ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ: ಪ್ರಧಾನಿ ಬಗ್ಗೆ ದ್ವೇಷವಿಲ್ಲ ಎಂದ ರಾಹುಲ್

ಪುಣೆ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳು ಕೇಳಿಬಂದಿದ್ದಕ್ಕೆ ರಾಹುಲ್​ ಕೂಲ್​ ಆಗಿಯೇ ಉತ್ತರ ನೀಡಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ ನಡೆದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್​ ಮಾತನಾಡುತ್ತಿದ್ದ ವೇಳೆ ಕೆಲವು ವಿದ್ಯಾರ್ಥಿಗಳು ಮೋದಿ… ಮೋದಿ ಎಂದು ಘೋಷಣೆ ಕೂಗಲು ಶುರು ಮಾಡಿದರು. ಇದನ್ನು ಕೇಳಿಸಿಕೊಂಡ ರಾಹುಲ್​, ನನಗೆ ಪ್ರಧಾನಿ ಮೋದಿ ಸೇರಿದಂತೆ ಯಾರ ಮೇಲೆಯೂ ದ್ಷೇಷ ಇಲ್ಲ ಎಂದು ಕೂಲ್​ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ನನಗೆ ನರೇಂದ್ರ ಮೋದಿ ಮೇಲೆ ಕೋಪವೂ ಇಲ್ಲ ದ್ವೇಷವೂ ಇಲ್ಲ. ಆದರೆ, ಮೋದಿ ಅವರಿಗೆ ನನ್ನ ಮೇಲೆ ಕೋಪವಿದೆ ಎಂದಾಗ ಮತ್ತೆ ಮೋದಿ ಪರ ಘೋಷಣೆಗಳು ಕೇಳಿ ಬಂದವು. ಈ ವೇಳೆ ನನಗೆ ಯಾವುದೇ ತೊಂದರೆ ಇಲ್ಲ. ನಾನು ಕೂಡ ಪ್ರಧಾನಿಯನ್ನು ಇಷ್ಟಪಡುತ್ತೇನೆ ಎಂದು ನಯವಾಗಿಯೇ ಉತ್ತರಿಸಿದ್ದಾರೆ.

ಇದೇ ವೇಳೆ ರಾಹುಲ್​ ಗಾಂಧಿ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ನಿವಾರಣೆ, ನೋಟ್​ ಬ್ಯಾನ್​ನಿಂದಾದ ಸಮಸ್ಯೆ ಹಾಗೂ ತಮ್ಮ ಪಕ್ಷ ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ನೀಡುವ ಭರವಸೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. (ಏಜೆನ್ಸೀಸ್​)