ಉಡುಪಿ: ಜನರ ಅನುಕೂಲಕ್ಕೆ ಜಿಲ್ಲೆಯಲ್ಲಿ 413 ಹೊಸಕಾಲು ಸಂಕಗಳ ನಿಮಾರ್ಣಕ್ಕೆ ಪ್ರಸ್ತಾವನೆಯನ್ನು 51.77 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಈಗಾಗಲೇ 30 ಕೋಟಿ. ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿ, ಮುಂಬರುವ ಮೂರು ವರ್ಷಗಳ ಒಳಗಾಗಿ ಕಾಲುಸಂಕಗಳನ್ನು ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಲೆನಾಡು ಭಾಗಗಳಲ್ಲಿ ಹಳ್ಳ-ಕೊಳ್ಳಗಳನ್ನು ದಾಟಲು ಗ್ರಾಮೀಣ ಭಾಗದ ಜನರು ಕಾಲುಸಂಕಗಳನ್ನೇ ತಮ್ಮ ಸಂಚಾರಕ್ಕೆ ಬಳಸುತ್ತಾರೆ. ಈ ಹಿಂದೆ ಅವಘಡಗಳೂ ಸಹ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಡೆದಿವೆ. ಹೀಗಾಗಿ ಕಾಲುಸಂಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಹೆದ್ದಾರಿಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಪ್ರಥಮ ಹಂತದಲ್ಲಿ ಟೆಂಟ್ಗಳನ್ನು ಹಾಕಿ ಹೋಟೆಲ್ ಅಥವಾ ಅಂಗಡಿ ಮುಂಗಟ್ಟುಗಳನ್ನು ಜನರು ನಡೆಸುತ್ತಾರೆ. ನಂತರದ ದಿನಗಳಲ್ಲಿ ಶಾಶ್ವತವಾಗಿ ಕಟ್ಟಡ ನಿಮಾರ್ಣ ಮಾಡಿ, ವಾಣಿಜ್ಯ ವಹಿವಾಟು ನಡೆಸುವುದರಿಂದ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸಿ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹೊಸದಾಗಿ ಇವುಗಳ ನಿಮಾರ್ಣವಾಗದಂತೆ ಎಚ್ಚರಿಕೆ ವಹಿಸಬೇಕು. ಅನಧಿಕೃತ ಟೆಂಟ್ಗಳನ್ನು ಹಂತಹಂತವಾಗಿ ತೆರವುಗೊಳಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚು ರಸ್ತೆ ಅಪಘಾತ ಉಂಟಾದ ಕಪ್ಪುಚುಕ್ಕೆ ಸ್ಥಳಗಳನ್ನು ಪೊಲೀಸರ ಸಹಯೋಗದೊಂದಿಗೆ ಗುರುತಿಸಲಾಗಿದೆ. ಈ ಭಾಗದಲ್ಲಿ ವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಂಡು ರಸ್ತೆ ಅಪಘಾತಗಳು ಆಗದಂತೆ ನೋಡಿಕೊಳ್ಳಲು ಅವಶ್ಯವಿರುವ ಅನುದಾನವನ್ನು ಆದ್ಯತೆಯ ಮೇಲೆ ನೀಡಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಮಾತನಾಡಿ, ಕರಾವಳಿ ಭಾಗದಲ್ಲಿ ಹೆಚ್ಚು ಪ್ರಮಾಣದ ಮಳೆ ಬೀಳುತ್ತದೆ. ಇಲ್ಲಿ ಯಾವುದೇ ಕಟ್ಟಡ ಅಥವಾ ಸೇತುವೆ ನಿಮಾರ್ಣ ಮಾಡುವಾಗ ಪ್ರಾಕೃತಿಕ ಹವಾಮಾನಕ್ಕೆ ಅನುಗುಣವಾಗಿ ಕಟ್ಟಡ, ಸೇತುವೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಈ ಭಾಗಕ್ಕೆ ತಕ್ಕಂತೆ ವಿನ್ಯಾಸ ರಚಿಸಬೇಕು. ನದಿಗಳಿಗೆ ನಿಮಾರ್ಣ ಮಾಡಿರುವ ಸೇತುವೆ ಬಳಿ ಮರಳು ಗಣಿಗಾರಿಕೆ ಕೈಗೊಳ್ಳುವುದರಿಂದ ಸೇತುವೆ ಕಟ್ಟಡಕ್ಕೆ ಹಾನಿಉಂಟಾಗುತ್ತದೆ ಎಂದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಹೆಬ್ರಿ ತಾಲೂಕಿನ ಮಟ್ಟಾವುನಲ್ಲಿ ಅಧಿಕ ಸಂಖ್ಯೆಯ ಮಲೆಕುಡಿಯ ಜನಜಾಂಗದವರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ನಿಮಾರ್ಣಕ್ಕೆ ಕ್ರಮಕೈಗೊಳ್ಳಬೇಕು. ರಸ್ತೆ ಪಕ್ಕದಲ್ಲಿ ಅನಧಿಕೃತ ಅಂಗಡಿ ನಿಮಾರ್ಣವಾಗದಂತೆ ಎಚ್ಚರವಹಿಸಬೇಕು. ಜಿಲ್ಲಾ ಹೆದ್ದಾರಿ ಅಕ್ಕಪಕ್ಕದಲ್ಲಿ 25 ಮೀಟರ್ ವ್ಯಾಪ್ತಿಯೊಳಗೆ ಕಟ್ಟಡ ನಿಮಾರ್ಣ ಮಾಡಬಾರದು ಎಂಬ ನಿಯಮದಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದರು.
ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಕಾಲುಸಂಕಗಳಿಗೆ ಬಹುದೊಡ್ಡ ಬೇಡಿಕೆಯಿದ್ದು, ಆದ್ಯತೆಯ ಮೇಲೆ ಕಾಲುಸಂಕ ನಿಮಾರ್ಣ ಕಾರ್ಯ ಕೈಗೊಳ್ಳುವುದರಿಂದ ಕೃಷಿ ಚಟುವಟಿಕೆಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ, ವಿದ್ಯಾರ್ಥಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಾಂತಾಗುತ್ತದೆ ಎಂದು ಮನವಿ ಮಾಡಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜಿಲ್ಲೆಯಲ್ಲಿ ಅಧಿಕ ಮಳೆಯಾಗುವ ಹಿನ್ನೆಲೆ, ರಸ್ತೆಯ ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ಹಾಗೂ ಎಂ.ಡಿ.ಆರ್ ಅಪ್ಗ್ರೇಡೇಶನ್ ಆಗಿರುವುದರಿಂದ ರಸ್ತೆ ದುರಸ್ಥಿ ನಿರ್ವಹಣೆ ಕಾಮಗಾರಿಯನ್ನು ಸಮರ್ಪಕವಾಗಿ ಮಾಡುವಂತೆ ಸಚಿವರ ಗಮನಕ್ಕೆ ತಂದರು.
ಶಾಸಕ ಯಶ್ಪಾಲ್ ಎ ಸುವರ್ಣ ಮಾತನಾಡಿ, ಬಂಕರಕಟ್ಟೆಯಲ್ಲಿ ಸೇತುವೆ ಎತ್ತರ ಕಡಿಮೆಯಾಗಿರುವುದರಿಮದ ಮಳೆಗಾಲದಲ್ಲಿ ನೀರು ಸೇತುವೆಯ ಮೇಲ್ಭಾಗದಲ್ಲಿ ಹರಿಯುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಹಾಯಕಿ ಜೆ.ಜಿ. ಶಾಂತಲಾ ಮತ್ತಿತರರು ಉಪಸ್ಥಿತರಿದ್ದರು.