Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಕಠಿಣ ಸನ್ನಿವೇಶದ ಸವಾಲು

Sunday, 26.08.2018, 3:02 AM       No Comments

|ರವೀಂದ್ರ ಎಸ್. ದೇಶಮುಖ್

ಕಳೆದೊಂದು ದಶಕದಿಂದ ಆಸ್ಟ್ರೇಲಿಯಾಕ್ಕೆ ಅಂಟಿರುವ ರಾಜಕೀಯ ಗ್ರಹಣ ಬಿಡುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ರಾಜಕೀಯದಲ್ಲಿ ಢಾಳಾಗಿಯೇ ಕಂಡುಬರುವ ಗೊಂದಲ, ಅಶಿಸ್ತು, ಸ್ವಜನಪಕ್ಷಪಾತ ಹೀಗೆ ಹಲವು ಅಪಸವ್ಯಗಳು ಆಸ್ಟ್ರೇಲಿಯಾವನ್ನು ಬಿಟ್ಟೂಬಿಡದೆ ಕಾಡುತ್ತಿವೆ. ಈ ಗೊಂದಲಗಳ ಮಹಾಪೂರದಲ್ಲಿ ಜನರ ದನಿ ಅಡಗಿ ಹೋಗುವುದು ಸ್ವಾಭಾವಿಕ. ಇಂಥ ರಾಜಕೀಯ ಅಸ್ಥಿರತೆಯಲ್ಲಿ ಆಸ್ಟ್ರೇಲಿಯಾ ಕಳೆದ 11 ವರ್ಷಗಳಲ್ಲಿ ಏಳು ಪ್ರಧಾನಿಗಳನ್ನು ಕಂಡಿದೆ! ಶುಕ್ರವಾರ ಹೊಸದಾಗಿ ಆಯ್ಕೆ ಆಗಿರುವ ಪ್ರಧಾನಿ ಸ್ಕಾಟ್ ಮಾರಿಸನ್ ಈ ಅಸ್ಥಿರಪರ್ವವನ್ನು ಕೊನೆಗೊಳಿಸಿಯಾರೇ ಎಂಬ ಕುತೂಹಲಭರಿತ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವೇನಲ್ಲ. ಕಾರಣ, 2018ರ ಕೊನೆಗೆ ಮತ್ತು 2019ರ ಮೇ ತಿಂಗಳಲ್ಲಿ ಆಸ್ಟ್ರೇಲಿಯಾ ಸಂಸತ್ತು (ಫೆಡರಲ್) ಚುನಾವಣೆ ಎದುರಿಸಲಿದ್ದು, ಲಿಬರಲ್ ಪಕ್ಷದ ಅಧ್ಯಕ್ಷರಾಗಿರುವ ಮಾರಿಸನ್ ಪಕ್ಷವನ್ನು ಗೆಲುವಿನ ದಡಕ್ಕೆ ತಲುಪಿಸಲು ಹರಸಾಹಸ ಪಡಬೇಕಿದೆ. ಒಳಜಗಳ, ಭಿನ್ನಾಭಿಪ್ರಾಯಗಳ ಪರಿಣಾಮ ಪಕ್ಷ ಈಗಾಗಲೇ ವರ್ಚಸ್ಸು ಕಳೆದುಕೊಂಡಿದ್ದು, ಮುಂದಿನ ಹಾದಿ ಸವಾಲುಗಳಿಂದ ಕೂಡಿದೆ.

ಉದಾರವಾದಿ ನೀತಿಗಳಿಂದಾಗಿ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದ ನಿಕಟಪೂರ್ವ ಪ್ರಧಾನಿ ಮಾಲ್ಕಂ ಟರ್ನ್​ಬುಲ್ ವಿರುದ್ಧ ಲಿಬರಲ್ ಪಕ್ಷದ ಸಂಸದರೇ ಪ್ರತಿಭಟನೆ ನಡೆಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾರಿಸನ್ ಅವರು ಮಾಲ್ಕಂ ರಾಜೀನಾಮೆಗೆ ಸತತವಾಗಿ ಆಗ್ರಹಿಸಿಕೊಂಡು ಬಂದಿದ್ದರು. ಮೊದಲೆಲ್ಲ ಪ್ರತಿಭಟನೆಗಳಿಗೆ ಸೊಪು್ಪ ಹಾಕದ ಮಾಲ್ಕಂ ಪ್ರಧಾನಿ ಹುದ್ದೆ ಬಿಡಲೊಲ್ಲೆ ಎಂದೇ ಹಠ ಹಿಡಿದರು. ಒಂದು ವಾರದ ರಾಜಕೀಯ ಪ್ರಹಸನಗಳ ಬಳಿಕ ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ಮಾರಿಸನ್ 45 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಇವರ ಪ್ರತಿಸ್ಪರ್ಧಿ ಗೃಹ ಸಚಿವ ಪೀಟರ್ ಡಟನ್ ಪರಾಭವಗೊಂಡರು. ಟರ್ನ್​ಬುಲ್ ಸ್ಪರ್ಧೆಯಲ್ಲಿ ಇರಲಿಲ್ಲ.

ಆಡಳಿತಾತ್ಮಕ ಅನುಭವ, ಸಚಿವ ಸಂಪುಟದಲ್ಲಿ ಉತ್ತಮ ಕಾರ್ಯನಿರ್ವಹಣೆ, ಜತೆಗೆ ಪಕ್ಷದ ಎಲ್ಲ ಸ್ತರದ ನಾಯಕರೊಂದಿಗೆ ಸಂವಹನ ಹೊಂದಿರುವ ಮಾರಿಸನ್ ವರ್ಚಸ್ವಿ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಟರ್ನ್​ಬುಲ್ ವಿರುದ್ಧ ಬಂಡಾಯವೆದ್ದಾಗಲೂ ಷೇರು ಮಾರುಕಟ್ಟೆ ಕುಸಿತ ಸೇರಿದಂತೆ ರಾಜಕೀಯದ ವಿದ್ಯಮಾನಗಳನ್ನು ದೇಶದ ಮುಂದೆ ಪರಿಣಾಮ ಕಾರಿಯಾಗಿ ಮಂಡಿಸಿದರು, ‘ನಾಯಕತ್ವ ಬದಲಾ ಗದಿದ್ದರೆ ಪಕ್ಷಕ್ಕೂ ಕಷ್ಟ’ ಎಂಬುದನ್ನು ಲಿಬರಲ್ ಸಂಸದರಿಗೆ ಮನವರಿಕೆ ಮಾಡಿ ಕೊಟ್ಟರು. ಟರ್ನ್​ಬುಲ್ ಸರ್ಕಾರ ದಲ್ಲಿ ಹಣಕಾಸು ಸಚಿವರಾಗಿದ್ದ ಇವರು 2007ರಿಂದ ಸಂಸದರಾಗಿದ್ದಾರೆ.

ಸಿಡ್ನಿಯಲ್ಲಿ 1968 ಮೇ 3ರಂದು ಜನಿಸಿದ ಸ್ಕಾಟ್ ಮಾರಿಸನ್ ಸಿಡ್ನಿ ಬಾಯ್್ಸ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ, ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಇಕನಾಮಿಕ್ ಜಿಯಾಗ್ರಾಫಿಕ್​ನಲ್ಲಿ ಪದವಿ ವ್ಯಾಸಂಗ ಮಾಡಿದರು. ಸ್ಕಾಟ್​ನ ತಂದೆ ಪೊಲೀಸ್ ಅಧಿಕಾರಿಯಾಗಿದ್ದರಲ್ಲದೆ, ಕೆಲ ಕಾಲ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಬಾಲ್ಯದಲ್ಲಿ ಮಾರಿಸನ್​ಗೆ ನಟನೆಯ ಹವ್ಯಾಸವಿತ್ತು. ಬಾಲ ಕಲಾವಿದನಾಗಿ ಹಲವು ಧಾರಾವಾಹಿಗಳಲ್ಲಿ ನಟಿಸಿದ ಇವರಿಗೆ, 16ನೇ ವರ್ಷದಲ್ಲೇ ಪ್ರೀತಿ ಚಿಗುರಿತ್ತು. ಸಿನಿಮಾ ನೋಡುವುದು, ಪುಸ್ತಕ ಓದುವುದು ಇವರ ಹವ್ಯಾಸ.

ಪದವಿ ವ್ಯಾಸಂಗದ ಬಳಿಕ ‘ಪ್ರಾಪರ್ಟಿ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ’ ಸಂಸ್ಥೆಯಲ್ಲಿ ಪಾಲಿಸಿ ಮತ್ತು ರಿಸರ್ಚ್ ಮ್ಯಾನೇಜರ್ ಆಗಿ (1989-1995) ಕಾರ್ಯನಿರ್ವಹಿಸಿದರು. ಇದು ಅವರು ನೀತಿನಿರೂಪಣೆ ಕ್ಷೇತ್ರದಲ್ಲಿ ಅನುಭವ ಪಡೆದುಕೊಳ್ಳಲು ನೆರವಾಯಿತು. 1995ರ ಬಳಿಕ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಒಲವು ಮೂಡಿಸಿಕೊಂಡರು. ಆಸ್ಟ್ರೇಲಿಯಾ ಪ್ರವಾಸೋದ್ಯಮದ ಟಾಸ್ಕ್ ಫೋರ್ಸ್​ನಲ್ಲಿ ಡೆಪ್ಯೂಟಿ ಚೀಫ್ ಎಕ್ಸಿಕ್ಯೂಟಿವ್ ಆಗಿ, ಟೂರಿಸಂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾದ ಜನರಲ್ ಮ್ಯಾನೇಜರ್ ಆಗಿದ್ದಾಗ ಹೊಸ ಯೋಜನೆ, ಪ್ರಯೋಗಗಳಿಂದ ಗಮನ ಸೆಳೆದರು. 1998ರಲ್ಲಿ ನ್ಯೂಜಿಲೆಂಡ್​ಗೆ ತೆರಳಿ ಆಗಷ್ಟೇ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಪ್ರವಾಸೋದ್ಯಮ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದರು. ಇವರು ರೂಪಿಸಿದ “100% Pure New Zealand’ ಯೋಜನೆ ಜನಮನ್ನಣೆ ಪಡೆಯಿತು. 2000ನೇ ಇಸ್ವಿಯಲ್ಲಿ ಆಸ್ಟ್ರೇಲಿಯಾಕ್ಕೆ ಮರಳಿ ರಾಜಕೀಯ ಪ್ರವೇಶಿಸಿದರು. ಮತ್ತು ಲಿಬರಲ್ ಪಕ್ಷದ ಸ್ಟೇಟ್ ಡೈರಕ್ಟರ್ (ನ್ಯೂ ಸೌತ್ ವೆಲ್) ಆಗಿ ಆಯ್ಕೆಯಾದರು. 2001ರಿಂದ ಪಕ್ಷದ ಪರ ಪ್ರಚಾರಗಳಲ್ಲೂ ಕಾಣಿಸಿಕೊಂಡಾಗ, ಇವರ ವರ್ಚಸ್ಸು ಹೆಚ್ಚತೊಡಗಿತು. 2004ರಲ್ಲಿ ಹಾರ್ವರ್ಡ್ ಸರ್ಕಾರ ಸ್ಥಾಪಿಸಿದ ‘ಟೂರಿಸಂ ಆಸ್ಟ್ರೇಲಿಯಾ’ಕ್ಕೆ ಸ್ಕಾಟ್​ರನ್ನು ನಿರ್ದೇಶಕರನ್ನಾಗಿ ಮಾಡಲಾಯಿತು. ಆದರೆ, ‘ರಾಜಕೀಯ ವ್ಯಕ್ತಿ’ಯನ್ನು ಈ ಹುದ್ದೆಗೆ ನೇಮಿಸಿದ್ದಕ್ಕಾಗಿ ವಿವಾದವೂ ಸೃಷ್ಟಿಯಾಗಿತ್ತು. ಪ್ರವಾಸೋದ್ಯಮ ಸಚಿವರೊಂದಿಗಿನ ಭಿನ್ನಾಭಿಪ್ರಾಯದ ಕಾರಣ 2006ರಲ್ಲಿ ನಿರ್ದೇಶಕ ಸ್ಥಾನದಿಂದ ವಜಾ ಮಾಡಲಾಯಿತು.

2007ರಲ್ಲಿ ಲಿಬರಲ್ ಪಕ್ಷದಿಂದ ಸಂಸತ್ ಪ್ರವೇಶಿಸಿದರು. ಆ ಬಳಿಕ ವಲಸೆ ನೀತಿ ಮತ್ತು ಗಡಿ ರಕ್ಷಣೆ ಸಚಿವ (2013-14), ಸಾಮಾಜಿಕ ಸೇವೆ ಸಚಿವರಾದರಲ್ಲದೆ(2014-15) ಹಣಕಾಸು ಮಂತ್ರಿಯಾಗಿಯೂ (2015 ಸೆ.21 -2018 ಆ.24) ಗಮನ ಸೆಳೆದರು. ಪ್ರಸಕ್ತ ಆಸ್ಟ್ರೇಲಿಯಾದ 30ನೇ ಪ್ರಧಾನಿ ಆಗಿರುವ 50 ವರ್ಷದ ಮಾರಿಸನ್ ಮೇಲೆ ಸ್ವಪಕ್ಷೀಯರು ಮತ್ತು ಜನಸಾಮಾನ್ಯರು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಸವಾಲುಗಳೂ ಬೆಟ್ಟದಷ್ಟಿವೆ. ಒಡೆದು ಹೋಳಾಗಿರುವ ಪಕ್ಷವನ್ನು ಒಂದಾಗಿಸಿ ಬೇರುಮಟ್ಟದಲ್ಲಿ ಗಟ್ಟಿಯಾಗಿಸುವುದು, ಮರುಸಂಘಟಿಸುವುದು, ಆ ನಿಟ್ಟಿನಲ್ಲಿ ವೈಯಕ್ತಿಕ ಹಾಗೂ ರಾಜತಾಂತ್ರಿಕ ಅನುಭವವನ್ನು ಬಳಸಬೇಕಿರುವುದು ಸ್ಕಾಟ್ ಮಾರಿಸನ್ ಎದುರು ಪ್ರಸ್ತುತ ಇರುವ ಅತಿದೊಡ್ಡ ಸವಾಲೆನ್ನಬೇಕು. ಆಡಳಿತಾತ್ಮಕ ವಿಷಯಕ್ಕೆ ಬಂದರೆ, ದೇಶದ ಆರೋಗ್ಯ ವಲಯದಲ್ಲಿ ತಾಂಡವವಾಡುತ್ತಿರುವ ಅವ್ಯವಸ್ಥೆಯನ್ನು ತಹಬಂದಿಗೆ ತರುವುದು ಮತ್ತೊಂದು ಪ್ರಮುಖ ಸವಾಲೇ ಎನ್ನಬೇಕು. ಇನ್ನು, ವಿದ್ಯುತ್ ಪೂರೈಕೆಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳ ವರ್ತನೆಗೆ ಕಠಿಣಕ್ರಮವನ್ನೇ ಕೈಗೊಂಡು ಅವನ್ನು ಬಗ್ಗುಬಡಿಯುವುದು ಕೂಡ ಅನಿವಾರ್ಯವಾಗಿದೆ. ಜತೆಗೆ ದೀರ್ಘಕಾಲಿಕ ಕಾರ್ಯನೀತಿಗಳನ್ನು ಅಭಿವೃದ್ಧಿಪಡಿಸಿ ಅನುಷ್ಠಾನಕ್ಕೆ ತರುವಲ್ಲಿನ ಸರ್ಕಾರದ ಸಾಮರ್ಥ್ಯದ ವಿಷಯದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ದಕ್ಕಿಸಿಕೊಳ್ಳುವುದೂ ಅವರು ನಿರ್ವಹಿಸಬೇಕಾಗಿರುವ ಕಸರತ್ತಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಅದೇನಿದ್ದರೂ, ರಾಜಕೀಯ ಅಸ್ಥಿರತೆಗೆ ಮಾರಿಸನ್ ಅಂತ್ಯಹಾಡಲಿ ಎಂಬ ಕನವರಿಕೆ ಬಹುತೇಕರದ್ದು. ಈ ನಿಟ್ಟಿನಲ್ಲಿ ಅವರು ಯಶಸ್ವಿಯಾಗುವರೆ ಕಾದು ನೋಡಬೇಕು.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕರು)
[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top