ಆಧಾರ್ ನೋಂದಣಿಗೆ ತಪ್ಪದ ಅಲೆದಾಟ

ಹಾನಗಲ್ಲ: ತಾಲೂಕಿನಾದ್ಯಂತ ಬಹುತೇಕ ಆಧಾರ್ ನೋಂದಣಿ ಕೇಂದ್ರಗಳು ಸ್ಥಗಿತಗೊಂಡಿವೆ. ಆದರೆ, ಪಟ್ಟಣದ ಎಸ್​ಬಿಐ ಶಾಖೆಯಲ್ಲಿ ಮಾತ್ರ ಆಧಾರ್ ಕಾರ್ಡ್ ವಿತರಿಸಲಾಗುತ್ತಿದ್ದು, ಜನ ಮುಗಿಬೀಳುತ್ತಿದ್ದಾರೆ.

ಎಸ್​ಬಿಐ ಶಾಖೆಯಲ್ಲಿ ಪ್ರತಿದಿನ 25 ರಿಂದ 30 ಜನರ ಆಧಾರ್ ನೋಂದಣಿ ಮಾಡಲಾಗುತ್ತಿದೆ. ಆದರೆ, ಸರದಿಯಲ್ಲಿ ನೂರಾರು ಜನರಿರುವುದರಿಂದ ಸಮಸ್ಯೆ ಎದುರಾಗುತ್ತಿದೆ. ಬೇರೆ ಯಾವುದೇ ಬ್ಯಾಂಕ್​ಗಳಲ್ಲಿ ಆಧಾರ್ ನೋಂದಣಿ ವ್ಯವಸ್ಥೆ ಕಲ್ಪಿಸದಿರುವುದು ತೊಂದರೆಗೆ ಕಾರಣವಾಗಿದೆ.

ಹಾಸಿಗೆ ಸಮೇತ ಆಗಮನ: ಆಧಾರ್ ನೋಂದಣಿಗಾಗಿ ಜನ ರಾತ್ರಿಯೇ ಎಸ್​ಬಿಐ ಬ್ಯಾಂಕ್​ಗೆ ಊಟ, ಹಾಸಿಗೆಯೊಂದಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಸುತ್ತಮುತ್ತಲಿನ ಮನೆಗಳವರಿಗೆ ನಿತ್ಯವೂ ಈ ಸದ್ದು-ಗದ್ದಲ ಸಮಸ್ಯೆ ಉಂಟು ಮಾಡುತ್ತಿದೆ. ಕಳೆದ 8 ತಿಂಗಳಿಂದಲೂ ಇದೇ ಸಮಸ್ಯೆ ಉಂಟಾಗಿದೆ.

ಸರ್ಕಾರದ ವಿವಿಧ ಉದ್ದೇಶಗಳಿಗಾಗಿ ಆಧಾರ್ ಸಂಖ್ಯೆ ಅಗತ್ಯವಿದ್ದು, ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನವಾಗಿದೆ. ಅಷ್ಟರೊಳಗಾಗಿ ಆಧಾರ್ ಸಂಖ್ಯೆ ಸಲ್ಲಿಸಬೇಕಾಗಿದೆ. ಅದಕ್ಕಾಗಿ ಪಾಲಕರು ಈ ಸಂಕಷ್ಟ ಅನುಭವಿಸುವಂತಾಗಿದೆ. ಆಧಾರ್ ಸಂಖ್ಯೆ ದೊರೆಯದಿದ್ದರೆ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ಹೊರಗುಳಿಯುವ ಆತಂಕವುಂಟಾಗಿದೆ.

ಬ್ಯಾಂಕ್ ಕಾರ್ಯನಿರ್ವಹಿಸುವ ವೇಳೆ ಮಾತ್ರ ಆಧಾರ್ ನೋಂದಣಿ ಮಾಡಲಾಗುತ್ತಿದೆ. ಇದರೊಂದಿಗೆ ಬ್ಯಾಂಕ್​ನ ವ್ಯವಹಾರಗಳಿಗಾಗಿ ಬರುವ ಗ್ರಾಹಕರಿಗೂ ಇದರಿಂದ ಸಮಸ್ಯೆ ಎದುರಾಗಿದೆ. ಮಹಿಳೆಯರು, ಮಕ್ಕಳು ಸರದಿಯಲ್ಲಿ ರಾತ್ರಿಯಿಡೀ ಕಾಯುವಂತಾಗಿರುವುದು ಸರ್ಕಾರಿ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ.

ಸರ್ಕಾರದ ಎಲ್ಲ ಉದ್ಯೋಗ-ವ್ಯವಹಾರ, ಸೌಲಭ್ಯಗಳಿಗೂ ಆಧಾರ್ ಸಂಖ್ಯೆ ಅಗತ್ಯವಿದೆ. ಆದರೆ, ತಾಲೂಕಿನಲ್ಲಿ ಇನ್ನೂ ಆಧಾರ್ ನೋಂದಣಿ ಪೂರ್ಣಗೊಂಡಿಲ್ಲ. ತಾಲೂಕು ಆಡಳಿತ ಇದಕ್ಕಾಗಿ ವ್ಯವಸ್ಥೆಗೊಳಿಸದಿರುವುದೆ ಸಮಸ್ಯೆಯಾಗಿದೆ. ತಾಲೂಕಿನ ಎಲ್ಲ ಜನರೂ ಎಸ್​ಬಿಐ ಒಂದರಲ್ಲೇ ಒದ್ದಾಡುವಂತಾಗಿದೆ.

| ದಾವೂದ್​ಖಾನ್ ಹೊಂಡದ ಕಂಚಿನೆಗಳೂರ ಗ್ರಾಮಸ್ಥ