More

  ನಿರಾಶ್ರಿತರು ಮತ್ತು ಕಾಂಗ್ರೆಸ್ಸಿನ ಇತಿಹಾಸದ ಸುತ್ತ; ಕೆ.ಎಸ್.ನಾರಾಯಣಾಚಾರ್ಯರ ಅಂಕಣ

  ರಾಜಕೀಯಕ್ಕೆ ಅಧ್ಯಾತ್ಮದ ಬೇರಿದ್ದರೆ ಅದು ಶ್ರೀಕೃಷ್ಣ ರಾಜಕೀಯ, ಶ್ರೀರಾಮ ರಾಜಕೀಯ, ಚಾಣಕ್ಯ ರಾಜಕೀಯ ಆಗುತ್ತದೆ. ಇಲ್ಲವಾದರೆ ಪೂರ್ಣಯ್ಯನೆಂಬ ಬ್ರಾಹ್ಮಣ ದಿವಾನ, ಹೈದರಾಲಿ, ಟಿಪ್ಪುಗೆ ಬೆನ್ನೆಲುಬಾಗಿ ನಿಂತ ಕಥೆ ಆಗುತ್ತದೆ.

  ತುಂಬ ಹೇಳುವುದಿದೆ.. ಮೊದಲು ಅದಕ್ಕೊಂದು ಪೂರ್ವಪೀಠಿಕೆಯಾಗಿ ನಾಲ್ಕು ಮಾತು. ಎಲ್ಲಿಗೆಲ್ಲಿಗೆ ಸಂಬಂಧ ಅಂತ ಹೌಹಾರಬೇಡಿ. ಓದುತ್ತ ನಿಮಗೇ ಕೊಂಡಿಗಳು ಕಾಣುತ್ತವೆ. ಈಚೆಗೆ ಸಿನಿಮಾ, ಕ್ರಿಕೆಟ್ ಮುಂತಾದ ಸಂದರ್ಭದಲ್ಲಿ ಗುಂಪುಗಾರಿಕೆ, ಪಕ್ಷಪಾತ, ಸ್ವಹಿತಾಸಕ್ತರ ಮೇಲಾಟದಿಂದ ಆಗುತ್ತಿರುವ ಅನ್ಯಾಯ, ಆತ್ಮಹತ್ಯೆ, ಪ್ರತಿಭಾದಮನ, ತೇಜೋವಧೆ, ದುಡ್ಡು ಮಾಡುವ ದಂಧೆಗಳ ಪರಿಣಾಮವಾಗಿ ಪ್ರಚಾರ ಮಾಡುತ್ತಿರುವ ಪತ್ರಿಕೆ, ಟಿ.ವಿ.ಗಳವರ ವೈಖರಿಯಲ್ಲಿ ಮೂಲಸಮಸ್ಯೆಯೇ ಕಾಣದಾಗಿದೆ. ಒಬ್ಬ ಸುಶಾಂತ್, ಅವನ ಪರ ಮಾತೆತ್ತಿದ ನಟಿ ಕಂಗನಾ ಇವರ ಮಾತಲ್ಲ. ಪ್ರತಿಭಾದಮನ ಎಲ್ಲೆಲ್ಲೂ 70 ವರ್ಷಗಳಿಂದ ನಡೆಯುತ್ತಲೇ ಇದೆ. ಸಣ್ಣ ಪ್ರಮಾಣದ ಗುಸುಗುಸು ಹಿತಾಸಕ್ತರ ಗುಂಪಿಗೆ ‘ಲಾಬಿ’ ಎನ್ನುತ್ತಾರೆ. ಇದೇ ಜಾಲವಾದರೆ, ಅದಕ್ಕೆ ಮಾಫಿಯಾ ಎನ್ನುತ್ತಾರೆ. ಇಂದು ಬಂಗಾರ ಮಾಫಿಯಾ, ಭೂಮಾಫಿಯಾ, ರಾಜಕೀಯ ಕಬಳಿಕೆ ಮಾಫಿಯಾ, ಹೆಣ್ಣುಮಕ್ಕಳ ಮಾರಾಟ ಮಾಫಿಯಾ, ಸುಂದರಿಯರನ್ನು ಛೂಬಿಟ್ಟು ದುಷ್ಟ ರಾಜಕಾರಣ ಮಾಡುವವರ- ಚೀನಾದವರಂಥ, ಐರೋಪ್ಯದವರಂಥ- ಮಾಫಿಯಾ, ಹಣದಂಧೆ ಹವಾಲಾ, ಇಲ್ಲಿ ಮರಳು ಮಾಫಿಯಾ, ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಮಾರುವವರ ಮಾಫಿಯಾ, ಆಸ್ಪತ್ರೆಗಳಲ್ಲಿ ರೋಗಿಗಳ ಅಂಗಾಂಗ ಕಸಿದು ಮಾರುವವರ ಮಾಫಿಯಾ, ಅಲ್ಲಿ ಜನಿಸಿದ ಶಿಶುಗಳ ಮಾರಾಟ ಮಾಫಿಯಾ, ಚುನಾವಣೆಗಳಲ್ಲಿ ಹಣಕ್ಕೆ ಟಿಕೆಟ್ಟು ಮಾರುವವರ ಮಾಫಿಯಾ, ತನ್ನವರನ್ನೇ ನಿಲ್ಲಿಸಿ, ವಿರೋಧ ಪಕ್ಷಕ್ಕೆ ವೋಟು ಹಾಕಿಸಲು ಹಣ ಪಡೆಯುವ ದುರುಳ ಮಾಫಿಯಾ, ಬ್ಯಾಂಕುಗಳಲ್ಲಿ ಅಪಾರ ವಂಚಕರ, ದರೋಡೆಕೋರರ ಮಾಫಿಯಾ- ಹೀಗೆ ಎಲ್ಲೆಲ್ಲೂ ದುಡ್ಡು ಮಾಡುವ ‘ಹಿರಣ್ಯ’ದ್ವಯರ ಜಾಲಕ್ಕೆ ಆದಿ ಪ್ರೋತ್ಸಾಹ ಕೊಟ್ಟು ತಳವೂರಿದ್ದೇ ಕಾಂಗ್ರೆಸ್ಸು!

  ಯಾರೋ ಒಬ್ಬ ಪಾಕ್​ನಿಂದ ಓಡಿಬಂದ ನಿರಾಶ್ರಿತ. ಆರ್.ಕೆ.ಧವನ್ ಅಂತ ಹೆಸರು! ಅವನು ನೆಹ್ರೂ ದಿನಾ ಮುಂಜಾವಿನ ವಾಯುವಿಹಾರ ಸಂದರ್ಭದಲ್ಲಿ ಹಲವಾರು ದಿನ ಕಾಣಿಸಿಕೊಂಡ! ಈ ‘ಮೊಗಲ ಅಭಿನವ ರಾಜಕುಮಾರ’-ಒಂದು ದಿನ, ‘ಯಾರು ನೀನು? ಏಕೆ ಇಲ್ಲಿ ಸುಳಿಯುವೆ? ಏನು ಬೇಕು?’ ಎಂದು ಕೇಳಿದರು. ಅವನಿಗೆ ಅದು ಅಮೃತಗಳಿಗೆ. ತನ್ನ ಕಥೆ ಕಳೆಕಟ್ಟಿ ಹೇಳಿ ಅತ್ತ. ನೆಹ್ರೂ ಅವನಿಗೆ, ‘ನನ್ನ ಅರಮನೆಯ ತೋಟದಲ್ಲಿ ಹುಲ್ಲು ಕೆತ್ತು, ಪಾತಿ ಮಾಡು, ನೀರು ಕಟ್ಟು’ ಅಂತ ಅಲ್ಲಿಂದಲ್ಲೇ ‘ಮಾಲಿ’ ಕೆಲಸ ಕೊಟ್ಟರು. ಅರ್ಜಿಯಿಲ್ಲ, ವಿಚಾರಣೆಯಿಲ್ಲ. ಪೂವೋತ್ತರ ವಿಮರ್ಶೆ ಇಲ್ಲ, ಅವನ ಇತಿಹಾಸ, ಚಾರಿತ್ರ್ಯಶುದ್ಧಿಯ ಬಗ್ಗೆ ಪರಿಶೀಲನೆ ಇಲ್ಲ. ಒನ್​ವ್ಯಾನ್ ಲಾಬಿ! ಈತ ಗೇಟಿಂದ ಮನೆಯೊಳಗೆ ಹೋಗುವ ಪುಟ್ಟ ರಸ್ತೆಯ ಬಳಿಯೇ ಆದಷ್ಟು ಕಾಲ ಕೆಲಸ ಮಾಡಿ ಇರುತ್ತ ಸಂದರ್ಶಕರಾಗಿ, ಆಗುಂತಕರಾಗಿ, ಬಂದು ಹೋಗುವವರ ಕಣ್ಣಿಗೆ ಮಾರೀಚನಂತೆ ಬೀಳುತ್ತ, ಅವರು ಇವನನ್ನು ನೆಹ್ರೂ ಆಪ್ತನೆಂದು ಭ್ರಮಿಸಿ, ‘ಸಾಹೇಬರು ಒಳಗಿದ್ದಾರೆಯೋ? ಸಂದರ್ಭವೇನು? ಭೇಟಿಗೆ ಅವಕಾಶ ಇದೆಯೋ? ಮಾಡಿಸುತ್ತೀರಾ?’ ಎಂದು ಈ ನಿರಾಶ್ರಿತನನ್ನು ಆಶ್ರಯಿಸಿ, ಕೈ, ಜೇಬು, ಬೆಚ್ಚಗೆ ಮಾಡಿ, ಸಂದರ್ಶನ, ವಶೀಲಿ, ಫಲಪ್ರದತ್ವ ಗಿಟ್ಟಿಸುತ್ತ, ನೆಹ್ರೂ ಮತ್ತು ರಾಜಕೀಯ ಪುಢಾರಿಗಳ ನಡುವೆ ಕೊಂಡಿ, ಏಜೆಂಟು, ಸಂಪರ್ಕಕ್ಕೆ ಅನಧಿಕೃತ ಅಧಿಕಾರಿಯಾಗುತ್ತ, ಕ್ರಮೇಣ ತೋಟದಿಂದ, ಒಳಮನೆಗೆ ‘ಫೋನು ನೋಡಿಕೊಳ್ಳುವ’- ‘ಸಾಹೇಬರು ಇದ್ದಾರೆ ಬನ್ನಿ’, ‘ಸಾಹೇಬರು ಇಲ್ಲ ಆಮೇಲೆ ಬನ್ನಿ’, ‘ನಾನು ಏರ್ಪಡಿಸುತ್ತೇನೆ, ಕಾಳಜಿ ಬಿಡಿ’, ‘ನಾನು ಹೇಳಿದಂತೆ ಮಾಡಿ, ಸಾಹೇಬರಿಗೆ ಇದು ಇಷ್ಟ, ಅದಕ್ಕೆ ಏರ್ಪಡಿಸಿ ಬನ್ನಿ’ ಎನ್ನುತ್ತ ನೆಹ್ರೂ ಹೃದಯ ಗೆದ್ದು ಸ್ಥಾನ ಗಟ್ಟಿ ಮಾಡಿಕೊಂಡ. ನೆಹ್ರೂ ಹೃದಯ ಗೆಲ್ಲದವರಾರು? ಗಾಂಧಿ? ಮೌಂಟ್ ಬ್ಯಾಟನ್? ಎಡ್ವಿನಾ? ಪದ್ಮಜಾ ನಾಯ್ಡು? ಕೃಷ್ಣ ಮೆನನ್? ಹಕ್ಸಾರ್? ರಷ್ಯಾ ಕಾಮ್ರೇಡರು? ಹೆಸರಿಸಬಾರದ ಅನೇಕಾನೇಕರು?

  ಬಿಡಿ- ಆಮೇಲೆ ಈತ ಮಂತ್ರಿಯೂ ಆದ, ಇಂದಿರಾ ಕಾಲಘಟ್ಟದಲ್ಲೂ ಮುಂದುವರಿದ. ಇಂದಿರಾ ಸುತ್ತ ಇಂಥವರೇ ಇರಲೂ ಮಾಫಿಯಾ ಇತ್ತು. ರಾಜೀವ್ ಗಾಂಧಿಗೆ ‘ಡೂನ್ ಸ್ಕೂಲಿನ ಗೂನ್​ಗಳು’- ಮಣಿಶಂಕರ ಅಯ್ಯರಂಥವರು ಇದ್ದೇ, ಅವರಲ್ಲೇ ಅನೇಕರು ಸೋನಿಯಾ ಮಾಫಿಯಾದಲ್ಲೂ ಕಾರ್ಯನಿರತರಾಗಿದ್ದಾರೆ! ಸಂಜಯ ಗಾಂಧಿಗೆ, ವಿ.ಸಿ. ಶುಕ್ಲಾ, ಬನ್ಸೀಲಾಲ್, ಕರ್ನಾಟಕದ ಆಗಿನ ಮುಖ್ಯಮಂತ್ರಿಯೊಬ್ಬರು, ಅಂಬಿಕಾ ಸೋನಿ, ಯಾರೋ ‘ಲುಕ್ಸಾನಾ’, ಇನ್ನೂ ಯಾರು ಯಾರೋ ಇದ್ದೇ, ಸಂಜಯರು ಚುನಾವಣೆಯಲ್ಲಿ ನಿಂತು ಗೆಲ್ಲ್ಲೆಯೂ, ಅಧಿಕಾರ ಚಲಾಯಿಸಿದ್ದು, ಜಮ್ಮಾ ಮಸೀದಿಯ ಸುತ್ತಲ ಕಟ್ಟಡಗಳ ಕೆಡಹುವಿಕೆ, ಬಲವಂತದ ಕುಟುಂಬ ಯೋಜನೆ, ಎಮರ್ಜೆನ್ಸಿ ಹೇರಿಕೆ, ಇಂಥವೆಲ್ಲ ನಡೆದವು! ಮಾಫಿಯಾ ಈಗ ಕಾಂಗ್ರೆಸ್ಸಲ್ಲಿ ಇಲ್ಲವೆನ್ನುತ್ತೀರಾ, ಧೃತರಾಷ್ಟ್ರರೇ? ಕ್ರಿಕೆಟ್ಟು ದಂಧೆಯಾಗಿ ಫಿಕ್ಸ್ ್ಡ ಮ್ಯಾಚಸ್ ಆದವು ಹೇಗೆ? ಅಲ್ಲಿ ಐಪಿಎಲ್ ಗುತ್ತಿಗೆಯ ಶ್ರೀನಿವಾಸರ ಕಥೆ ಸಾಮಾನ್ಯವೇ? ಶರದ್ ಪವಾರರಿಗೂ ಕ್ರಿಕೆಟ್ಟಿಗೂ ಏನು ಸಂಬಂಧ? ಅಮರ್ ಸಿಂಗ್ ಎಂಬವರಿಗೋ? ಮಾಫಿಯಾ ಇಲ್ಲದೆ, ಸಿನಿಮಾ ಪ್ರಪಂಚದಲ್ಲಿ ಭಾರತೀಯಳೊಬ್ಬ ಮೋಹಿನಿ, ಶ್ರೀದೇವಿ, ದುಬೈನಲ್ಲಿ ಹೇಗೆ ಸತ್ತಳು? ಮಾಫಿಯಾ ಇಲ್ಲದೆ ನೀರವ್ ಮೋದಿ, ಮಲ್ಯ ಇಂಥವರು ಹೇಗೆ ಪರಾರಿಯಾದರು? ಮಾಫಿಯಾ ಇಲ್ಲದೆ ಮನಮೋಹನರು ಪ್ರಧಾನಿಯಾದರೇ? ಮಾಫಿಯಾ ಇಲ್ಲದೆ ಹಿಂದೆ ಅನೇಕ ಅನರ್ಹರಿಗೆ ಪ್ರಶಸ್ತಿಗಳು- ಪದ್ಮ, ಭಾರತರತ್ನ, ಪುರಸ್ಕಾರಗಳು ಹೇಗೆ ದೊರೆತವು? ಮದರ್ ಥೆರೇಸಾ ಹೇಳುವುದಿಲ್ಲ ಏಕೆ? ಅವರು ಇಲ್ಲ. ಪೋಪರು ಬಾಯಿ ಬಿಡುವುದಿಲ್ಲ!

  ಮೈಸೂರು ಅರಸರೊಬ್ಬರ ಕಾಲ ದಲ್ಲೂ ದಿವಾನ್ ವಿಶ್ವೇಶ್ವರಯ್ಯನವರು ಪ್ರತಿಭಾದಮನದ ಯತ್ನವನ್ನು ಪ್ರತಿಭಟಿಸಿ, ರಾಜೀನಾಮೆಯಿತ್ತ ಮೇಲೆ, ಅಲ್ಲಿ ಜಾಗ ತುಂಬಿದ ದಿವಾನ್ ಇಸ್ಮಾಯಿಲ್, ಮಿರ್ಜಾ ಇಸ್ಮಾಯಿಲರ ಸುತ್ತ, ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಸುತ್ತ ಒಂದು ಮಾಫಿಯಾ ಬೆಳೆದುದನ್ನು ಈ ಶಬ್ದಪ್ರಯೋಗಿಸದೆಯೇ ಡಿವಿಜಿಯವರು ಸೂಕ್ಷ್ಮವಾಗಿ ಬರೆದು ವಿವೇಚಿಸಿದ್ದಾರೆ.

  ವಿಧಾನಸೌಧದಲ್ಲಿ ಕಂಟ್ರಾಕ್ಟರುಗಳು ‘ಬಿಲ್’ ಪಾಸ್ ಮಾಡಿಸಲು ಅಲ್ಲಿ ದೊಡ್ಡ ಮಾಫಿಯಾ ಇದೆ ಎನ್ನುತ್ತಾರೆ. ಒಬ್ಬ ಮೋದಿ ಬಂದು ಮಾಡುವುದೇನು? ಸೇನೆಯಲ್ಲಿ ಪ್ರತಿಭೆಯೇ ಬೇಕು. ಶರೀರದಾರ್ಢ್ಯ, ರಾಷ್ಟ್ರಪ್ರೇಮ, ಶ್ರಮ ಸಹಿಷ್ಣತೆ, ಪ್ರಾಣತ್ಯಾಗಕ್ಕೆ ಸಿದ್ಧ, ಸೇವಾ ಸಮರ್ಪಣೆ ಇದ್ದರೆ, ಜನರಲ್ ಕಾರಿಯಪ್ಪ, ಜ. ತಿಮ್ಮಯ್ಯ, ಜ. ಮಾಣಿಕ್ ಶಾ, ಜ. ಚೌಧರಿ, ಏರ್ ಮಾರ್ಷಲ್ ಅರ್ಜುನ ಸಿಂಗ್- ಬಾಂಗ್ಲಾ ವಿಮೋ ಚನೆಯ ರೂವಾರಿ- ಇಂಥವರ ಸಾಲಿಗೆ, ಈಗಿನ ಜ. ಬಿಪಿನ್ ರಾವತ್​ರ ಸಾಲಿಗೆ ಸೇರುತ್ತಾರೆ. ಹಿಂದಿನ ಪ್ರಧಾನಿಗಳು ಎಲ್ಲಿ ಸೇರುತ್ತಾರೆ? ಹಿಂದಿನ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡೀಸರ ಸಾಲಿಗೆ ಎಷ್ಟು ಜನ ಸೇರುತ್ತಾರೆ? ರಾಷ್ಟ್ರಪತಿ ಅಬ್ದುಲ್ ಕಲಾಂ ಬದಲಿಗೆ ಅಲ್ಲಿ ಮನಮೋಹನರು ಇದ್ದರೆ, ಸೋನಿಯಾ ಗುಲಾಮಿ ತಪು್ಪತ್ತಿತ್ತೆ?

  ಒಬ್ಬ ಮಾಜಿ ಕೇಂದ್ರ ರಕ್ಷಣಾ ಮಂತ್ರಿ, ಈಗಿನ ಮಹಾರಾಷ್ಟ್ರ ಘಟಬಂಧನ, ‘ಅಘಾಡಿ’ಯ ನಾಯಕ ಹೇಳುತ್ತಾರೆ- ‘ರಾಮ ಜನ್ಮಭೂಮಿ ಕಟ್ಟಡ ಏಳುವುದರಿಂದ ಕರೊನಾ ರೋಗ ಮಾಯವಾಗುತ್ತದೆಯೆ?’ ಅಂತ. ‘ನೀವು ಕೋಟಿ ಕೋಟಿ ಹಣ ಗುಳುಂ ಮಾಡಿ, ಕಿತಾಪತಿ ರಾಜಕಾರಣ ಮಾಡಿದ್ದರಿಂದ ಕರೊನಾ ಮಾಯವಾಯಿತೆ?’ ಅಂತ ಅವರಿಗೇ ಕೇಳಬಹುದಲ್ಲ? ರೋಗ ನಿಲ್ಲಲು ದೈವಕೃಪೆ ಬೇಕೆಂದು ಒಬ್ಬರು ಇಲ್ಲಿ ಹೇಳಿದ್ದಕ್ಕೆ ಸೆಕ್ಯುಲರಿಸ್ಟರ ಅಬ್ಬರಾಕ್ಷೇಪವೋ ಆಕ್ಷೇಪ! ನನ್ನ ಮೊಮ್ಮಗ ಒಬ್ಬ ಅಮೆರಿಕದ ದೊಡ್ಡ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಅವನು ಇಲ್ಲಿಂದ ಹೊರಟಾಗ ಅವನ ಬಗ್ಗೆ ನನಗಿದ್ದ ಭಾವನೆ, ಈಗ ದಿಢೀರನೆ ಬದಲಾದುದನ್ನು ಇಲ್ಲಿ ಹೇಳಬೇಕಾಗಿದೆ. ಮೊನ್ನೆ ಕೇಳಿದೆ: ‘ಈ ಚೀನಾ ದರ್ಬಾರಿಗೆ ಕೊನೆಯಿದೆಯೇ?’ ಅಂತ. ಅವನು ಹೇಳಿದ್ದು, ‘ಅದು ಕಮ್ಯುನಿಸ್ಟ್ ಹೃದಯದ, ಕ್ಯಾಪಿಟಲಿಸ್ಟ್ ವಾಣಿಜ್ಯಾಸಕ್ತಿಯ ವಿಚಿತ್ರ ಸಂಯೋಗದ ಭಯಂಕರ ರಾಜಕೀಯ ಶಕ್ತಿ. ಆದರೆ ನಿಲ್ಲುವುದಿಲ್ಲ. ಏಕೆಂದರೆ ಅಲ್ಲಿ ಸ್ಪಿರಿಚ್ಯುಯಾಲಿಟಿ ಇಲ್ಲ’ ಅಂತ. ಅಬ್ಬಾ! ರಾಜಕೀಯಕ್ಕೆ ಅಧ್ಯಾತ್ಮದ ಬೇರಿದ್ದರೆ ಅದು ಶ್ರೀಕೃಷ್ಣ ರಾಜಕೀಯ, ಶ್ರೀರಾಮ ರಾಜಕೀಯ, ಚಾಣಕ್ಯ ರಾಜಕೀಯ ಆಗುತ್ತದೆ. ಇಲ್ಲವಾದರೆ ಪೂರ್ಣಯ್ಯನೆಂಬ ಬ್ರಾಹ್ಮಣ ದಿವಾನ, ಹೈದರಾಲಿ, ಟಿಪು್ಪಗೆ ಬೆನ್ನೆಲುಬಾಗಿ ನಿಂತ ಕಥೆ ಆಗುತ್ತದೆ.

  ನರೇಂದ್ರ ಮೋದಿ ಯಾವ ಲಾಬಿಯಿಂದಲೂ ಪದವಿಗೇರಲಿಲ್ಲ. In Fact, ಲಾಬಿ, ಮಾಫಿಯಾಗಳ ವಿರುದ್ಧ ಹೋರಾಡುತ್ತಲೇ ಎದ್ದಿದ್ದು ಅವರಲ್ಲಿದ್ದ ಅಧ್ಯಾತ್ಮ ಶಕ್ತಿಯಿಂದ ಮಾತ್ರ. ಈಗ ಪ್ರತಿಯೊಂದಕ್ಕೂ ‘ಮೀಸಲಾತಿ’ ಎಂಬುವವರು ಆತ್ಮಶೋಧ ಮಾಡಿಕೊಳ್ಳಬೇಕಾದ ಕಾಲ. ಪೊಲೀಸ್, ಐಪಿಎಸ್, ಐಎಎಸ್, ಏರ್​ಫೋರ್ಸ್, ಇಸ್ರೋ, ಮಿಲಿಟರಿಗಳಲ್ಲಿ ಪ್ರತಿಭೆ ಇಲ್ಲವಾದರೆ, ಪ್ರಥಮ ಚೀನೀ ಯುದ್ಧದಲ್ಲಿ ನೆಹ್ರೂ, ತನ್ನ ಸಂಬಂಧಿ ಜನರಲ್ ಕೌಲ್​ರನ್ನು ಮುಂದೆ ಮಾಡಿ ಸೋತಂತೆ ಆಗುತ್ತದೆ. ರೈಲ್ವೆಯಲ್ಲಿ ಪಾಯಿಂಟ್​ವ್ಯಾನ್, ಗಾರ್ಡ, ಸ್ಟೇಷನ್ ಮಾಸ್ಟರು, ಗ್ಯಾಂಗ್​ವಾನ್ ಇಂಥವರ ನೇಮಕಾತಿಯಲ್ಲೂ ಸಾಮರ್ಥ್ಯ, ಚುರುಕು, ಪ್ರತಿಭೆ ಇಲ್ಲವಾದರೆ ಲಕ್ಷಾಂತರ ಜನ ಅಪಘಾತದಲ್ಲಿ ಸಾಯುತ್ತಾರೆ. ಸಿನಿಮಾದಲ್ಲಿ ಸೊಟ್ಟ ಮೂತಿಯವರೂ, ಮಾತು ಸ್ಪುಟ, ಶುದ್ಧಿ ಇಲ್ಲದವರೂ, ಅಭಿನಯ ಚಾತುರ್ಯ ಇಲ್ಲದವರೂ, ಅದರಲ್ಲಿ ನಟಿಯರೂ, ಹೇಗೆ ಶೋಷಿತರಾಗುತ್ತಾರೆಂಬಲ್ಲಿ ಕಥೆಗಳಿವೆ.

  ಎಲ್ಲ ಹಣ ಮಾಡುವ ದಂಧೆ. ಅದರಲ್ಲಿ ಜಾತಿ ಪ್ರಾಶಸ್ಱ-‘ಮನರಂಜನೆಯಲ್ಲೂ ಜಾತಿ’-ರಾಮ, ರಾಮ! ಎಂಥ ಕಾಲ ಬಂತಪ್ಪ? ಆದುದರಿಂದ ಅವಕಾಶ ವಂಚಿತರಿಗೆ ಮಾಫಿಯಾಗಳೂ ಲಾಬಿಗಳೂ ಅವಕಾಶ ಕೊಡಲು ಸಾಧ್ಯವೇ? ಕೊಟ್ಟರೂ ಊರ್ಜಿತವೇ? ಸಾಹಿತ್ಯಕ್ಷೇತ್ರದಲ್ಲೂ ಅನಂತಮೂರ್ತಿಯಂಥವರು ದೊಡ್ಡ ಲಾಬಿಯನ್ನೇ ಕಟ್ಟಿ ಹೋದರು! ಆ ಮೇಲಿನವು ಇನ್ನೂ ಇವೆ. ಸ್ವತಂತ್ರ ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರ್ಯ, ದೇಶಭಕ್ತಿ ಇವು ಅಪರಾಧವೇ? ಎಡಪಂಥೀಯ ಗ್ಯಾಂಗುಗಳು ಇವೆಲ್ಲ ಗುತ್ತಿಗೆ ಹಿಡಿದು ಪಾಳೇಗಾರಿಕೆ ನಡೆಸಿ ಹತಾಶವಾಗಿವೆ. ಅಲ್ಲಿ ಕೊಲೆಗಳು ಆದವು, ಕೊಲೆಗಾರರು ಪತ್ತೆಯೇ ಆಗಲಿಲ್ಲ. ಅಲ್ಲರೀ ಲಾಲ್ ಬಹದೂರರು ಹಿಂದೆ ಸುಭಾಷರು, ಆ ಮೇಲೆ ಶ್ಯಾಂಪ್ರಸಾದರು ಬಲಿಯಾದುದು ಮಾಫಿಯಾಗಳಿಗೇ! ಇನ್ನಾರಿಗೆ ಏನು ಕಾದಿದೆಯೋ? ಇಂಥವು ಮಹಾಭಾರತ ಕಾಲದಲ್ಲೂ ಇದ್ದವು. ಮಹಾಭಾರತ ಯುದ್ಧವೇ ಬೇಕಾಯಿತು. ಪರೀಕ್ಷಿತನನ್ನು ಕೊಂದದ್ದು ಒಂದು ‘ನಾಗಾ ಲಾಬಿ’. ಅದರ ಕಥೆ ನನ್ನ ಹೊಸ ಕೃತಿಯಲ್ಲಿದೆ.

  (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts