More

  ಕರ್ನಾಟಕದ ವ್ಯಾಪಾರಸ್ಥರಿಗೆ ಗೋವಾದಲ್ಲಿ ಕಿರಿಕಿರಿ ತೀವ್ರ

  ಕಾರವಾರ: ‘ಐ ಆಮ್ ರೆವಲ್ಯೂಷನರಿ ಗೋವನ್’ ಎಂಬ ಹೆಸರಿನಲ್ಲಿ ಗೋವಾದಲ್ಲಿ ಪ್ರಾರಂಭವಾಗಿರುವ ಆಂದೋಲನ ಅಲ್ಲಿ ನೆಲೆಸಿದ ಕರ್ನಾಟಕದ ಬಡ ವ್ಯಾಪಾರಸ್ಥರ ಸಂಕಟಕ್ಕೆ ಕಾರಣವಾಗಿದೆ.

  ನಾಲ್ಕೈದು ತಿಂಗಳಿಂದ ಈ ಆಂದೋಲನ ಗೋವಾದೆಲ್ಲೆಡೆ ನಡೆದಿದೆ. ಬೀದಿ ಬದಿಗಳಲ್ಲಿ ಮೀನು, ಹಣ್ಣು ತರಕಾರಿ ವ್ಯಾಪಾರ ಮಾಡುವವರು, ರಸ್ತೆ ಬದಿ ಮಲಗಿರುವ ಕಾರ್ವಿುಕರ ವಿಡಿಯೋ ಮಾಡಿ, ‘ನೀವು ವ್ಯಾಪಾರ ವಹಿವಾಟು ನಡೆಸಲು ಸ್ಥಳೀಯ ಪಂಚಾಯಿತಿ ಅನುಮತಿ ಪಡೆದಿದ್ದೀರಾ’ ಎಂದು ಈ ಸಂಘಟನೆಯ ಗುಂಪು ಪ್ರಶ್ನಿಸುತ್ತಿದೆ. ಅಲ್ಲದೆ, ಪೊಲೀಸ್ ಠಾಣೆಗಳಿಗೆ ಅವರನ್ನು ಕಳಿಸಿದ್ದೂ ಇದೆ.

  ಎಲ್ಲ ಸನ್ನಿವೇಶಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಘಾಟಿ ಜನ ಇಲ್ಲಿ ಬಂದು ಕಳ್ಳತನ, ಕೊಲೆ, ಅತ್ಯಾಚಾರ ನಡೆಸುತ್ತೀರಿ ಎಂದು ನಿಂದಿಸಲಾಗುತ್ತಿದೆ. ‘ಐ ಆಮ್ ರೆವಲ್ಯೂಷನರಿ ಗೋವನ್’ ಎಂಬ ಫೇಸ್​ಬುಕ್ ಪೇಜ್​ನಲ್ಲಿ ‘ಘಾಟಿಚೋ ಸರ್ಕಾರ್’ ಎಂಬ ಹ್ಯಾಷ್ ಟ್ಯಾಗ್​ನೊಂದಿಗೆ ಪ್ರಕಟಿಸಲಾಗುತ್ತಿದೆ.

  ಗೋವಾದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ದಿಂದ ಆಗಮಿಸಿದವರನ್ನು ಘಾಟಿ ಜನ ಎಂದು ಕರೆಯುತ್ತಾರೆ. ಕೊಂಕಣಿಯಲ್ಲಿ ಘಾಟಿಚೋ ಸರ್ಕಾರ್ ಎಂದರೆ ಘಾಟಿಗಳ ದರ್ಬಾರ್ ಎಂದರ್ಥ.

  ಆಂದೋಲನದ ಉದ್ದೇಶವೇನು?: ಹೊರ ರಾಜ್ಯದವರು ಬಂದು ಗೋವಾದವರ ಅನ್ನ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಕೂಗು ಅಲ್ಲಿನವರದ್ದು. ಇದರಿಂದ ಗೋವಾ ಮೂಲದವರಿಗೆ ಉದ್ಯೋಗ, ಸ್ವಂತ ಸೂರು ಕಲ್ಪಿಸಬೇಕು ಎಂಬ ಹೋರಾಟವನ್ನು ಈ ಸಂಘಟನೆ ನಡೆಸಿದೆ.

  ಗೋವಾ ಸಾಕಷ್ಟು ವಿಷಯಗಳಲ್ಲಿ ಕರ್ನಾಟಕವನ್ನು ಆಶ್ರಯಿಸಿದೆ. ಗೋವಾ ಪಟ್ಟಣಗಳು ಬೆಳೆಯಲು ಕನ್ನಡಿಗರೇ ಕಾರಣ. ಆದರೆ, ಅಲ್ಲಿನ ಜನ ಅದನ್ನು ಮರೆತಿದ್ದಾರೆ. ಭಾರತದ ಯಾವುದೇ ಮೂಲೆಯಲ್ಲಿ ನೆಲೆಸುವ, ಉದ್ಯೋಗ ಮಾಡುವ ಮೂಲ ಹಕ್ಕನ್ನು ದೇಶದ ಜನ ಹೊಂದಿದ್ದಾರೆ. ಗೋವಾ ಕೂಡ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿದೆ ಎಂಬುದನ್ನು ಮರೆಯಬಾರದು. ಅಕ್ರಮ ತಡೆಯುವುದರಲ್ಲಿ ತಪ್ಪಿಲ್ಲ. ಆದರೆ, ಆ ನೆಪದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ.

  | ಭಾಸ್ಕರ ಪಟಗಾರ ಕರವೇ ಜಿಲ್ಲಾಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts