ಕಲ್ಪವೃಕ್ಷಕ್ಕೆ ಪರಿಹಾರದ ಪೆಟ್ಟು

ಅರಸೀಕೆರೆ: ಸತತ ಬರದ ಸುಳಿಗೆ ಸಿಲುಕಿ ತತ್ತರಿಸುತ್ತಿರುವ ತೆಂಗು ಬೆಳೆಗಾರರ ನೆರವಿಗೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ಧಾವಿಸಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ರೈತ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತೆಂಗು ಬೆಳೆ ಹಾನಿ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಇದಕ್ಕೆ ಪುಷ್ಟಿ ನೀಡಿದೆ. ಕಳೆದೆರಡು ದಶಕಗಳಿಂದ ನುಸಿರೋಗ, ರಸಸೋರುವಿಕೆ, ಅಣಬೆ ರೋಗ, ಮಳೆ ಹಾಗೂ ಅಂತರ್ಜಲದ ಕೊರತೆ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ತಾಲೂಕಿನಾದ್ಯಂತ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿದ್ದ 14 ಲಕ್ಷಕ್ಕೂ ಹೆಚ್ಚಿನ ತೆಂಗಿನ ಮರಗಳು ಸಂಪೂರ್ಣ ನೆಲಕಚ್ಚಿವೆ. ಇನ್ನು ಐದಾರು ಸಾವಿರ ಹೆಕ್ಟೇರ್‌ನಲ್ಲಿ ಸಹಸ್ರಾರು ಮರಗಳು ಭಾಗಶಃ ವಿನಾಶದ ಅಂಚಿಗೆ ತಲುಪಿವೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗಾರನ ಪರ ನಿಲುವು ಪ್ರದರ್ಶಿಸಬೇಕಿದ್ದ ಸರ್ಕಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಪುನಶ್ಚೇತನದ ಹೆಸರಿನಲ್ಲಿ ಪ್ರತಿ ಮರಕ್ಕೆ ಕೇವಲ 400 ರೂ. ಹಾಗೂ ಹೆಕ್ಟೇರ್‌ಗೆ 18 ಸಾವಿರ ನಿಗದಿಪಡಿಸಿರುವುದು ಬೆಳೆಗಾರರನ್ನು ಕಂಗೆಡಿಸಿದೆ. ತೆಂಗು ಬೆಳೆಗಾರರ ನೆರವಿಗೆ ಬಾರದ ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಳೆದ ಫೆಬ್ರವರಿಯಲ್ಲಿ ನಗರ ಹೊರವಲಯದಲ್ಲಿರುವ ಗೀಜಿಹಳ್ಳಿ ತೋಟದಲ್ಲಿ ಅಹೋರಾತ್ರಿ ನಡೆಸಿದ ಧರಣಿ ಸತ್ಯಾಗ್ರಹ ಠುಸ್ ಎಂದಿದೆ.

ಜೆಡಿಎಸ್‌ಗೆ ಅಧಿಕಾರ ದೊರೆತರೆ ಕೇರಳ ಮಾದರಿಯಲ್ಲಿ ಪರಿಹಾರ ನೀಡುವ ಭರವಸೆ ಹುಸಿಯಾಗಿದ್ದು, ಹೆಚ್ಚಿನ ಪರಿಹಾರ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಇದೀಗ ಎಚ್.ಡಿ.ಕುಮಾರಸ್ವಾಮಿ ತೆಗೆದುಕೊಂಡಿರುವ ನಿಲುವಿನಿಂದ ಭ್ರಮನಿರಸನಗೊಂಡಿದ್ದಾರೆ. ಕೊಟ್ಟಮಾತಿಗೆ ತಪ್ಪಿ ನಡೆದರು ಎನ್ನುವ ಆರೋಪಕ್ಕೂ ಗುರಿಯಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಜೆಡಿಎಸ್ ವರಿಷ್ಠರ ಮಾತುಗಳೇ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಮುಳುವಾಗಲಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ತೆಂಗು ಬೆಳೆ ಪರಿಹಾರ ವಿಷಯದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡೆಸಿದ ಹೋರಾಟ ರಾಜಕೀಯ ಗಿಮಿಕ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂಸದರು ಹಾಗೂ ಶಾಸಕರು ಇನ್ನಾದರೂ ರೈತ ಪರ ಕಾಳಜಿ ಪ್ರದರ್ಶಿಸಿ ಬೆಳೆಗಾರರಿಗೆ ನ್ಯಾಯ ಒದಗಿಸಲಿ.
ಜಿವಿಟಿ ಬಸವರಾಜ್ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ

ಚುನಾವಣೆ ಬಂದಾಗ ತೆಂಗಿನ ಮರ ತಬ್ಬಿ ಅಳುವವರಿಂದ ಪರಿಹಾರ ದೊರೆಯದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಳಿ ಬಿದ್ದ ಮರ ತೆರವುಗೊಳಿಸಲು 400 ರೂ. ನೀಡಲು ಮುಂದಾಗಿರುವುದು ಸರಿಯಲ್ಲ. ಕೇರಳ ಮಾದರಿಯಲ್ಲಿ ಪರಿಹಾರ ಘೋಷಣೆ ಮಾಡದಿದ್ದರೆ ಹೋರಾಟ ಅನಿವಾರ್ಯ.
ಕನಕಂಚೇನಳ್ಳಿ ಪ್ರಸನ್ನಕುಮಾರ್ ರೈತ ಸಂಘದ ಜಿಲ್ಲಾ ಸಂಚಾಲಕ

ತಾಲೂಕಿನಾದ್ಯಂತ 8 ಸಾವಿರ ಹೆಕ್ಟೇರ್‌ನಲ್ಲಿ 8 ಲಕ್ಷಕ್ಕೂ ಹೆಚ್ಚಿನ ಮರಗಳು ಸುಳಿಬಿದ್ದು ಹೋಗಿವೆ. ಇನ್ನುಳಿದ 5 ಸಾವಿರ ಹೆಕ್ಟೇರ್‌ನಲ್ಲಿ 5 ಲಕ್ಷ ಮರಗಳು ಭಾಗಶಃ ಹಾನಿಗೀಡಾಗಿವೆ. ಈ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ನೀಡಿದ್ದು, ಪರಿಹಾರ ಘೋಷಣೆ ಸಂಬಂಧ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಶಿವಕುಮಾರ್ ತೋಟಗಾರಿಕಾ ನಿರ್ದೇಶಕ, ಅರಸೀಕೆರೆ