4 ಗ್ರಾಮಗಳಲ್ಲಿ 591.52 ಎಕರೆ ಫಸಲು ಹಾನಿ

 ಚಾಮರಾಜನಗರ : ಕಾವೇರಿ ನದಿ ಪ್ರವಾಹ ಪೀಡಿತ ಕೊಳ್ಳೇಗಾಲ ತಾಲೂಕಿನ 4 ಗ್ರಾಮಗಳಲ್ಲಿ 591.52 ಎಕರೆ ಫಸಲು ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಪ್ರಗತಿ ಕುರಿತು ಮಾತನಾಡಿದರು.

ಆಗಸ್ಟ್‌ನಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ದಾಸನಪುರ, ಹಳೇ ಹಂಪಾಪುರ, ಹಳೇ ಅಣಗಳ್ಳಿ ಗ್ರಾಮದಲ್ಲಿ ಭತ್ತ, ಕಬ್ಬು, ಮುಸುಕಿನ ಜೋಳ ಜಲಾವೃತಗೊಂಡು ನಷ್ಟವಾಗಿತ್ತು ಎಂದರು.

ಎಕರೆಗೆ 13,500 ರೂ.ಪರಿಹಾರ ನಿಗದಿ ಮಾಡಲಾಗಿದೆ. ಫಸಲು ನಷ್ಟ ಅನುಭವಿಸಿದ 4 ಗ್ರಾಮಗಳ ರೈತರಿಗೆ ಒಟ್ಟು 32.33 ಲಕ್ಷ ರೂ.ಬೆಳೆ ಪರಿಹಾರ ವಿತರಿಸಬೇಕಿದೆ. ಈ ಕುರಿತಾಗಿ ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಈ ಬಾರಿ ಜಿಲ್ಲೆಯಲ್ಲಿ ಶೇ.18ರಷ್ಟು ಹೆಚ್ಚು ಮುಂಗಾರು ಮಳೆಯಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸಾಕಷ್ಟು ಮಳೆಯಾಗಿದೆ. ಹನೂರು ತಾಲೂಕಿನ ಹಲವು ಕಡೆ ಬಿತ್ತನೆ ಆಗಿಲ್ಲ. ಕೊಳ್ಳೇಗಾಲ ತಾಲೂಕಿನ ಕೆಲವು ಭಾಗಗಳಲ್ಲಿ ಭತ್ತ ನಾಟಿ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 1.37 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ 88 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಶೇ.44ರಷ್ಟು ಬಿತ್ತನೆ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ವರದಿ ಒಪ್ಪಿಸುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಶಾಸಕ ಆರ್.ನರೇಂದ್ರ ಅವರು ಕೊಳ್ಳೇಗಾಲ ತಾಲೂಕಿನಲ್ಲಿನ ಬಿತ್ತನೆ ವಿಚಾರವಾಗಿ ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಾನು ಈ ಹಿಂದೆ ಕೊಳ್ಳೇಗಾಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇನೆ.ಶೇ.44ರಷ್ಟು ಮಳೆಯಾಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಬಿತ್ತನೆಯಾಗಿದೆ. ನಮ್ಮ ತಾಲೂಕಿನಲ್ಲಿ ಆಗಿಲ್ಲ, ಈ ಕುರಿತು ಇನ್ನೊಮ್ಮೆ ಪರಿಶೀಲಿಸಿ ಎಂದು ಸೂಚಿಸಿದರು.

ಸದ್ಯಕ್ಕೆ ಜಿಲ್ಲೆಯಲ್ಲಿ ಗೊಬ್ಬರದ ಕೊರತೆಯಿಲ್ಲ, ಭತ್ತದ ನಾಟಿ ಮುಗಿದ ನಂತರ ಯೂರಿಯಾದ ಅಭಾವವಾಗಬಹುದು. ಈ ಕುರಿತು ಕೃಷಿ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕಿನಲ್ಲಿ 3600 ಕ್ವಿಂಟಾಲ್ ಭತ್ತ ಬಿತ್ತನೆ ಆಗಿದೆ ಎಂದು ಹೇಳಿದರು.

ಕೆರೆಗಳಿಗೆ ನೀರು ತುಂಬಿಸುವ ಹುತ್ತೂರು ಏತ ಯೋಜನೆಯ 1ನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 2ನೇ ಹಂತ ಕಾಮಗಾರಿ ಪ್ರಾರಂಭಗೊಂಡಿಲ್ಲ. ಇದರಡಿ ಬರುವ ಸುವರ್ಣನಗರ ಕೆರೆ, ಅರಕಲವಾಡಿ ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲು ಮಾರ್ಗ ಸಮೀಕ್ಷೆ ನಡೆಯುತ್ತಿದೆ ಎಂದು ಸುವರ್ಣಾವತಿ ಜಲಾಶಯದ ಜೆ.ಇ.ಮಹೇಶ್ ತಿಳಿಸಿದರು.

ಅಕ್ಟೋಬರ್‌ನಲ್ಲಿ 2ನೇ ಹಂತದ ಕಾಮಗಾರಿ ಆರಂಭವಾಗಲಿದೆ. ಗಾಂಧಿಗ್ರಾಮ ಏತ ಯೋಜನೆ ಇನ್ನು ಪೂರ್ಣಗೊಂಡಿಲ್ಲ ಎಂಬ ಮಾಹಿತಿಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಬೇಗ ಕಾಮಗಾರಿ ಆರಂಭಿಸಿ ಎಂದು ಸೂಚಿಸಿದರು.

ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ : ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಕಡೆ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎಂಬ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಭಾರ ಎಇಇ ರವಿಕುಮಾರ್ ಅವರ ಮಾಹಿತಿಗೆ ಶಾಸಕ ಆರ್.ನರೇಂದ್ರ ಆಕ್ಷೇಪ ವ್ಯಕ್ತಪಡಿಸಿದರು. ಹನೂರು ತಾಲೂಕಿನ ಕಳ್ಳಿದೊಡ್ಡಿ, ತೆಳ್ಳನೂರು ಗ್ರಾಮಗಳಲ್ಲಿ ಮೊನ್ನೆ ನೀರಿನ ಸಮಸ್ಯೆಯಾಗಿದೆ. ಇದನ್ನೆಲ್ಲ ಗಮನಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು 213 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕಿದೆ ಎಂಬ ರವಿಕುಮಾರ್ ಮಾಹಿತಿಗೆ ಪ್ರತಿಕ್ರಿಯಿಸಿದ ಸಚಿವರು, ನಿಮ್ಮ ಇಲಾಖೆಯಿಂದ ಎಷ್ಟು ಆರಂಭಿಸಿದ್ದೀರಿ ಎಂದು ಪ್ರಶ್ನಿಸಿದರು. ನಮ್ಮಿಂದ 90 ನೀರಿನ ಘಟಕಗಳನ್ನು ಆರಂಭಿಸಬೇಕಿದ್ದು 16 ಘಟಕಗಳ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಒಂದು ಮಾತ್ರ ಆರಂಭವಾಗಿದೆ ಎಂಬ ಮಾಹಿತಿಯಿಂದ ಅಸಮಾಧಾನಗೊಂಡ ಸಚಿವರು, ಘಟಕಗಳ ಸ್ಥಾಪನೆಗೆ ಕ್ರಮ ವಹಿಸಿ ಎಂದು ಸೂಚಿಸಿದರು.

ಜಿಪಂ ಸದಸ್ಯ ಚೆನ್ನಪ್ಪ ಮಾತನಾಡಿ, ಗುಂಡ್ಲುಪೇಟೆ ತಾಲೂಕು ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ಗಳು 30 ವರ್ಷಗಳಷ್ಟು ಹಳೆಯದಾಗಿವೆ. ಆಗಾಗ ಒಡೆದು ನೀರು ಪೋಲಾಗುತ್ತಿದೆ. ಇವುಗಳನ್ನು ಬದಲಿಸಲು ವರದಿ ತಯಾರಿಸಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಯೋಗೇಶ್, ಸಿಇಒ ಡಾ.ಕೆ.ಹರೀಶಕುಮಾರ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಕೈ ಕೊಟ್ಟಿದ್ದ ಮೈಕ್ ಸಿಸ್ಟಂ : ಜಿಪಂ ಸಭಾಂಗಣದಲ್ಲಿ ಮೈಕ್ ಸಿಸ್ಟಂ ಸರಿಯಾಗಿ ಕೆಲಸ ಮಾಡದೆ ಅಧಿಕಾರಿಗಳು ಸಭೆಗೆ ನೀಡುವ ಮಾಹಿತಿ ಮತ್ತು ಸಚಿವರು, ಶಾಸಕರ ಪ್ರತಿಕ್ರಿಯೆಗಳು ಯಾರಿಗೂ ಸ್ಪಷ್ಟವಾಗಿ ಕೇಳಿಸದೆ ಅವ್ಯವಸ್ಥೆ ಅನಾವರಣವಾಯಿತು.

ಮಧ್ಯಾಹ್ನ ಆರಂಭಗೊಂಡ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಂಭಾಗ ಮಾತನಾಡಿದರೆ ಹಿಂಭಾಗ ಕುಳಿತಿದ್ದವರಿಗೆ ಕೇಳುತ್ತಿರಲಿಲ್ಲ. ಇವರಿಗೆ ಸಭೆಯಲ್ಲಿ ಯಾವ ಇಲಾಖೆಯ ಪ್ರಗತಿ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಮಾಧ್ಯಮದವರಂತೂ ಪರದಾಡಬೇಕಾಯಿತು.

ಮೈಕ್ ಅವ್ಯವಸ್ಥೆ ಬಗ್ಗೆ ಸಭೆಯಲ್ಲಿಯೇ ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು. ಸಂಬಂಧಪಟ್ಟವರನ್ನು ಕಳುಹಿಸಿ ಪರೀಕ್ಷಿಸಿದಾಗ ಮೈಕ್ ಸಿಸ್ಟಂನಲ್ಲಿ ಸ್ವಲ್ಪ ಸಮಸ್ಯೆಯಿದೆ ಎಂಬ ಉತ್ತರ ಬಂತು. ಶಾಸಕರು, ಸಚಿವರಂತೂ ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಚರ್ಚೆಯಲ್ಲಿ ತೊಡಗಿದ್ದರು. ಸಂಬಂಧಪಟ್ಟವರ ಬೇಜವಾಬ್ದಾರಿತನದಿಂದ ಸಭೆ ಅವ್ಯವಸ್ಥೆಯ ಗೂಡಾಯಿತು.