ಲಿಟಲ್ ವಂಡರ್ ಪೃಥ್ವಿ ಷಾ

ಸಂತೋಷ್ ನಾಯ್ಕ್

​ಬೆಂಗಳೂರು: ‘ನನ್ನ ಪತ್ನಿ ಹಾಗೂ ದೇವರು ನೀಡಿದ ಅತಿದೊಡ್ಡ ಉಡುಗೊರೆ ಪೃಥ್ವಿ. ಆಕೆ ತೀರಿಕೊಂಡಾಗ ಪೃಥ್ವಿಗೆ ನಾಲ್ಕು ವರ್ಷ. ಆಕೆ ಇಲ್ಲ ಎನ್ನುವ ನೋವನ್ನು ತುಂಬಿಕೊಳ್ಳಬೇಕಿತ್ತು. ಆಗ ಆಸರೆಯಾಗಿದ್ದು ಕ್ರಿಕೆಟ್. ನಂತರ ನಮ್ಮಿಬ್ಬರ ಜೀವನದಲ್ಲಿ ಉಳಿದುಕೊಂಡಿದ್ದು ಕ್ರಿಕೆಟ್ ಮಾತ್ರ’.

ಭಾರತೀಯ ಕ್ರಿಕೆಟ್​ನ ಹೊಸ ಸೆನ್ಸೇಷನ್ ಪೃಥ್ವಿ ಷಾ ತಂದೆ ಪಂಕಜ್ ಷಾ, 19 ವಯೋಮಿತಿ ವಿಶ್ವಕಪ್​ಗೂ ಮುನ್ನ ಸಂದರ್ಶನದಲ್ಲಿ ಹೇಳಿದ್ದ ಮಾತಿದು.

ಬಹುಶಃ ಪೃಥ್ವಿಗಿಂತ ಹೆಚ್ಚಾಗಿ ಮಗ ಕ್ರಿಕೆಟರ್ ಆಗಬೇಕು ಎಂದು ದೊಡ್ಡ ಕನಸನ್ನು ಕಟ್ಟಿಕೊಂಡ ವ್ಯಕ್ತಿ ಪಂಕಜ್.

ಕೆಲವೇ ದಿನಗಳಲ್ಲಿ 19ನೇ ವರ್ಷಕ್ಕೆ ಕಾಲಿರಿಸಲಿರುವ ಪೃಥ್ವಿ ಷಾ ಈಗಾಗಲೇ ವಿಶ್ವ ಕ್ರಿಕೆಟ್​ನಲ್ಲಿ ‘ದಿ ನೆಕ್ಸ್ ್ಟ ತೆಂಡುಲ್ಕರ್’ ಎಂದು ಗುರುತಿಸಿಕೊಂಡಾಗಿದೆ. ರಾಜ್​ಕೋಟ್ ಟೆಸ್ಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಮುಂಬೈ ಸೆನ್ಸೇಷನ್​ಗೆ ಮಾತ್ರ ತಾನು ಇನ್ನೊಬ್ಬ ತೆಂಡುಲ್ಕರ್ ಆಗುವುದು ಇಷ್ಟವಿಲ್ಲ!

‘ಸಚಿನ್ ತೆಂಡುಲ್ಕರ್ ನನ್ನ ಆದರ್ಶ. ನನ್ನೆಲ್ಲ ಕ್ರಿಕೆಟ್ ನಿರ್ಧಾರಗಳಿಗೆ ಅವರೇ ಸ್ಪೂರ್ತಿ. ಆದರೆ, ಇನ್ನೊಬ್ಬ ಸಚಿನ್ ಆಗಬೇಕು ಎನ್ನುವ ಆಸೆ ನನಗಿಲ್ಲ. ಮೊದಲು ಪೃಥ್ವಿ ಷಾ ಆಗಬೇಕು’ ಎನ್ನುವ ವಿಶ್ವಾಸದ ಮಾತುಗಳನ್ನಾಡುತ್ತಾರೆ.

ಭಾರತ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಶತಕ ಬಾರಿಸಿದ ಕಿರಿಯ ಆಟಗಾರ ಪೃಥ್ವಿ ಕ್ರಿಕೆಟ್ ಜೀವನ ಈಗ ತಾನೆ ಆರಂಭವಾಗಿದೆ. ದೀರ್ಘ ಕಾಲ ಟೀಮ್ ಇಂಡಿಯಾ ಬ್ಯಾಟಿಂಗ್ ಶಕ್ತಿ ಎನಿಸಿಕೊಳ್ಳುವ ಭರವಸೆ ಮೂಡಿಸಿಯಾಗಿದೆ. ಶಾಲಾ ಹಾಗೂ ವಯೋಮಿತಿ ಮಟ್ಟದ ಕ್ರಿಕೆಟ್​ನಲ್ಲಿ ಗಮನಸೆಳೆದ ಬಳಿಕ, ಕಳೆದ ಮೂರು ವರ್ಷಗಳಿಂದ ಜೂನಿಯರ್ ಕ್ರಿಕೆಟ್​ನಲ್ಲಿ ಚಾಲ್ತಿಯಲ್ಲಿದ್ದ ಈ ಬ್ಯಾಟಿಂಗ್ ಬಾಂಬ್ ಮೊದಲು ಬೆಳಕಿಗೆ ಬಂದಿದ್ದು ಐದು ವರ್ಷ ಹಿಂದೆ ಹ್ಯಾರಿಸ್ ಶೀಲ್ಡ್ ಪಂದ್ಯದಲ್ಲಿ. 14ನೇ ವಯಸ್ಸಿನಲ್ಲಿಯೇ ಬರೋಬ್ಬರಿ 546 ರನ್ ಸಿಡಿಸಿ ವಿಶ್ವದಾಖಲೆ ಬರೆದ ಪೃಥ್ವಿ ಷಾ, ಇದಕ್ಕಾಗಿ 330 ಎಸೆತ ಆಡಿದ್ದರು. 85 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ ಈ ಹುಡುಗ ಖಂಡಿತವಾಗಿ ಟೀಮ್ ಇಂಡಿಯಾ ಪರ ಆಡುತ್ತಾನೆ ಎಂದು ಆಗಲೇ ಜನ ಭವಿಷ್ಯ ನುಡಿದಿದ್ದರು.

2018ರ ಆರಂಭದಲ್ಲಿ 19 ವಯೋಮಿತಿ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕರಾಗಿದ್ದ ಪೃಥ್ವಿ ಷಾ, 2016-17ರ ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ ತಮಿಳುನಾಡು ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಶತಕ ಬಾರಿಸಿದ್ದ ಮುಂಬೈ ಆಟಗಾರ, ಬಳಿಕ ನಡೆದ ದುಲೀಪ್ ಟ್ರೋಫಿಯಲ್ಲೂ ಶತಕ ಬಾರಿಸಿ ರಣಜಿ ಹಾಗೂ ದುಲೀಪ್ ಟ್ರೋಫಿಯ ಪದಾರ್ಪಣಾ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು.

‘3 ವರ್ಷದವನಿದ್ದಾಗಲೇ ಪ್ಲಾಸ್ಟಿಕ್ ಚೆಂಡನ್ನು ಆತ ಮನೆಯ ಮೂಲೆ ಮೂಲೆಗೆ ಅಟ್ಟುತ್ತಿದ್ದ. ಆಗಲೇ ಆತನ ಜೀವನವನ್ನು ಕ್ರಿಕೆಟ್​ನಲ್ಲಿ ರೂಪಿಸಬೇಕು ಎಂದು ತೀರ್ವನಿಸಿದ್ದೆ. ಈ ಹಂತದಲ್ಲಿ ಸಣ್ಣ ಗಾರ್ವೆಂಟ್ಸ್ ಉದ್ದಿಮೆ ಹೊಂದಿದ್ದೆ. ಇಲ್ಲಿನ ಬಟ್ಟೆಗಳನ್ನು ಸೂರತ್ ಹಾಗೂ ಬರೋಡಕ್ಕೆ ಒಯ್ದು ಮಾರಾಟ ಮಾಡಬೇಕಿತ್ತು. ಆದರೆ, ಮಗನ ಕ್ರಿಕೆಟ್ ಅಭ್ಯಾಸದ ಕಾರಣ ಇದು ಸಾಧ್ಯವಾಗುತ್ತಿರಲಿಲ್ಲ. ಆ ಬಳಿಕ ಉದ್ಯಮಕ್ಕೆ ವಿದಾಯ ಹೇಳಿ ಪೂರ್ಣ ಪ್ರಮಾಣದಲ್ಲಿ ಪೃಥ್ವಿಯ ಕ್ರಿಕೆಟ್ ಅಭ್ಯಾಸದತ್ತ ಗಮನ ನೀಡಿದೆ’ ಎನ್ನುತ್ತಾರೆ ಪಂಕಜ್.

2009ರಲ್ಲಿ ಪೃಥ್ವಿಗೆ ಸ್ಕಾಲರ್​ಷಿಪ್ ಹಾಗೂ ಸಾಂತಾಕ್ರೂಜ್​ನಲ್ಲಿ ಇಂಡಿಯನ್ ಆಯಿಲ್ ಸಹಾಯದಿಂದ ಅಪಾರ್ಟ್​ವುಂಟ್ ಸಿಗುವವರೆಗೂ ಇದ್ದ ಸ್ವಲ್ಪ ಹಣದಲ್ಲಿಯೇ ಆತನ ಅಭ್ಯಾಸ ಸಾಗುತ್ತಿತ್ತು. ಅದಕ್ಕೂ ಮುನ್ನ ಪ್ರತಿದಿನ ವಿರಾರ್​ನಿಂದ ಬಾಂದ್ರಾದಲ್ಲಿದ್ದ ಎಂಇಜಿ ಕ್ಲಬ್ ಅಕಾಡೆಮಿಗೆ ಒಂದೂವರೆ ಗಂಟೆ ಪ್ರಯಾಣ ಮಾಡಿ ಬರುತ್ತಿದ್ದ ಪೃಥ್ವಿ. ಮುಂಬೈನ ಶಾಲಾ ಕ್ರಿಕೆಟ್​ನಲ್ಲಿ ಅಧಿಪತ್ಯ ಸ್ಥಾಪಿಸಿರುವ ರಿಜ್ವಿ ಸ್ಪ್ರಿಂಗ್​ಫೀಲ್ಡ್ ಶಾಲೆಯಲ್ಲಿ 3ರಿಂದ 10ನೇ ತರಗತಿವರೆಗೆ ಅಭ್ಯಾಸ ಮಾಡಿದ ಪೃಥ್ವಿ, 2012 ಹಾಗೂ 2013ರಲ್ಲಿ ಶಾಲಾ ಕ್ರಿಕೆಟ್​ನ ಪ್ರತಿಷ್ಠಿತ ಟೂರ್ನಿ ಹ್ಯಾರಿಸ್ ಶೀಲ್ಡ್​ನಲ್ಲಿ ಆಡಿದ್ದರು. ಪ್ರಸ್ತುತ ರಿಜ್ವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.

1999ರ ನವೆಂಬರ್ 9ರಂದು ಮುಂಬೈನ ವಿರಾರ್​ನಲ್ಲಿ ಜನಿಸಿದ ಪೃಥ್ವಿ, ಬಲಗೈ ಬ್ಯಾಟ್ಸ್​ಮನ್ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. 2018ರಲ್ಲಿ 1.2 ಕೋಟಿ ರೂ.ಗೆ ಐಪಿಎಲ್ ತಂಡ ಡೆಲ್ಲಿ ಡೇರ್​ಡೆವಿಲ್ಸ್ ಒಪ್ಪಂದ ಪಡೆದಿದ್ದಾರೆ. 14 ಪ್ರಥಮ ದರ್ಜೆ ಪಂದ್ಯಗಳಿಂದ 7 ಶತಕ ಹಾಗೂ 5 ಅರ್ಧಶತಕದೊಂದಿಗೆ 1418, 22 ಲಿಸ್ಟ್ ಎ ಪಂದ್ಯಗಳಿಂದ 3 ಶತಕ ಹಾಗೂ 5 ಅರ್ಧಶತಕದೊಂದಿಗೆ 938 ರನ್ ಬಾರಿಸಿದ್ದಾರೆ.

ಪೃಥ್ವಿ 5.4 ಅಡಿ ಎತ್ತರವಷ್ಟೇ ಇರುವುದು ಆರಂಭಿಕ ದಿನಗಳಲ್ಲಿ ಸಮಸ್ಯೆಯಾಗಿತ್ತು. ಪೃಥ್ವಿ ಕಾಲು ಹಾಗೂ ತಲೆಗೆ ಸೂಕ್ತವಾಗಿ ಹೊಂದಿಕೊಳ್ಳುವ ಶೂ ಹಾಗೂ ಹೆಲ್ಮೆಟ್​ಗಳನ್ನು ಆಯ್ಕೆ ಮಾಡಲು ತಂದೆ ಪಂಕಜ್ ಲೆಕ್ಕವಿಲ್ಲದಷ್ಟು ಕ್ರೀಡಾಉತ್ಪನ್ನಗಳ ಮಳಿಗೆಗಳಿಗೆ ಅಲೆದಾಡಿದ್ದರು. ಹೊಸ ಪ್ಯಾಡ್​ಗಳನ್ನು ಆತನ ಕಾಲಿಗೆ ಸರಿಯಾಗಿ ಹೊಂದಿಕೊಳ್ಳುವಂತೆ ಅವರ ಅಪ್ಪ ಕತ್ತರಿಸಿಕೊಡುತ್ತಿದ್ದರು. ಆದರೆ, ಹೆಚ್ಚಿನ ಸಮಯದಲ್ಲಿ ತನ್ನ ಅಳತೆಗಿಂತ ದೊಡ್ಡ ಅಳತೆಯ ಕ್ರಿಕೆಟ್ ಪರಿಕರಗಳನ್ನು ಧರಿಸಿ ಪೃಥ್ವಿ ಮೈದಾನಕ್ಕಿಳಿಯುತ್ತಿದ್ದ ಎನ್ನುವುದನ್ನು ಪಂಕಜ್ ನೆನೆಸಿಕೊಳ್ಳುತ್ತಾರೆ. ಮಗ ಇನ್ನೊಂಚೂರು ಎತ್ತರವಿರಬೇಕಿತ್ತು ಎಂದು ಬಯಸಿದ್ದ ಪಂಕಜ್, ಮಗನನ್ನು ಸ್ವಿಮ್ಮಿಂಗ್ ಹಾಗೂ ಸೈಕ್ಲಿಂಗ್​ಗೂ ಕಳುಹಿಸಿದ್ದರು.

2002ರಲ್ಲಿ ಎಂಇಜಿ ಕ್ರಿಕೆಟ್ ಕ್ಲಬ್​ಗೆ ಸೇರ್ಪಡೆಗೊಂಡ ಪೃಥ್ವಿ ತನಗಿಂತ ದುಪ್ಪಟ್ಟು ವಯಸ್ಸಿನ ಬೌಲರ್​ಗಳ ಎಸೆತಗಳನ್ನು ನಿರ್ಭೀತಿಯಿಂದ ಎದುರಿಸುತ್ತಿದ್ದ. 10ನೇ ವರ್ಷದಲ್ಲಿಯೇ ಮುಂಬೈ 14 ವಯೋಮಿತಿ ತಂಡಕ್ಕೆ ಆಯ್ಕೆ ಆದ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ.

ಪೃಥ್ವಿ ಕ್ರಿಕೆಟ್ ಜೀವನದಲ್ಲಿ ಪ್ರೋತ್ಸಾಹ ನೀಡಿದ ದೊಡ್ಡ ಬಳಗವೇ ಇದೆ. ಅದರಲ್ಲಿ ಮುಖ್ಯವಾದ ವ್ಯಕ್ತಿ ರಾಜಕಾರಣಿ ಸಂಜಯ್ ಪೋತ್ನಿಸ್. ನಿತ್ಯ ಪೃಥ್ವಿ 60 ಕಿ.ಮೀ. ಪ್ರಯಾಣ ಮಾಡುವುದನ್ನು ಕೇಳಿದ ಬಳಿಕ ವಕೋಲಾದಲ್ಲಿರುವ ತಮ್ಮ ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ್ದರು.

‘ತುಂಬ ಅಂಶದಲ್ಲಿ ನಾನು ಪ್ರಗತಿ ಕಾಣಬೇಕಿದೆ. ಆದರೆ, ಹಂತಹಂತವಾಗಿ ಇದನ್ನು ಸಾಧಿಸುತ್ತೇನೆ. ಪರಿಪೂರ್ಣ ಕ್ರಿಕೆಟರ್ ಆಗಿ ನಾನಿನ್ನೂ ಅಂತಾರಾಷ್ಟ್ರೀಯ ಕಣಕ್ಕೆ ಕಾಲಿಟ್ಟಿಲ್ಲ. ಹಲವು ಶಾಟ್​ಗಳನ್ನು ಹಾಗೂ ಕೌಶಲಗಳನ್ನು ಕಲಿಯಬೇಕಿದೆ. ಹಾಗೇನಾದರೂ ನಾನು ಎಲ್ಲ ವಿಚಾರದಲ್ಲೂ ಪರಿಪೂರ್ಣನಾಗಿದ್ದರೆ ಔಟ್ ಆಗುತ್ತಲೇ ಇರಲಿಲ್ಲ’ ಎಂದು ಪೃಥ್ವಿ ಹೇಳುತ್ತಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ 10 ವರ್ಷದ ಹಿಂದೆಯೇ ಪೃಥ್ವಿ ಷಾ ಮುಂದೊಂದು ದಿನ ಭಾರತೀಯ ಕ್ರಿಕೆಟ್​ನ ಭಾಗವಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಸಚಿನ್ ತೆಂಡುಲ್ಕರ್​ರ ಭವಿಷ್ಯವನ್ನು ನಿಜ ಮಾಡಿದ ಯುವ ಆಟಗಾರ ಮತ್ತಷ್ಟು ಯಶಸ್ಸು ಪಡೆಯುವ ನಿಟ್ಟಿನಲ್ಲಿ ಉತ್ತಮ ಆರಂಭವನ್ನೇ ಕಂಡಿದ್ದಾರೆ.

(ಲೇಖಕರು ವಿಜಯವಾಣಿ ಹಿರಿಯ ಉಪಸಂಪಾದಕರು)