ಕೆಂಪನಂಜಮ್ಮಣ್ಣಿ ಅವರ ಸಾಧನೆ ಬಗ್ಗೆ ಸಂಶೋಧನೆ ನಡೆಯಬೇಕು

ಮೈಸೂರು: ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಮಾನಸಿಕ ಸ್ಥಿರತೆ, ದಿಟ್ಟತನ ಇಂದಿಗೂ ಆದರ್ಶಪ್ರಾಯವಾಗಿದ್ದು, ಅವರ ಸಾಧನೆಗಳ ಕುರಿತು ಸಂಶೋಧನೆಗಳು ನಡೆಯಬೇಕು ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಡಾ.ಎಂ.ಎಸ್.ಅನಿತಾ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಕರ್ನಾಟಕ ಸೇನಾಪಡೆ ವತಿಯಿಂದ ಶನಿವಾರ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾರಾಣಿ ಕೆಂಪನಂಜಮ್ಮಣ್ಣಿ ಅಮ್ಮನವರ ದಿನಾಚರಣೆ, ಮಹಿಳಾ ಸಾಧಕರಿಗೆ ‘ಕೆಂಪನಂಜಮ್ಮಣ್ಣಿ ಮಹಿಳಾ ರತ್ನ ಪ್ರಶಸ್ತಿ’ ಪ್ರದಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

10ನೇ ಚಾಮರಾಜ ಒಡೆಯರ್ ಅವರನ್ನು ಕೆಂಪನಂಜಮ್ಮಣಿ ಅವರು ಮದುವೆಯಾಗಿದ್ದರು. ಅವರ ನಿಧನದ ನಂತರ ಆಡಳಿತ ಕೈಗೆತ್ತಿಕೊಂಡ ಇವರಿಗೆ ಹಲವಾರು ಸಮಸ್ಯೆಗಳು ಎದುರಾಗಿದ್ದವು. ಬ್ರಿಟಿಷ್ ಆಡಳಿತ ವ್ಯವಸ್ಥೆಯ ಪರೋಕ್ಷ ಹಿಡಿತ, ಸ್ಥಳೀಯವಾಗಿ ಸಂಸ್ಥಾನದಲ್ಲಿ ಮದ್ರಾಸ್ ಮತ್ತು ಮೈಸೂರು ಬ್ರಾಹ್ಮಣರ ನಡುವಿನ ಸಂಘರ್ಷ, ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ತಿಕ್ಕಾಟ, ತೆಳುವಾಗಿ ಕಾಣಿಸಿಕೊಳ್ಳುತ್ತಿದ್ದ ಬ್ರಿಟಿಷ್ ವಿರೋಧಿ ನೀತಿ, ರಾಷ್ಟ್ರೀಯತೆಯ ಉಗಮದ ತಾಕಲಾಟ ಇತ್ತು. ಇಂತಹ ಸಂದರ್ಭಗಳಲ್ಲಿ 8 ವರ್ಷ ಉತ್ತಮ ಆಡಳಿತ ನಡೆಸಿ, ಮಾದರಿಯಾಗಿದ್ದಾರೆ ಎಂದರು.

10ನೇ ಚಾಮರಾಜ ಒಡೆಯರ್ ಅವರು ಕೆಂಪನಂಜಮ್ಮಣ್ಣಿ ಅವರನ್ನು ಮದುವೆಯಾದ ಬಳಿಕ ಆಂಗ್ಲ ಶಿಕ್ಷಣ ಕೊಡಿಸಿದರು. ಎಲ್ಲ ಹಂತದಲ್ಲೂ ಸಮಾನತೆ ಕಲ್ಪಿಸಿಕೊಟ್ಟರು. ಅದೇ ರೀತಿ ಯುವ ಜನಾಂಗಕ್ಕೂ ಸಮತೋಲನದ ಬದುಕು ಕಲ್ಪಿಸಿಕೊಡಬೇಕಾಗಿದೆ. ಸಮಬದ್ಧ್ದತೆಯಿಂದ ಜೀವನ ಕಟ್ಟಿಕೊಂಡರೆ ಯಾವ ಸಮಸ್ಯೆಗಳೂ ಇರಲ್ಲ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಮೈಸೂರು ಸ್ವಚ್ಛ ನಗರಿ ಎಂದು ಕೀರ್ತಿ ಪಡೆಯಲು ಮೈಸೂರು ಸಂಸ್ಥಾನವೇ ಮುಖ್ಯ ಕಾರಣ. ರಾಜ್ಯರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಒಳಚರಂಡಿ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದು ಕೂಡ ಸ್ವಚ್ಛನಗರಿ ಪ್ರಶಸ್ತಿ ಪಡೆಯಲು ನೆರವಾಗಿದೆ. ಕೆಆರ್‌ಎಸ್, ಚೆಲುವಾಂಬ ಆಸ್ಪತ್ರೆ, ಕೆ.ಆರ್.ಆಸ್ಪತ್ರೆಗಳು ಇಂತಹ ಹಲವಾರು ಕೊಡುಗೆ ಮಹಾರಾಜರು ನೀಡಿದ್ದಾರೆ ಎಂದರು.
ಈ ವೇಳೆ, ಸ್ತ್ರೀ ರೋಗ ತಜ್ಞೆ ಡಾ.ಕೆ.ವಿ.ಲಕ್ಷ್ಮೀದೇವಿ, ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆ ಪ್ರಾಧ್ಯಾಪಕಿ ಪ್ರೊ.ಎಸ್.ಎ. ಕಮಲಾ ಜೈನ್, ದೇವಯ್ಯನಹುಂಡಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ವಿ.ಜಯಶ್ರೀ, ಪ್ರಥಮ ಮಹಿಳಾ ಪುರೋಹಿತೆ ಡಾ.ಪಿ. ಭ್ರಮರಾಂಭ ಮಹೇಶ್ವರಿ, ಸಿ2ಸಿ ಸಾನ್ವಿ ಬಿಸಿನೆಸ್ ಸಲ್ಯೂಷನ್‌ನ ಎನ್.ಸಂಗೀತಾ, ಮಿಸ್ ಇಂಡಿಯಾ ಸ್ಪರ್ಧಿ ಸಿ.ವಿ.ಅಪೂರ್ವ ಜೈನ್ ಅವರಿಗೆ ಮಹಾರಾಣಿ ಕೆಂಪನಂಜಮ್ಮಣ್ಣಿ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟರಾಜ ಮಹಿಳಾ ಕಾಲೇಜಿನ 40 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.