More

    ಜನಜೀವನ ಹೈರಾಣಾಗಿಸಿದ ಜಲಮಂಡಳಿ; ಕೋರಮಂಗಲದಲ್ಲಿ ಕಾಮಗಾರಿ ವೇಳೆ ತುಂಡಾದ ವಿದ್ಯುತ್ ತಂತಿ, ನೀರಿನ ಕೊಳವೆ 

    ಬೆಂಗಳೂರು:  ಕೋರಮಂಗಲದ ಆರನೇ ಬ್ಲಾಕ್​ನಲ್ಲಿ ಜಲಮಂಡಳಿ ನಡೆಸುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ಹಲವು ಸಮಸ್ಯೆಗಳು ಎದುರಾಗಿದೆ. ಒಳಚರಂಡಿ ಕಾಮಗಾರಿಯಿಂದಾಗಿ ಹಲವು ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕಗಳು ಕಡಿತಗೊಂಡು ಜನಜೀವನ ದುಸ್ತರವಾಗಿದೆ.

    ಕೋರಮಂಗಲ 5ನೇ ಬ್ಲಾಕ್​ನಲ್ಲಿರುವ ಜ್ಯೋತಿ ನಿವಾಸ್ ಕಾಲೇಜಿನ ಬಳಿ ಒಳಚರಂಡಿಯಲ್ಲಿ ಕಾಣಿಸಿಕೊಂಡ ಸಮಸ್ಯೆ ಸರಿಪಡಿಸಲು ಜಲಮಂಡಳಿ ಜ್ಯೋತಿ ನಿವಾಸ್ ಕಾಲೇಜು ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಸ ಪೈಪ್​ಲೈನ್ ಅಳವಡಿಸುತ್ತಿದೆ. ಬೇರೆ ಮಾರ್ಗವಿದ್ದರೂ ಅದನ್ನು ಬಳಸದೆ ವಾಹನ ಸಂಚಾರ ಹೆಚ್ಚಾಗಿರುವ 17ಇ ಮುಖ್ಯರಸ್ತೆ ಮೂಲಕವೇ ಪೈಪ್ ಅಳವಡಿಕೆ ಮಾಡಲು ಕಳೆದ ತಿಂಗಳು ಮುಂದಾಗಿತ್ತು. ಈ ಬಗ್ಗೆ ವಿಜಯವಾಣಿ ವರದಿ ಮಾಡಿದಾಗ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾಮಗಾರಿ ನಡೆಸುವುದಾಗಿ ಜಲಮಂಡಳಿ ಅಧಿಕಾರಿಗಳು ಭರವಸೆ ನೀಡಿದ್ದರು.

    ಸಂಪರ್ಕ ಕಡಿತವಾಗಿದ್ದೇ ಹೆಚ್ಚು: ಒಳಚರಂಡಿ ಸಮಸ್ಯೆ ಪರಿಹಾರ ಆಗುವುದಕ್ಕಿಂತಲೂ ಬಡಾವಣೆಯಲ್ಲಿ ವಿವಿಧ ಸಂಪರ್ಕಗಳು ಕಳೆದು ಹೋಗಿದ್ದೇ ಹೆಚ್ಚು. ಬಡಾವಣೆಯ ವಿವಿಧೆಡೆ ಜೆಸಿಬಿಯಿಂದ ಭೂಮಿ ಅಗೆಯುವಾಗ ವಿದ್ಯುತ್ ತಂತಿಗಳು ತುಂಡಾಗಿವೆ. ಇದನ್ನು ದುರಸ್ತಿಗೊಳಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗುವ ವೇಳೆಗೆ ಸ್ಥಳೀಯರು ವಿದ್ಯುತ್ ಇಲ್ಲದೆ 3-4 ದಿನ ಪರಿತಪಿಸಿದ್ದರು.

    40 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡಿರುವ ಜನರು ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಆದರೆ ಈಗ ನಡೆಯುತ್ತಿರುವ ಕಾಮಗಾರಿಯಿಂದ ಪೈಪ್​ಗಳು ಸಡಿಲಗೊಂಡಿವೆ. ಮಣ್ಣು ಕುಸಿದು ಪೈಪ್​ಗಳು ಒಂದೊಂದಾಗಿ ಒಡೆಯಲಾರಂಭಿಸಿವೆ. ಹೀಗಾಗಿ ಕೆಲವು ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದರೆ, ಇನ್ನು ಕೆಲವು ಮನೆಗಳಿಗೆ ನೀರಿನ ಸಂಪರ್ಕವೇ ಸಂಪೂರ್ಣ ಕಡಿದು ಹೋಗಿದೆ. ಅದನ್ನು ದುರಸ್ತಿಪಡಿಸಿಕೊಂಡು, ನೀರು ಪಡೆದುಕೊಳ್ಳುವ ಅನಿವಾರ್ಯತೆ ಅವರೆಲ್ಲರದ್ದಾಗಿದೆ. ಹೀಗಾಗಿ ಸ್ಥಳೀಯರು ಜಲಮಂಡಳಿಯ ಕಾಮಗಾರಿಗೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ.

    ವಾಹನ ಸಂಚಾರಕ್ಕೂ ತೊಂದರೆ

    ಒಡೆದ ಪೈಪ್, ತುಂಡಾದ ವಿದ್ಯುತ್ ತಂತಿಯನ್ನು ದುರಸ್ತಿಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ, ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಬೇರೆ ಸಣ್ಣ ಸಣ್ಣ ರಸ್ತೆ ಮೂಲಕ ಸಂಚರಿಸುತ್ತಿವೆ. ಹೀಗಾಗಿ ಆ ರಸ್ತೆಗಳಲ್ಲೆಲ್ಲ ವಾಹನದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಸ್ಥಳೀಯರ ವಾಹನ ನಿಲುಗಡೆಗೂ ತೊಂದರೆ ಆಗುತ್ತಿರುವುದಾಗಿ 17ಇ ಮುಖ್ಯರಸ್ತೆಯ ನಿವಾಸಿಯೊಬ್ಬರು ದೂರಿದ್ದಾರೆ.

    ಪರಿಸರ ಧೂಳುಮಯ

    ಕಾಮಗಾರಿಯಿಂದಾಗಿ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳು, ಎರಡು ಬೃಹತ್ ಅಪಾರ್ಟ್​ವೆುಂಟ್​ಗಳು, ಸರ್ವೀಸ್ ಅಪಾರ್ಟ್​ವೆುಂಟ್, ಒಂದು ತ್ರೀ ಸ್ಟಾರ್ ಹೋಟೆಲ್, ನಾಲ್ಕೈದು ಮಹಿಳಾ ಪಿಜಿಗಳು, ಆಸ್ಪತ್ರೆ, ಮಾಂಟೆಸರಿ ಶಾಲೆಗೆ ಹೋಗಲು ತೀವ್ರ ಸಮಸ್ಯೆಯಾಗಿದೆ. ಅಗೆದಿರುವ ಜಾಗವನ್ನು ಮಣ್ಣಿನಿಂದ ಮುಚ್ಚಲಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಧೂಳಿನ ಸಮಸ್ಯೆ ಉಂಟಾಗಿದೆ. ತಕ್ಷಣವೇ ಡಾಂಬರು ಹಾಕಿ ಅದನ್ನು ಸರಿಪಡಿಸಬೇಕಿದೆ. ಆದರೆ ಹಳೆಯ ಪೈಪ್​ಗಳು ಒಡೆಯುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಡಾಂಬರು ಹಾಕಿದರೆ ಶೀಘ್ರದಲ್ಲೆ ಕಿತ್ತುಬರುವ ಅಪಾಯವೂ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

    ಫೆಬ್ರವರಿಗೆ ಕಾಮಗಾರಿ ಪೂರ್ಣ?

    ಕೋರಮಂಗಲದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಂದ ಆಗುತ್ತಿರುವ ಸಮಸ್ಯೆಯನ್ನು ಸ್ಥಳೀಯರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಎಲ್ಲ ಕಾಮಗಾರಿಗಳನ್ನು ಮುಗಿಸಲು ಏಪ್ರಿಲ್​ವರೆಗೂ ಜಲಮಂಡಳಿ ಸಮಯಾವಕಾಶ ಕೇಳಿತ್ತು. ಆದರೆ ಸ್ಥಳೀಯರ ಆಕ್ರೋಶ ಮತ್ತು ಒತ್ತಡದಿಂದ ಕಾಮಗಾರಿಗಳನ್ನು ಚುರುಕುಗೊಳಿಸಿ, ಫೆಬ್ರವರಿ ಅಂತ್ಯದೊಳಗೆ ಮುಗಿಸುವಂತೆ ಸರ್ಕಾರ ಗಡುವು ನಿಗದಿಪಡಿಸಿದೆ. ನಾವು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೆಲವೆಡೆ ಸಮಸ್ಯೆ ಉಂಟಾಗಿದೆ. ಸಮಸ್ಯೆ ಕಂಡುಬರುತ್ತಲೇ ಅದನ್ನು ದುರಸ್ತಿಗೊಳಿಸಲಾಗುತ್ತಿದೆ. 17ಇ ಮುಖ್ಯರಸ್ತೆಯ ಕಾಮಗಾರಿ ಮುಗಿದಿದ್ದು, ಉಳಿದ ಸಮಸ್ಯೆ ಸರಿಪಡಿಸಿ ಇನ್ನೊಂದು ವಾರದಲ್ಲಿ ಡಾಂಬರು ಹಾಕಲಾಗುವುದು. ಉಳಿದಂತೆ ಫೆಬ್ರವರಿ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ತಿಯಾಗಿ ಮುಗಿಸಲಾಗುವುದು ಎಂದು ಜಲಮಂಡಳಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts