ಭಾರತೀಯ ಕ್ರಿಕೆಟ್ ಸೂಪರ್​ಸ್ಟಾರ್ ವಿರಾಟ್

|ರಘುನಾಥ್ ಡಿ.ಪಿ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 2 ದಶಕಗಳಿಗೂ ಹೆಚ್ಚು ಸಮಯ ವಿಜೃಂಭಿಸಿದ ಆಟಗಾರ ಸಚಿನ್ ತೆಂಡುಲ್ಕರ್. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳ ಒಡೆಯನಾಗಿ, ಅಭಿಮಾನಿಗಳ ಪಾಲಿಗೆ ದೇವರಾಗಿ ಆರಾಧಿಸಲ್ಪಟ್ಟವರು ದಿಗ್ಗಜ ಬ್ಯಾಟ್ಸ್​ಮನ್. ಇದೀಗ ಅದೇ ಕ್ರಿಕೆಟ್ ದೇವರು ಇಟ್ಟ ಹೆಜ್ಜೆಗಳನ್ನು ಹಿಮ್ಮೆಟ್ಟುತ್ತ ಸಾಗುತ್ತಿದ್ದಾರೆ ವಿರಾಟ್ ಕೊಹ್ಲಿ. 2013ರ ನವೆಂಬರ್ ತಿಂಗಳಲ್ಲಿ ಸಚಿನ್ ತೆಂಡುಲ್ಕರ್ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಹುಟ್ಟಿಕೊಂಡ ಹೆಸರೇ ವಿರಾಟ್ ಕೊಹ್ಲಿ. ಶ್ರದ್ಧೆ ಹಾಗೂ ಬದ್ಧತೆಗೆ ಹೆಸರಾಗಿರುವ ಆಟಗಾರ ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ಹಲವು ಶ್ರೇಷ್ಠ ಆಟಗಾರರಿಂದ ‘ಕಿಂಗ್ ಕೊಹ್ಲಿ’ ಎಂದು ಕರೆಸಿಕೊಳ್ಳುತ್ತಿರುವ ಅವರು, ಸಚಿನ್ ನಿರ್ವಿುಸಿದ್ದ ದಾಖಲೆಗಳನ್ನು ಒಂದೊಂದಾಗಿ ಹಿಮ್ಮೆಟ್ಟಿಸುತ್ತ ಸಾಗುತ್ತಿದ್ದಾರೆ. ಅದರಲ್ಲೂ ಕೆಲ ದಾಖಲೆಗಳನ್ನು ನಿರೀಕ್ಷೆಗಿಂತ ಮುಂಚಿತವಾಗಿಯೇ ಮುರಿಯುವ ಮೂಲಕ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತೆ ಮಾಡಿದ್ದಾರೆ ವಿರಾಟ್ ಕೊಹ್ಲಿ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ 10 ಸಾವಿರ ರನ್ ಗಳಿಸಿದ ವಿಶ್ವದಾಖಲೆಯೊಂದಿಗೆ ಕೊಹ್ಲಿ ಇನ್ನಷ್ಟು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡಲಾರಂಭಿಸಿದ್ದಾರೆ. ಸಚಿನ್ ತೆಂಡುಲ್ಕರ್ 10 ಸಾವಿರ ರನ್ ಬಾರಿಸಲು 259 ಇನಿಂಗ್ಸ್ ತೆಗೆದುಕೊಂಡಿದ್ದರೆ, ವಿರಾಟ್ ಕೇವಲ 205 ಇನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿದ ಅವರು ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಕಳೆದ ಬುಧವಾರ ಆಂಧ್ರಪ್ರದೇಶದ ಕರಾವಳಿ ನಗರಿ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಶತಕದ ಸಂಭ್ರಮ ಒಂದೆಡೆಯಾದರೆ, ಇದಕ್ಕೂ ಮುನ್ನ ವೈಯಕ್ತಿಕ 81 ರನ್​ಗಳಿಸಿದ್ದ ವೇಳೆ 10 ಸಾವಿರ ರನ್ ಗಡಿ ಮುಟ್ಟಿದರು. 10 ಸಾವಿರ ರನ್ ಗಡಿ ಮುಟ್ಟಿದ ಬಳಿಕ ಆಕಾಶಕ್ಕೆ ಮುಖ ಮಾಡಿ, ಕುತ್ತಿಗೆಯಲ್ಲಿ ಧರಿಸಿದ್ದ ನಿಶ್ಚಿತಾರ್ಥದ ಉಂಗುರಕ್ಕೆ ಮುತ್ತು ನೀಡಿ ನಿಂತಲ್ಲೇ ಸಂಭ್ರಮಿಸಿದರು.

17 ವರ್ಷದ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಚಿನ್, 259 ಇನಿಂಗ್ಸ್​ಗಳಲ್ಲಿ 10 ಸಾವಿರ ರನ್ ಗಡಿ ದಾಟಿದಾಗ ಮುಂದಿನ ದಿನಗಳಲ್ಲಿ ಈ ಸಾಧನೆ ಹಿಂದಿಕ್ಕುವ ಬ್ಯಾಟ್ಸ್​ಮನ್ ಬರಲಾರ ಎಂದೇ ಭಾವಿಸಿದ್ದರು ಅಧಿಕ ಮಂದಿ. ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಆರಂಭಿಕ 3 ಪಂದ್ಯಗಳಲ್ಲೂ ಶತಕ ಸಿಡಿಸಿರುವ ಕೊಹ್ಲಿ, ಮತ್ತೊಂದು ದಾಖಲೆಯ ಒಡೆಯನಾಗಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿದ ಭಾರತದ ಮೊದಲ

ಬ್ಯಾಟ್ಸ್​ಮನ್ ಆಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಗಳಿಸಿದ ವಿಶ್ವದ 13ನೇ ಹಾಗೂ ಭಾರತದ 5ನೇ ಬ್ಯಾಟ್ಸ್ ಮನ್ ಆಗಿರುವ ಕೊಹ್ಲಿ, ಹಾಲಿ ವರ್ಷದಲ್ಲಿ ಅತಿವೇಗವಾಗಿ ಅಂದರೆ ಕೇವಲ 11 ಇನಿಂಗ್ಸ್​ಗಳಲ್ಲಿಯೇ 1 ಸಾವಿರ ರನ್ ಪೂರೈಸಿದ್ದಾರೆ. ಕೊಹ್ಲಿಗೆ ‘ಸೆಂಚುರಿ ಸ್ಟಾರ್’ ಜತೆಗೆ ಚೇಸಿಂಗ್ ಕಿಂಗ್ ಎಂಬ ಹೆಸರು ಕೂಡ ಹೊಂದುತ್ತದೆ. ಕೊಹ್ಲಿ ಸಿಡಿಸಿರುವ 38 ಶತಕಗಳ ಪೈಕಿ 27 ಶತಕಗಳು ಎರಡನೇ ಸರದಿ ಬ್ಯಾಟಿಂಗ್ ವೇಳೆ ಬಂದಿರುವುದು ಇದಕ್ಕೆ ಸಾಕ್ಷಿ. ಜತೆಗೆ ಚೇಸಿಂಗ್ ಮೂಲಕವೇ 6 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಸಚಿನ್ ಚೇಸಿಂಗ್ ವೇಳೆ 8720 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

ನಿಜವಾಗುವುದೇ ಸಚಿನ್ ಮಾತು?: ‘ಭಾರತೀಯ ಆಟಗಾರರಿಂದಲೇ 100ನೇ ಅಂತಾರಾಷ್ಟ್ರೀಯ ಶತಕ ಸಿಡಿಯಬೇಕು. ನನ್ನ ದೇಶದ ಆಟಗಾರನಿಂದಲೇ ನನ್ನ ದಾಖಲೆ ಮುರಿದರೆ ಸಂತಸವಾಗುತ್ತದೆ’ ಎಂದು ದಿಗ್ಗಜ ಸಚಿನ್ ತೆಂಡುಲ್ಕರ್ ನಿವೃತ್ತಿ ಘೋಷಿಸಿದ ಬಳಿಕ ಹೇಳಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಶರ್ಮಗೆ ಈ ಸಾಮರ್ಥ್ಯವಿದೆ ಎಂದೂ ತಿಳಿಸಿದ್ದರು. ಕೊಹ್ಲಿಯ ಕ್ರಿಕೆಟ್ ಸಾಧನೆ ನೋಡಿದರೆ ದಿಗ್ಗಜನ ಮಾತು ಸತ್ಯವಾಗುವ ದಿನ ದೂರವಿಲ್ಲ ಎನಿಸುತ್ತಿದೆ. ಸಚಿನ್ ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ (ಟಿ20-ಐಪಿಎಲ್​ನಲ್ಲಿ ಮಾತ್ರ) ಮಾದರಿಗಳಲ್ಲಿ ಮಿಂಚಿದ್ದರೆ, ಕೊಹ್ಲಿಗೆ ಮೂರು ಮಾದರಿ (ಟೆಸ್ಟ್, ಏಕದಿನ, ಟಿ20) ಕ್ರಿಕೆಟ್​ನಲ್ಲಿ ರನ್​ಗಳಿಸುವ ಸುವರ್ಣಾವಕಾಶ ಲಭಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಇನ್ನು ಮೂರಂಕಿ ಮೊತ್ತ ದಾಟದಿದ್ದರೂ ಟೆಸ್ಟ್ (24) ಹಾಗೂ ಏಕದಿನ (38) ಕ್ರಿಕೆಟ್​ನಿಂದ ಈಗಾಗಲೇ 62 ಶತಕ ಸಿಡಿಸಿದ್ದು, ಇದೇ ಮಾದರಿಯಲ್ಲಿ ಲಯ ಮುಂದುವರಿಸಿದರೆ 4-5 ವರ್ಷಗಳಲ್ಲೇ 100ರ ಗಡಿ ದಾಟುವುದು ಅಸಾಧ್ಯವೇನಲ್ಲ. 29ರ ಹರೆಯದ ಕೊಹ್ಲಿ ಇದೇ ಫಿಟ್ನೆಸ್ ಕಾಯ್ದುಕೊಂಡರೆ ಕನಿಷ್ಠ ಮುಂದಿನ 8 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಬಹುದು.

ಫಿಟ್ನೆಸೇ ಯಶಸ್ಸಿನ ಮಂತ್ರ: ವಿರಾಟ್ ಕೊಹ್ಲಿ ಯಶಸ್ಸಿನ ಹಿಂದೆ ಅವರ ಬದ್ಧತೆಯ ಜತೆಗೆ ಫಿಟ್ನೆಸ್ ಕೂಡ ಪ್ರಧಾನಪಾತ್ರ ವಹಿಸುತ್ತಿದೆ. ಬಿಡುವಿನ ವೇಳೆ ಹಲವು ತಡರಾತ್ರಿ ಪಾರ್ಟಿ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡರೂ ಕೊಹ್ಲಿ ಎಲ್ಲೂ ಜಂಕ್ ಫುಡ್ಸ್ ಮುಟ್ಟುವುದಿಲ್ಲ. ಡಯೆಟ್ ಬಗ್ಗೆ ಅತಿಯಾದ ಮುತುವರ್ಜಿ ವಹಿಸುತ್ತಾರೆ. ಪ್ರತಿದಿನ ಬೆಳಗ್ಗೆ ಕೆಲಕಾಲ ಜಿಮ್ಲ್ಲಿ ಕಸರತ್ತು ನಡೆಸುವ ಕೊಹ್ಲಿ, ತಿಂಡಿಗೆ ಮೂರು ಆಮ್ಲೆಟ್ (ಮೊಟ್ಟೆಯ ಬಿಳಿ ಭಾಗ ಮಾತ್ರ) ತಿನ್ನುತ್ತಾರೆ. ಜತೆಗೆ ಬ್ರೆಡ್ ರೊಸ್ಟ್ ಕಾಯಂ. ಚಿಕನ್​ಅನ್ನು ಹೆಚ್ಚಾಗಿ ಇಷ್ಟಪಡುವ ಕೊಹ್ಲಿ, ಮಟನ್ ಹಾಗೂ ಚಿಕನ್ ಸೂಪ್ ತಪ್ಪಿಸುವುದಿಲ್ಲ.

ಅನುಷ್ಕಾ ಎಂಟ್ರಿ ಬಳಿಕ ಬದಲಾದ ಕೊಹ್ಲಿ: 2014-15ರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸದ ವೇಳೆ ಕೊಹ್ಲಿ ಜತೆಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕಾಣಿಸಿಕೊಂಡರು. ಆಸ್ಟ್ರೇಲಿಯಾ, ನ್ಯೂಜಿಲೆಂಡ್​ನ ಪ್ರಮುಖ ನಗರಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದರ ಜತೆಗೆ ಮೈದಾನದಲ್ಲಿ ಕೊಹ್ಲಿ ಆಟ ನೋಡಲು ಅನುಷ್ಕಾ ಬರುತ್ತಿದ್ದರು. ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸುವ ವೇಳೆ ಅನುಷ್ಕಾ ಕಡೆಗೆ ಬ್ಯಾಟ್ ತೋರಿಸುತ್ತಿದ್ದರು. ಅಲ್ಲಿವರೆಗೂ ಕೇವಲ ಗಾಳಿಸುದ್ದಿಯಲ್ಲಿದ್ದ ಈ ಜೋಡಿಯ ಪ್ರೇಮಪ್ರಕರಣ ಅಧಿಕೃತಗೊಂಡಿತು. ಕಳೆದ ವರ್ಷದ ಡಿಸೆಂಬರ್​ನಲ್ಲಿ ದೂರದ ಇಟಲಿಯಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು. ಕುಟುಂಬಸ್ಥರು-ಸ್ನೇಹಿತರಿಗಾಗಿ ದೆಹಲಿ ಹಾಗೂ ಮುಂಬೈನಲ್ಲಿ ನಡೆದ ಪ್ರತ್ಯೇಕ ಆರತಕ್ಷತೆ ಸಮಾರಂಭಗಳಿಗೆ ಇಡೀ ಬಾಲಿವುಡ್ ಹಾಗೂ ರಾಷ್ಟ್ರೀಯ ಕ್ರಿಕೆಟ್ ತಂಡವೇ ಸಾಕ್ಷಿಯಾಗಿತ್ತು. ಅನುಷ್ಕಾ ಕೈ ಹಿಡಿದ ಬಳಿಕ ಕೊಹ್ಲಿ ಕೂಲ್ ಆಗಿರುವುದು ಅವರ ಭಾವಭಂಗಿಯಲ್ಲೇ ಗೊತ್ತಾಗುತ್ತದೆ. ಎದುರಾಳಿ ಆಟಗಾರರೊಂದಿಗೆ ಮಾಡಿಕೊಳ್ಳುತ್ತಿದ್ದ ಕಿರಿಕ್​ಗಳು ಕಡಿಮೆಯಾಗಿವೆ. ಏಕದಿನ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕವಂತು ಸಂಪೂರ್ಣ ಬದಲಾಗಿದ್ದಾರೆ. ಸಾರ್ವಜನಿಕವಾಗಿ ಅವರೇ ಹೇಳಿಕೊಂಡಂತೆ ಅವರ ವ್ಯಕ್ತಿತ್ವದಲ್ಲಿ ಅನುಷ್ಕಾ ಸಾಕಷ್ಟು ಬದಲಾವಣೆ ತಂದಿದ್ದಾರೆ ಎನ್ನುತ್ತಾರೆ. ಅದರಲ್ಲೂ ಸಂಯಮ, ಶಿಸ್ತು ಪ್ರಮುಖವಾದವು. 2008ರಲ್ಲಿ 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡ ಮುನ್ನಡೆಸಿದ್ದ ಕೊಹ್ಲಿಗೆ ನಾಯಕತ್ವ ಗುಣ ಆರಂಭಿಕ ಹಂತದಿಂದಲೇ ಬಂದಿದೆ. 2019ರ ಏಕದಿನ ವಿಶ್ವಕಪ್​ನಲ್ಲಿ ಅವರ ನಾಯಕತ್ವದ ದೊಡ್ಡ ಸವಾಲು ಎದುರಾಗಲಿದೆ.

(ಲೇಖಕರು ವಿಜಯವಾಣಿ ಹಿರಿಯ ಉಪಸಂಪಾದಕರು)

Leave a Reply

Your email address will not be published. Required fields are marked *