ಜಯಲಲಿತಾ ಸಾವಿನ ವರದಿ ಮಾಡದಂತೆ ತನಿಖಾ ಆಯೋಗದಿಂದ ನಿರ್ಬಂಧ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನೂ ಮಾಧ್ಯಮಗಳು ವರದಿ ಮಾಡುವಂತಿಲ್ಲ ಎಂದು ಸಾವಿನ ತನಿಖೆ ನಡೆಸುತ್ತಿರುವ ನ್ಯಾ. ಆರ್ಮುಗಸ್ವಾಮಿ ಆಯೋಗ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ.

ಸುಮಾರು ಎರಡೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲೇ ಇದ್ದ ಜಯಲಲಿತಾ ಅವರು, ಕೊನೆಗೂ ಬದುಕುಳಿದಿರಲಿಲ್ಲ. ಅವರ ಸಾವಿಗೆ ಸಂಬಂಧಿಸಿದಂತೆ ತಮಿಳುನಾಡಿನಾದ್ಯಂತ ಹಲವು ಊಹಾಪೋಹಗಳು, ಆರೋಪಗಳು ಈ ವರೆಗೆ ಕೇಳಿ ಬಂದಿವೆ. ಇದೇ ಹಿನ್ನೆಲೆಯಲ್ಲಿ ಸಾವಿನ ತನಿಖೆಗಾಗಿ ತಮಿಳುನಾಡು ಸರ್ಕಾರ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್ಮುಗಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ ಮಾಡಿದೆ. ಸಾವಿನ ತನಿಖೆ ನಡೆಸುತ್ತಿರುವ ಆಯೋಗ ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಿದ್ದು, ವರದಿಗಳಿಗೆ ನಿರ್ಬಂಧ ಹೇರಿದೆ.

” ಜಯಲಲಿತಾ ಅವರ ಸಾವಿನ ಕುರಿತು ಯಾವುದೇ ವರದಿಗಳನ್ನು ಅನುಮತಿ ಇಲ್ಲದೇ ಪ್ರಕಟಿಸಿದರೆ, ಸಂಬಂಧಿಸಿದ ಮಾಧ್ಯಮ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಇದೇ ವೇಳೆ, ಆಯೋಗವು ಮಾಧ್ಯಮಗಳಿಗೆ ಕೋರಿಕೆಯೊಂದನ್ನು ಮುಂದಿಟ್ಟಿದೆ. ಜಯಾ ಸಾವಿಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆಗಳಿದ್ದರೆ ಆಯೋಗಕ್ಕೆ ಒದಗಿಸುವಂತೆಯೂ ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.

ಇದಕ್ಕೂ ಮೊದಲು, ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಸನ್​ ಟಿವಿ ನೆಟ್​ವರ್ಕ್​, ” ಜಯಲಲಿತಾ ಅವರ ಕುರಿತಂತೆ ಯಾವುದೇ ಖಾಸಗಿ ವಾಹಿನಿಗಳು, ಸರಣಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ತಡೆಯಬೇಕು,” ಎಂದು ಆಯೋಗಕ್ಕೆ ಮನವಿ ಮಾಡಿಕೊಂಡಿತ್ತು.

2016ರ ಸೆಪ್ಟೆಂಬರ್​ 22 ರಂದು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು 75 ದಿನಗಳ ನಂತರ ಡಿ.5ರಂದು ಕೊನೆಯುಸಿರೆಳೆದಿದ್ದರು.