ಸೊರಬ: ಸಮಾಜದ ಹಿಂದುಳಿದವರನ್ನು ಆರ್ಥಿಕವಾಗಿ ಶಕ್ತರನ್ನಾಗಿಸುವ ಉದ್ದೇಶದಿಂದ ಸಂಘ ಸ್ಥಾಪಿಸಿದ್ದು, ಸದಸ್ಯರ ಸಹಕಾರದಿಂದ ಎಂಟು ವರ್ಷಗಳಿಂದ ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಪಿ.ಪ್ರೇಮಾ ಹೇಳಿದರು.
ಪಟ್ಟಣದ ಮುರುಘಾಮಠದಲ್ಲಿ ಏರ್ಪಡಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದ ಬೆಳವಣಿಗೆಗೆ ಷೇರುದಾರರ ಸಹಕಾರ ಮುಖ್ಯ. ಸಂಘದ ಬ್ಯಾಂಕಿನಲ್ಲಿ ಪ್ರತಿಯೊಬ್ಬರೂ 5000 ರೂ.ಗೂ ಅಧಿಕ ಠೇವಣಿ ತೊಡಗಿಸಿದಾಗ ಸಂಘ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಪ್ರಸ್ತುತ ಸಂಘದಲ್ಲಿ 1,467 ಸದಸ್ಯರನ್ನು ಹೊಂದಿದ್ದು, 2023-24ರಲ್ಲಿ 4,67,764 ರೂ. ಲಾಭ ಗಳಿಸಿದೆ. ಷೇರುದಾರರ ಸಂಖ್ಯೆ ಹೆಚ್ಚಿಸಿ ಠೇವಣಿ ಸಂಗ್ರಹ ಜಾಸ್ತಿ ಮಾಡಬೇಕು. ಸಾಲದ ಮಿತಿ ಹೆಚ್ಚಿಸುವ ಹಾಗೂ ಪ್ರತಿ ಹೋಬಳಿಯಲ್ಲಿ ಸಂಘದ ಶಾಖೆ ತೆರೆಯುವ ಗುರಿ ಹೊಂದಲಾಗಿದೆ. ಸಾಲ ತೆಗೆದುಕೊಂಡ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿಸಬೇಕು ಎಂದರು.
ಕೆ.ಸಂಗಪ್ಪ ನಾಯಕ್ ಬೆನ್ನೂರು ಹಾಗೂ ಎಚ್.ಆರ್.ರುದ್ರಪ್ಪ ನಾಯಕ್ ಅಂಡಗಿ ಅವರ ಸ್ಮರಣಾರ್ಥ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ಮುಂದಿನ ವರ್ಷದಿಂದ ಸಂಘದ ಸಂಸ್ಥಾಪಕ ಇಂದೂಧರ ವಡೆಯರ್ ಹಾಗೂ ಹೆಗ್ಗೋಡು ರೇವಣಪ್ಪ ಗೌಡರ ಸ್ಮರಣಾರ್ಥ ಪುರಸ್ಕಾರ ನೀಡಲು ವಡೆಯರ ಅಭಿಮಾನಿ ಬಳಗದ ಅಧ್ಯಕ್ಷ ರಾಜೇಂದ್ರ ನಾಯಕ್, ರೇವಣಪ್ಪ ಗೌಡರ ಮಗ ಪ್ರಕಾಶ್ (ಬಾಬು ಗೌಡ) ವಂತಿಗೆ ನೀಡಿದರು.
ಉಪಾಧ್ಯಕ್ಷ ಮಲ್ಲಿಕಾರ್ಜುನ ಗುತ್ತೇರ್, ನಿರ್ದೇಶಕರಾದ ಕೆ.ವಿ.ಗೌಡ, ಎಚ್.ಮಲ್ಲಿಕಾರ್ಜುನಪ್ಪ, ಕೆ.ಬಿ.ಜಯಶೀಲ ಗೌಡ, ಟಿ.ಎಸ್.ಬಂಗಾರಸ್ವಾಮಿ, ಕೆ.ಜಿ.ಲೋಲಾಕ್ಷಮ್ಮ, ಲತಾ ಮಹೇಶ್ವರ, ಎಂ.ಜಿ.ನಿರಂಜನ, ಎಂ.ಎನ್.ಸುರೇಂದ್ರ ಗೌಡ, ವಿನಯ ಪಾಟೀಲ್, ವೀರಬಸವನ ಗೌಡ, ಕೆ.ಸಿ.ಶಿವಕುಮಾರ ಗೌಡ, ಸಿಇಒ ಸಿ.ಪಿ.ವಿನಾಯಕ, ಎಸ್.ಪ್ರಿಯಾಂಕಾ, ಸಂಪತ್‌ಕುಮಾರ ಇತರರಿದ್ದರು.