
ಬೆಳಗಾವಿ: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಜ್ಞಾನ, ಕೌಶಲ ಮತ್ತು ಉತ್ತಮ ವರ್ತನೆ ಬೆಳೆಸಿಕೊಂಡರೆ ಖಂಡಿತ ಯಶಸ್ವಿಯಾಗುತ್ತಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಶೈಕ್ಷಣಿಕ ವಿಶೇಷ ಅಧಿಕಾರಿ ಪ್ರೊ.ಸದಾಶಿವ ಹಾಲಭಾವಿ ಸಲಹೆ ನೀಡಿದರು.
ಬೆಳಗಾವಿ ಕೆಎಲ್ಇ ವೇಣುಧ್ವನಿ 90.4 ಎಫ್.ಎಂ. ಕೇಂದ್ರ ಮತ್ತು ವಿಟಿಯು ಸಹಯೋಗದಲ್ಲಿ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನ ಕುರಿತು ಶನಿವಾರ ಆಯೋಜಿಸಿದ್ದ ನೇರ ಫೋನ್-ಇನ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಸಂದೇಹ ನಿವಾರಿಸಿದರು.
ವಿಟಿಯು ಮೌಲ್ಯಮಾಪನ ಕುಲಸಚಿವ ಡಾ.ಟಿ.ಎನ್.ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋರ್ಸ್‌ಗಳ ಆಯ್ಕೆ ಮಾಡಿಕೊಳ್ಳಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೋರ್ಸ್‌ಗಳು, ಕೃತಕ ಬುದ್ಧಿಮತ್ತೆ (ಎಐ) ಕುರಿತು ಮತ್ತು 2025ರ ಸಿಇಟಿ ಪ್ರಕ್ರಿಯೆ ಕುರಿತ ಮಾಹಿತಿ ಹಂಚಿಕೊಂಡರು.
ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್, ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು. ವಿಟಿಯು ಮೌಲ್ಯಮಾಪನ ವಿಭಾಗದ ವಿಶೇಷ ಅಧಿಕಾರಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ.ರೋಹನ ಗುರವ, ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದ ನಿಲಯ ನಿರ್ವಾಹಕ ಡಾ.ವೀರೇಶಕುಮಾರ ನಂದಗಾಂವ, ಸಂಯೋಜಕ ಮಂಜುನಾಥ ಬಳ್ಳಾರಿ ಹಾಗೂ ಸಿಬ್ಭಂದಿ ಇದ್ದರು.