ಕ್ಷೇತ್ರದಲ್ಲಿನ ಸಮಸ್ಯೆಗಳೇ ಲೋಕಸಭೆ ಚುನಾವಣೆಯ ಪ್ರಚಾರದ ಸರಕು

ಚಿಕ್ಕಮಗಳೂರು: ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಹೀಗೆ ನೈಸರ್ಗಿಕ ವೈವಿಧ್ಯತೆಯನ್ನೊಳಗೊಂಡ ಕಾಫಿನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ ಎಲ್ಲ ಪಕ್ಷದ ಪ್ರತಿನಿಧಿಗಳು ಬದ್ಧತೆ ಪ್ರದರ್ಶನ ಮಾಡಿಲ್ಲವೆಂಬ ಕೊರಗು ಮತದಾರರಲ್ಲಿದೆ.

ಪ್ರತಿ ಚುನಾವಣೆಯಲ್ಲಿಯೂ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನೇ ಪ್ರಚಾರದ ಸರಕನ್ನಾಗಿ ಮಾಡಿಕೊಂಡು ಅಭ್ಯರ್ಥಿಗಳು ಮತ ಭೇಟೆಯಾಡುತ್ತಿರುವ ಬಗ್ಗೆ ಜನರಲ್ಲಿ ಅಸಮಾಧಾನ ಮಡುಗಟ್ಟಿದೆ.

ಪ್ರಾದೇಶಿಕ ಸಮಸ್ಯೆಗಳನ್ನು ಸಮಯ ಪ್ರಜ್ಞೆಯಿಂದ ಪ್ರಚಾರ ಮಾಡಿ ಭರ್ಜರಿ ಮತ ಕೊಯ್ಲಿಗೆ ಈಗಲೂ ಅಭ್ಯರ್ಥಿಗಳು, ಪಕ್ಷದ ಮುಖಂಡರು ಮುಂದಾಗಿದ್ದಾರೆ. ಮಲೆನಾಡಿನ ಅತಿವೃಷ್ಟಿ, ಬೆಳೆಹಾನಿ, ಕಾಫಿ, ಕಾಳುಮೆಣಸು ಬೆಲೆ ಕುಸಿತ, ಅಡಕೆಗೆ ಹಳದಿ ಎಲೆ ರೋಗ, ಬಯಲು ಸೀಮೆಯಲ್ಲಿ ಬರಗಾಲ, ಪಂಚ ನದಿಗಳಿದ್ದರೂ ಅನುಷ್ಠಾನವಾಗದ ನೀರಾವರಿ ಯೋಜನೆಗಳೇ ಪ್ರಚಾರದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಸತತ ಬರಗಾಲದಿಂದ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಸಾವಿರಾರು ಎಕರೆ ಜಮೀನುಗಳಲ್ಲಿದ್ದ ತೆಂಗು, ಅಡಕೆ ಹಾಗೂ ಇನ್ನಿತರ ಬೆಳೆಗಳಿಗೆ ನೀರು ಸಿಗದೆ ನಾಶವಾಗಿವೆ. ಕಡೂರು ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ಬಂದಿದೆ. ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರು ತಾಲೂಕುಗಳ ಕೆರೆಗಳಿಗೆ ಭದ್ರಾ ಅಣೆಕಟ್ಟಿನಿಂದ, ಹೆಬ್ಬೆ ಜಲಪಾತದಿಂದ ಹಾಗೂ ಎತ್ತಿನಹೊಳೆ ಯೋಜನೆಯಿಂದ ನೀರು ತುಂಬಿಸಲು ಸಮಗ್ರ ನೀರಾವರಿ ಯೋಜನೆಗಳು ಕಡತಕ್ಕೆ ಸೀಮಿತವಾಗಿವೆ.

2013ನೇ ಸಾಲಿನಲ್ಲಿ ರಾಜ್ಯಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಮಂಜೂರಾತಿ ದೊರೆತಿತ್ತು. ಇದಕ್ಕೆ ಬೇಕಾಗಿರುವ ಜಾಗ ಸಹ ಕಾಯ್ದಿರಿಸಲಾಗಿದೆ. ಆದರೆ, ಪ್ರಸಕ್ತ ವರ್ಷದ ಬಜೆಟ್​ನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕಡೆಗಣಿಸಿ ಕೇವಲ ಜಿಲ್ಲಾಸ್ಪ್ಪ್ರೆ ಉನ್ನತೀಕರೀಸಲು 50 ಕೋಟಿ ರೂ. ಕಾಯ್ದಿರಿಸಲಾಗಿದೆ. ಇದು ಒಂದು ಜಿಲ್ಲಾಸ್ಪತ್ರೆಯ ಸೌಲಭ್ಯಕ್ಕೆ ನೀಡಿದ ಅನುದಾನ. ಮಂಜೂರಾದ ಮೆಡಿಕಲ್ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿದ್ದರೆ ವೈದ್ಯಕೀಯ ಹೊಸ ಸೌಲಭ್ಯ, ಚಿಕಿತ್ಸೆ ಇಲ್ಲಿನ ಜನರಿಗೆ ಸಿಗುತ್ತಿದ್ದವು.

ಮಿಲ್ಕ್ ಯೂನಿಯನ್, ಸ್ಪೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಿಲ್ಲ: ಜಿಲ್ಲೆಯಲ್ಲಿ ಹೆಚ್ಚಾಗಿ ಕೃಷಿಕರು ಹಾಗೂ ಕೃಷಿ ಕಾರ್ವಿುಕರೇ ಹೆಚ್ಚಾಗಿದ್ದು ಇದರಲ್ಲಿ ಹಲವರು ಜೀವನ ನಿರ್ವಹಣೆಗಾಗಿ ಹೈನುಗಾರಿಕೆ ಅವಲಂಬಿಸಿದ್ದಾರೆ. ಇವರ ಅನುಕೂಲಕ್ಕಾಗಿ ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರು ಜಿಲ್ಲೆಯನ್ನು ಬೇರ್ಪಡಿಸಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ (ಮಿಲ್ಕ್ ಯೂನಿಯನ್) ಸ್ಥಾಪಿಸಬೇಕೆಂಬ ಬೇಡಿಕೆ ಮನ್ನಣೆ ಸಿಗಲೇ ಇಲ್ಲ. ದೇಶದಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಜಿಲ್ಲೆಗೆ ಈ ಹಿಂದೆ ಕೇಂದ್ರ ವಾಣಿಜ್ಯ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದ ಸಂದರ್ಭ ಕಾಫಿ ಹಾಗೂ ಸ್ಪೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು. ಇದರ ಬಗ್ಗೆ ಯೋಜನೆಯ ರೂಪುರೇಷೆ ಇನ್ನೂ ಪ್ರಾರಂಭವಾಗಿಲ್ಲ.

ಹಕ್ಕುಪತ್ರ, ಉದ್ಯೋಗವಿಲ್ಲ: ಅರಣ್ಯ ಹಕ್ಕು ಸಮಿತಿ ಹಾಗೂ ಅಕ್ರಮ ಸಕ್ರಮ ಯೋಜನೆಯಡಿ ಅನೇಕ ಬಡವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಇವರ ನಡುವೆ ಬಲಾಢ್ಯರು ಅರಣ್ಯ ಒತ್ತುವರಿ ಮಾಡಿಕೊಂಡು ಬಡವರಿಗೂ ಭೂಮಿ ಸಿಗದ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಸಂಕೀರ್ಣವಾಗಿರುವ ಸಮಸ್ಯೆ ಪರಿಹಾರಕ್ಕೆ ಯಾವುದೇ ಜನಪ್ರತಿನಿಧಿ, ಸಚಿವರು ಮುಂದಾಗದಿರುವುದರಿಂದ ಬಡವರು ಹಕ್ಕುಪತ್ರಕ್ಕಾಗಿ ತಹಸೀಲ್ದಾರ್ ಕಚೇರಿಗಳಿಗೆ ನಿತ್ಯ ಅಲೆದಾಡುವಂತಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸಿ ತಾಣಗಳ ಅಭಿವೃದ್ಧಿ, ಜವಳಿ ಪಾರ್ಕ್ ಸ್ಥಾಪನೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಖಾಸಗಿ ಬಂಡವಾಳದಾರರನ್ನು ಜಿಲ್ಲೆಯತ್ತ ಸೆಳೆಯುವಂತಹ ಕೆಲಸವೂ ಇಲ್ಲಿ ಆಗಿಲ್ಲ. ಇದರಿಂದ ಹತ್ತನೇ ತರಗತಿ ನಂತರದ ಯುವಜನ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವಂತಾಗಿದೆ.

ಪ್ರವಾಸಿ ತಾಣಗಳ ಕಡೆಗಣನೆ: ಮೂಡಿಗೆರೆ ತೋಟಗಾರಿಕೆ ಕಾಲೇಜನ್ನು ತೋಟಗಾರಿಕೆ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವುದು. ಶೃಂಗೇರಿ, ಹೊರನಾಡು, ಕಳಸ, ದತ್ತಪೀಠ, ಹೊಯ್ಸಳರ ಕಾಲದ ಅಂಗಡಿ, ಬೆಳವಾಡಿ, ಅಮೃತಾಪುರದಂತಹ ಧಾರ್ವಿುಕ ಕ್ಷೇತ್ರಗಳು ಹಾಗೂ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿಯಂತಹ ಗಿರಿಧಾಮಗಳು, ಭದ್ರಾ ಅಭಯಾರಣ್ಯ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಂತಹ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಸಂಪದ್ಭರಿತ ಜಿಲ್ಲೆ ಇದಾಗಿದೆ. ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿ ಶಿಲ್ಪಕಲೆಗಳ ತವರೂರಾದ ಹಳೇಬೀಡು, ಬೇಲೂರುಗಳಿದ್ದು, ಈ ಎಲ್ಲ ಪ್ರವಾಸಿ ತಾಣಗಳಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಿದ್ದಾರೆ. ಈ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿ, ಸಂರಕ್ಷಣೆಗೆ ರಾಜಕೀಯ ಶಕ್ತಿಗಳು ಬೆನ್ನು ತೋರಿಸುತ್ತಿರುವುದು ವಿಪರ್ಯಾಸದ ಸಂಗತಿ. ಸೋಜಿಗದ ಪ್ರಾಕೃತಿಕ ಸೌಂದರ್ಯ ಮಡಿಲಲ್ಲಿಟ್ಟುಕೊಂಡ ಜಿಲ್ಲೆಗೆ ಸರಿಯಾದ ರೈಲಿನ ಸೌಲಭ್ಯ ಒದಗಿಸಲು ಈ ತನಕ ಸಾಧ್ಯವಾಗದಿರುವುದು ಶೋಚನೀಯ. ಲಕ್ಷಾಂತರ ಪ್ರವಾಸಿಗರು ಬರುವ ಜಿಲ್ಲೆಗೆ ಒಂದು ಎಕ್ಸ್​ಪ್ರೆಸ್ ರೈಲಿಲ್ಲ. ಇಲ್ಲಿಗೆ ರಸ್ತೆ ಮೂಲಕವೇ ಬರಬೇಕು.

ಕಾರ್ಯಗತವಾಗದ ಏರ್​ಸ್ಟ್ರೀಪ್: ಉದ್ಯಮಿಗಳನ್ನು ಆಕರ್ಷಿಸಬೇಕೆಂಬ ಹಿನ್ನೆಲೆಯಲ್ಲಿ ಪ್ರಾರಂಭವಾದ ಮಿನಿ ಮಿಮಾನ ನಿಲಾಣ (ಏರ್​ಸ್ಟ್ರೀಪ್) ಯೋಜನೆ ಮಂಜೂರಾದರೂ ಕಾರ್ಯಗತವಾಗಿಲ್ಲ. ನಿಲ್ದಾಣ ಸ್ಥಾಪನೆಗೆ ಮೀಸಲಿಟ್ಟ ನೂರು ಎಕರೆ ಜಾಗದಲ್ಲಿ ಈಗ ದನ ಮೇಯುತ್ತಿವೆ. ಕೈಗಾರಿಕೆ ಇಲಾಖೆ ಕರೆದ ಟೆಂಡರ್​ನಲ್ಲಿ ಯಾರೂ ಭಾಗವಹಿಸದೆ ಯೋಜನೆ ಸ್ಥಗಿತಗೊಂಡಿದ್ದು, ಇದಕ್ಕೆ ಬೇಕಾದ ಕ್ರಮಕೈಗೊಳ್ಳಲು ರಾಜಕೀಯ ನೇತಾರರು ಮುಂದಾಗಿಲ್ಲ.

ವರದಿಗಳ ತೂಗುಗತ್ತಿ: ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆಗಳ ಅನುಷ್ಠಾನ ಮಾಡುವ ತೂಗು ಕತ್ತಿ ಮಲೆನಾಡಿನ ಜನರ ತಲೆ ಮೇಲೆ ನೇತಾಡ ತೊಡಗಿದೆ. ಈ ಬಗ್ಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪರಸ್ಪರ ಪ್ರತ್ಯಾರೋಪ ಮಾಡುತ್ತಿವೆ. ಮೂರೂ ಪಕ್ಷಗಳು ಮಲೆನಾಡಿನ ಹಿತ ರಕ್ಷಣೆಗೆ ಬೇಕಾದ ನಿಲುವ ತಾಳುವಲ್ಲಿ ವಿಫಲವಾಗಿವೆ. ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆಗಳು ತಮ್ಮ ಬದುಕು ಕಸಿದುಕೊಳ್ಳುತ್ತವೆಂಬ ಆತಂಕ ಮಲೆನಾಡಿಗರಲ್ಲಿ ಮನೆ ಮಾಡಿದೆ.