿ, ಹಿಂಬಡ್ತಿಗೆ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗಳಲ್ಲಿಯೇ ಮುಂದುವರಿಸುವುದು. ? ಹಿಂಬಡ್ತಿಗೆ ಒಳಪಟ್ಟು ಅದೇ ಸ್ಥಳದಲ್ಲಿ ಮುಂದುವರಿದಿರುವ ಪರಿಶಿಷ್ಟ ಜಾತಿ ಹಾಗೂ ವರ್ಗದ ನೌಕರರನ್ನು ಅಲ್ಲೇ ಮುಂದುವರಿಸುವುದು. ? ಅರ್ಹತೆ ಇದ್ದರೂ ಪರಿಶಿಷ್ಟ ಜಾತಿ ಹಾಗೂ ವರ್ಗದ ಅಧಿಕಾರಿಗಳಿಗೆ ಮುಂಬಡ್ತಿ ನೀಡಬಾರದೆಂದು 1999ರಲ್ಲಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು.

ರಾಷ್ಟ್ರಪತಿಯಿಂದ ಅಂಗೀಕಾರವಾಗಿರುವ ವಿಧೇಯಕವನ್ನು ನಾವು ಜಾರಿ ಮಾಡಲೇ ಬೇಕಾಗಿದೆ. ಸೂಪರ್ ನ್ಯೂಮರರಿ ಹುದ್ದೆಗಳನ್ನು ಯಾವ ವರ್ಗಕ್ಕಾಗಿ ಸೃಷ್ಟಿಸಬೇಕೆಂಬ ಬಗ್ಗೆಯೂ ಸಿಎಂ ಅವರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ವಿಧೇಯಕ ಜಾರಿ ಮಾಡುವುದರಿಂದ ನ್ಯಾಯಾಂಗ ನಿಂದನೆ ಆಗುವುದಿಲ್ಲ.

| ಡಾ. ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿ

2000 ಕೋಟಿ ರೂ.ವೆಚ್ಚ

ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸುವುದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 2000 ಕೋಟಿ ರೂ.ಗಳ ಹೊರೆ ಬೀಳಬಹುದೆಂದು ಅಂದಾಜು ಮಾಡಲಾಗಿದೆ.

ನಮ್ಮ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಷ್ಟೇ ಬಡ್ತಿ ನೀಡಲಾಗಿದೆ. ಅದರಿಂದ ಪರಿಶಿಷ್ಟ ನೌಕರರ ಹಿತಕ್ಕೆ ಧಕ್ಕೆ ಆಗುವುದಿಲ್ಲ. ಇನ್ನೂ ಸಾಕಷ್ಟು ಹುದ್ದೆಗಳು ಖಾಲಿ ಇವೆ.

| ಎಚ್.ಡಿ. ರೇವಣ್ಣ ಲೋಕೋಪಯೋಗಿ ಸಚಿವ

ಸೂಪರ್ ನ್ಯೂಮರಿ

ಬಡ್ತಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದಾಗಲೇ ಹಿಂಬಡ್ತಿಗೆ ಒಳಗಾಗುವ ಪರಿಶಿಷ್ಟ ಜಾತಿ ಮತ್ತು ವರ್ಗದ 20 ಸಾವಿರ ನೌಕರರಿಗೆ ಸೂಪರ್ ನ್ಯೂಮರರಿ ಹುದ್ದೆ ನೀಡುವ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ಇದೀಗ ರಾಷ್ಟ್ರಪತಿ ಒಪ್ಪಿಗೆ ನೀಡಿರುವ ವಿಧೇಯಕದಲ್ಲೂ ಅದೇ ಅಂಶ ಇದೆ. ಆದರೆ ಸೂಪರ್ ನ್ಯೂಮರರಿಯನ್ನು ಯಾರಿಗೆ ಸೃಷ್ಟಿಸಬೇಕೆಂಬುದೇ ಈಗ ಪ್ರಶ್ನೆಯಾಗಿದೆ. ಈ ಮೊದಲು ಹಿಂಬಡ್ತಿಗೆ ಒಳಗಾಗುವ ಪರಿಶಿಷ್ಟ ನೌಕರರಿಗೆ ಎಂದೇ ಹೇಳಲಾಗುತ್ತಿತ್ತು. ಆದರೆ ಈಗ ಸರ್ಕಾರದಲ್ಲಿ ನಡೆದಿರುವ ಚರ್ಚೆಯ ಪ್ರಕಾರ ಪರಿಶಿಷ್ಟ ನೌಕರರನ್ನು ಮೊದಲಿನ ಹುದ್ದೆಯಲ್ಲೇ ಮುಂದುವರಿಸಿ ಸುಪ್ರೀಂ ತೀರ್ಪಿನ ನಂತರ ಬಡ್ತಿ ಪಡೆದ ಅಹಿಂಸಾ ವರ್ಗದ ಅಧಿಕಾರಿ ಮತ್ತು ನೌಕರರಿಗೆ ಸೂಪರ್ ನ್ಯೂಮರರಿ ಹುದ್ದೆ ಸೃಷ್ಟಿಸುವುದೆಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರು ಚರ್ಚೆ ನಡೆಸುತ್ತಿದ್ದಾರೆ. ಆ ರೀತಿಯಾದರೆ ಅದು ಮತ್ತೊಂದು ರೀತಿಯ ಕಾನೂನು ಹೋರಾಟಕ್ಕೆ ನಾಂದಿಯಾಗುವ ಸಾಧ್ಯತೆಗಳಿವೆ.