ಹಗರಣಗಳಿಂದ ಕಾಂಗ್ರೆಸ್​ಗೆ ಇಕ್ಕಟ್ಟು

ಬೆಂಗಳೂರು: ವಕ್ಪ್ ಆಸ್ತಿ ಗೋಲ್​ವಾಲ್, ಅಮಾನತ್ ಬ್ಯಾಂಕ್ ಅವ್ಯವಹಾರ, ಆಂಬಿಡೆಂಟ್ ವಂಚನೆ, ಈಗ ಐಎಂಎ ಜ್ಯುವೆಲರ್ಸ್ ಹಗರಣದಲ್ಲಿ ಒಂದು ಸಾಮ್ಯತೆಯಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ಕೈ ನಾಯಕರ ಹೆಸರು ಕೇಳಿ ಬರುತ್ತಿದ್ದರೂ ಹೈಕಮಾಂಡ್ ಮೌನದ ಬಗ್ಗೆ ಪ್ರಶ್ನೆಗಳೆದ್ದಿವೆ.

ಈ ಪ್ರಮುಖ ಹಗರಣಗಳಲ್ಲಿ ವಂಚನೆಗೊಳಗಾದವರು, ಹಣ ಕಳೆದುಕೊಂಡವರಲ್ಲಿ ಶೇ.99.9 ಮಂದಿ ಬಡ ಮತ್ತು ಸಾಮಾನ್ಯ ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ ಎಂಬುದು ಒಂದಂಶವಾದರೆ, ಇಷ್ಟೂ ಪ್ರಕರಣದಲ್ಲಿ ಒಂದಿಲ್ಲೊಂದು ರೀತಿ ಪರದೆ ಹಿಂದೆ ಮುಂದೆ ಇರುವವರು ಒಂದೇ ಪಕ್ಷಕ್ಕೆ ಸೇರಿದವರಾಗಿದ್ದಾರೆ.

ಈ ಪ್ರಕರಣಗಳಲ್ಲೆಲ್ಲ ಆರೋಪ ಹೊತ್ತವರು ಅಥವಾ ಆರೋಪಿಗಳ ಬೆನ್ನಿಗೆ ನಿಂತವರು ತಮ್ಮ ನಾಯಕರು ಎಂಬುದು ದುರಂತ ಸಂಗತಿ ಎಂದು ಕಾಂಗ್ರೆಸ್​ಗೆ ಸೇರಿದ ಜನಪ್ರತಿನಿಧಿಯೊಬ್ಬರು ಮಂಗಳವಾರ ವಿಜಯವಾಣಿಯೊಂದಿಗೆ ಅಳಲು ತೋಡಿಕೊಂಡರು.

ನಮ್ಮವರೇ ನಮ್ಮ ಸಮುದಾಯಕ್ಕೆ ಮುಳುವಾಗುತ್ತಿದ್ದಾರೆ. ಜನಪ್ರತಿನಿಧಿಯಾಗಿ ಈ ಪ್ರಕರಣಕ್ಕೆಲ್ಲ ನಾವೇ ಹೊಣೆ. ಕೆಲವೊಮ್ಮೆ ವಿಷಯ ಮುಂಚಿತವಾಗಿ ಗೊತ್ತಿದ್ದರೂ ಹೇಳುವ ಸ್ಥಿತಿಯಲ್ಲಿರುವುದಿಲ್ಲ ಎಂದು ಮನದಾಳದ ಮಾತನ್ನು ಹೇಳಿದರು.

ಎರಡು ದಶಕದ ಹಿಂದೆ ಅಮಾನತ್ ಬ್ಯಾಂಕ್​ನಲ್ಲಿ ನಡೆದ 300 ಕೋಟಿ ರೂ. ಅವ್ಯವಹಾರದಲ್ಲಿ ಯಾರಿದ್ದರೆಂಬುದು ಸಮುದಾಯಕ್ಕೆ ಗೊತ್ತಿದೆ. ಹಲವು ಸಾವಿರ ಕೋಟಿ ರೂ. ವಕ್ಪ್ ಆಸ್ತಿ ವಂಚಿಸಿ ಇಡೀ ಸಮುದಾಯಕ್ಕೆ ಮೋಸ ಮಾಡಿದ್ದವರು ಯಾರ್ಯಾರು ಎಂಬುದೂ ಗೊತ್ತಿದೆ. ಆಂಬಿಡೆಂಟ್​ನಲ್ಲಿ 940 ಕೋಟಿ ರೂ.ಗಳನ್ನು ಜನ ಕಳೆದುಕೊಂಡರು. ಇದೀಗ ಐಎಂಎನಲ್ಲಿ ಅದೆಷ್ಟು ಸಾವಿರ ಕೋಟಿ ರೂ. ಮೋಸವಾಗಿದೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಮಾನತ್ ಬ್ಯಾಂಕ್​ನಲ್ಲಿ ವಂಚನೆಗೊಳಗಾದವರಿಗೆ ಈವರೆಗೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಕ್ಕಿಲ್ಲ. ಐಎಂಎ ಪ್ರಕರಣದಲ್ಲೂ ನ್ಯಾಯ ಸಿಗುವುದು ಯಾವಾಗಲೋ ದೇವರೇ ಬಲ್ಲ ಎಂದು ಅಭಿಪ್ರಾಯಪಟ್ಟರು. ಜತೆಗೆ ಇದು ಖಂಡಿತ ನಮ್ಮ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂದರು.

ಸಣ್ಣಪುಟ್ಟ ವ್ಯಾಪಾರ ಮಾಡಿ ಕೂಡಿಟ್ಟ ಹಣ ಕಳೆದುಕೊಂಡ ಸಮುದಾಯದ ಜನರಿಗೆ ಯಾರು ಮೋಸಗಾರರು ಎಂಬುದರ

ಬಗ್ಗೆ ಸ್ಪಷ್ಟ ಅರಿವಿದೆ. ಇವರೆಲ್ಲ, ಒಂದೇ ಪಕ್ಷಕ್ಕೆ ಸೇರಿದವರು ಎಂಬುದು ಅವರ ಮನಸ್ಸಿನಲ್ಲಿ ಉಳಿದರೆ ಪಕ್ಷಕ್ಕೆ ಖಂಡಿತ ಹಾನಿಯಾಗಲಿದೆ. ಪಕ್ಷ ಕೂಡ ಇಂಥ ಪ್ರಕರಣ ಬಗ್ಗೆ ಹೆಚ್ಚು ಪಾರದರ್ಶಕವಾಗಿ ನಿಲುವು ಕೈಗೊಳ್ಳಲಾಗಲ್ಲ ಎಂಬ ಆತಂಕ ಇದ್ದೇ ಇದೆ ಎಂದರು.

ಮುಗುಮ್ಮಾದ ನಾಯಕತ್ವ

ನಮ್ಮ ಪಕ್ಷದ ನಾಯಕರೇ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಬೆಂಬಲಕ್ಕೆ ನಿಂತಿದ್ದರೂ ವರಿಷ್ಠರು ಗಮನ ಹರಿಸುತ್ತಿಲ್ಲ. ನಾಯಕತ್ವ ಮೌನವಾಗಿರುವುದು ಸಹ ನಮಗೆ ಇಕ್ಕಟ್ಟು ಸೃಷ್ಟಿಸಿದೆ ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *